ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ವಿಧಿವಶ

ಬೆಂಗಳೂರು, ಫೆ.14: ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಇಂದು ಬೆಳಗ್ಗೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದ ಅವರು, ಬೆಂಗಳೂರಿನ ಸರಕಾರಿ ಕಲಾ-ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ಸಂದರ್ಭ ಸಮಾರಂಭದ ವೇದಿಕೆ ಏರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದ ಅವರು, ಪ್ರಜ್ಞೆ ಕಳೆದುಕೊಂಡರೆನ್ನಲಾಗಿದೆ. ಸಕಾಲದಲ್ಲಿ ಆ್ಯಂಬುಲೆನ್ಸ್ ಆಗಮಿಸದಿದ್ದಾಗ ಸರಕಾರಿ ಕಾರಿನಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣವೇ ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಸ್ಪತ್ರೆಯಲ್ಲಿ ಅವರು ಮೃತಪಟ್ಟರೆಂದು ಅಲ್ಲಿನ ವೈದ್ಯಾಧಿಕಾರಿಗಳು ಘೋಷಿಸಿದರೆಂದು ಮೂಲಗಳು ತಿಳಿಸಿವೆ.
ಇಂದು ಮಧ್ಯಾಹ್ನ ಮೂರು ಗಂಟೆಗೆ ಡಾ.ವಿ.ಎಸ್. ಆಚಾರ್ಯರ ಪಾರ್ಥೀವ ಶರೀರವನ್ನು ಮಂಗಳೂರಿನ ಬಜಪೆ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ತರಲಾಗುತ್ತಿದ್ದು, ಬಳಿಕ ಹುಟ್ಟೂರಾದ ಉಡುಪಿಗೆ ರಸ್ತೆ ಮೂಲಕವಾಗಿ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುವುದು. ಮಣಿಪಾಲದ ರಜತಾದ್ರಿಯಲ್ಲಿರು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತಿದ್ದು, ರಾತ್ರಿ 10 ಗಂಟೆಗೆ ಬೀಡಿನಗುಡ್ಡೆ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಡಾ.ವಿ.ಎಸ್.ಆಚಾರ್ಯ ಪರಿಚಯ:
ಕಟ್ಟೆ ಶ್ರೀನಿವಾಸ್ ಹಾಗೂ ಕೃಷ್ಣವೇಣಿ ಅಮ್ಮ ದಂಪತಿಯ ಪುತ್ರರಾಗಿ ಉಡುಪಿಯಲ್ಲಿ 1939ರಲ್ಲಿ ಡಾ.ವೇದವ್ಯಾಸ ಶ್ರೀನಿವಾಸ ಆಚಾರ್ಯ ಜನಿಸಿದರು.
ಡಾ.ವಿ.ಎಸ್.ಆಚಾರ್ಯ ಎಂದೇ ಚಿರಪಚಿತರಾಗಿರುವ ಅವರು, ನೇರವಾಗಿ ಜನರಿಂದ ಆಯ್ಕೆಯಾಗಿ ಹೆಚ್ಚು ರಾಜಕೀಯ ನಡೆಸದಿದ್ದರೂ, ವಿಧಾನ ಪರಿಷತ್ ಸದಸ್ಯರಾಗಿ ಅನುಭವಿ ರಾಜಕಾರಣಿ ಎನಿಕೊಂಡರು. ಉಡುಪಿ ನಗರ ಸಭಾ ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯ ಆರಂಭಿಸಿದ ಈ ವೈದ್ಯ ನಾಲ್ಕು ದಶಕಗಳ ಸುದೀರ್ಘ ಅನುಭವ, ಪಕ್ಷ ನಿಷ್ಠೆ ಅವರನ್ನು ಬಿಜೆಪಿ ಪಕ್ಷದ ಹಿರಿಯ ರಾಜಕೀಯ ಧುರೀಣರನ್ನಾಗಿಸಿತ್ತು.
ಉಡುಪಿ ಹಾಗೂ ಕರಾವಳಿ ಭಾಗದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯವಾಗಿರುವ ಡಾ.ಆಚಾರ್ಯ, ವೃತ್ತಿಯಲ್ಲಿ ವೈದ್ಯರು. ಆದರೆ, ಪ್ರವೃತಿಯಲ್ಲಿ ರಾಜಕಾರಣಿ. ಮಣಿಪಾಲದ ಕೆಎಂಸಿಯಲ್ಲಿ 1965ರಲ್ಲಿ ಎಂಬಿಬಿಎಸ್ ಪದವಿ ಪಡೆದ ಡಾ.ಆಚಾರ್ಯ ವೈದ್ಯರಾಗಿ ಜನಪ್ರಿಯರಾದರೂ, 1967ರಲ್ಲಿ ಜನಸಂಘದ ಮೂಲಕ ರಾಜಕೀಯವನ್ನು ಪ್ರವೇಶಿಸಿದರು. 1968ರಲ್ಲಿ ಪಕ್ಷವನ್ನು ಉಡುಪಿ ನಗರ ಸಭೆಯಲ್ಲಿ ಅಧಿಕಾರಕ್ಕೇರುವಂತೆ ಮಾಡಿದ ಡಾ.ಆಚಾರ್ಯ, 28ರ ಕಿರು ಹರೆಯದಲ್ಲೇ ಉಡುಪಿ ನಗರ ಸಭೆಯ ಕಿರಿಯ ಅಧ್ಯಕ್ಷರೆನಿಸಿಕೊಂಡರು. ಅಂದು ಅವರು ತನ್ನ ಅಧಿಕಾರವಧಿಯಲ್ಲಿ ಕೈಗೆತ್ತಿಕೊಂಡ ಸ್ವರ್ಣ ಕುಡಿಯುವ ನೀರಿನ ಯೋಜನೆ ಉಡುಪಿ ನಗರಕ್ಕೆ ಈಗಲೂ ನೀರುಣಿಸುತ್ತಿದೆ.
ಇವರ ಅಧ್ಯಕ್ಷಾವಧಿಯಲ್ಲೇ ‘ತಲೆಯ ಮೇಲೆ ಮಲ ಹೊರುವ’ ಅನಿಷ್ಟ ಪದ್ಧತಿಯನ್ನು ದೇಶದಲ್ಲೇ ಮೊದಲ ಬಾರಿಗೆ ರದ್ದು ಪಡಿಸಿದ ಕೀರ್ತಿ ಉಡುಪಿ ನಗರ ಸಭೆಗೆ ದೊರಕಿತು. ಇದರೊಂದಿಗೆ ನೂತನ ನಗರಾಡಳಿತ ಕಚೇರಿ, ಭೂಗತ ಚರಂಡಿ ವ್ಯವಸ್ಥೆ, ನಗರದಲ್ಲಿ ಸುಧಾರಿತ ರಸ್ತೆ, ನಗರ ಯೋಜನಾ ಮಂಡಳಿ ರಚನೆ ಮುಂತಾದವು ಇದೇ ಅವಧಿಯಲ್ಲಿ ಜಾರಿಗೊಂಡವು.
ಎರಡು ಅವಧಿಗೆ ನಗರ ಸಭೆಗೆ ಆಯ್ಕೆಯಾದ ಡಾ.ಆಚಾರ್ಯ ಎಂಟು ವರ್ಷಗಳ ಕಾಲ ಉಡುಪಿ ನಗರ ಸಭೆಯ ಅಧ್ಯಕ್ಷರಾಗಿದ್ದರು. 1983ರ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ರಾಜ್ಯ ವಿಧಾನ ಸಭೆಯನ್ನು ಪ್ರವೇಶಿಸಿದ ಆಚಾರ್ಯ ವಿಧಾನ ಮಂಡಲದಲ್ಲಿ ಪಕ್ಷದ ಶಾಸಕಾಂಗ ನಾಯಕರಾಗಿದ್ದರು.
ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ನಡೆಸಿದ ರಾಮಕೃಷ್ಣ ಹೆಗಡೆ ನೇತೃತ್ವದ ರಾಜ್ಯದ ಮೊದಲ ಕಾಂಗ್ರೇಸ್ಸೇತರ ಸರಕಾರದ ಅವಧಿಯಲ್ಲಿ ಹುಂಡೇಕರ್ ನೇತೃತ್ವದ ಜಿಲ್ಲಾ ಪುನಾರಚನಾ ಸಮಿತಿ ರಚನೆಗೆ ಶ್ರಮಿಸಿದ್ದರು. ಡಾ.ಆಚಾರ್ಯ ಭಾರತೀಯ ಜನಸಂಘ, ಜನತಾ ಪಾರ್ಟಿ ಹಾಗೂ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಒಟ್ಟು ಹತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ 21 ವರ್ಷ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ
Please follow and like us:
error