ಖೋಟಾ ನೋಟು : ಐವರ ಬಂಧನ

ಬಳ್ಳಾರಿ: ಖೋಟಾ ನೋಟು ತಯಾರಿಸುವ ಅಡ್ಡೆಯ ಮೇಲೆ ಮಂಗಳವಾರ ಮಧ್ಯರಾತ್ರಿ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿ ಖೋಟಾ ನೋಟು, ಕಲರ್ ಝೆರಾಕ್ಸ್ ಯಂತ್ರ ಹಾಗೂ ಅಸಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಗುರು ಕಾಲೊನಿಯಲ್ಲಿರುವ ತಿಪ್ಪೇಸ್ವಾಮಿ ಎಂಬುವವರ ಮನೆಯನ್ನು ಬಾಡಿಗೆ ಪಡೆದು ಖೋಟಾ ನೋಟು ತಯಾರಿಸುತ್ತಿದ್ದ ಸಿರುಗುಪ್ಪ ತಾಲ್ಲೂಕಿನ ಶಾನವಾಸಪುರ ಗ್ರಾಮದ ಸೋದರರಾದ ಯಲ್ಲನಗೌಡ, ಮಲ್ಲನಗೌಡ, ಸಂತೋಷಗೌಡ ಹಾಗೂ ಸಿಂಧನೂರಿನ ರಮೇಶ ಮೇಟಿ, ಬೆಂಗಳೂರಿನ ವಿಜಯ್ ಎಂಬುವವರನ್ನು ಬಂಧಿಸಲಾಗಿದೆ.
ಪೊಲೀಸರು ದಾಳಿ ನಡೆಸಿದ ಸಂದರ್ಭ ಈ ತಂಡ ರೂ 100 ಮುಖಬೆಲೆಯ ಖೋಟಾ ನೋಟು ತಯಾರಿಸುತ್ತಿದ್ದರು. ಮೊದಲೇ ರೂ 1000, ರೂ 500 ಮುಖಬೆಲೆಯ ನೋಟುಗಳನ್ನು ತಯಾರಿಸಿದ್ದರು. 
ಇವರಿಂದ ಒಟ್ಟು ರೂ 90,300 ಮುಖಬೆಲೆಯ ಖೋಟಾ ನೋಟುಗಳೂ, ರೂ 8,300 ನಗದು, ಕಲರ್ ಝೆರಾಕ್ಸ್ ಯಂತ್ರ, ಸ್ಕ್ಯಾನರ್, ಕಟಿಂಗ್ ಯಂತ್ರ, ಬಿಳಿ ಹಾಳೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಬಳ್ಳಾರಿಯ ಕೌಲ್‌ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರಿನ ವಿಜಯ್ ಹಾಗೂ ಸಿಂಧನೂರಿನ ರಮೇಶ ಮೇಟಿ ಅವರ ಸಹಾಯದಿಂದ ಶಾನವಾಸಪುರದ ಮೂವರು ಸೋದರರು ಖೋಟಾ ನೋಟು ತಯಾರಿಸಿ, ಅಕ್ರಮವಾಗಿ ಚಲಾವಣೆ ಮಾಡುತ್ತಿದ್ದರು ಎಂದು ಸಿಪಿಐ ವೈ.ಡಿ. ಅಗಸೀಮನಿ ತಿಳಿಸಿದ್ದಾರೆ.  -ಪ್ರಜಾವಾಣಿ 
Please follow and like us:
error