ತಣ್ಣಗಾಗದ ಯಡಿಯೂರಪ್ಪ ಬಣದ ಕೋಪ-ತಾಪ

ಬಿಜೆಪಿ ಬಿರುಕಿಗೆ ಆರೆಸ್ಸೆಸ್ ತೇಪೆ; ತಣ್ಣಗಾಗದ ಯಡಿಯೂರಪ್ಪ ಬಣದ ಕೋಪ-ತಾಪ
ಬೆಂಗಳೂರು, ಜ.11: ರಾಜ್ಯ ಬಿಜೆಪಿಯೊಳಗೆ ಉಂಟಾಗಿರುವ ಬಿಕ್ಕಟ್ಟು ಬುಧವಾರ ಆರೆಸ್ಸೆಸ್ ನಡೆಸಿದ ಸಂಧಾನ ಸಭೆಯಲ್ಲಿ ಶಮನಗೊಂಡಂತೆ ಕಂಡು ಬಂದಿದ್ದರೂ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣದವರು ಸಂಧಾನ ಸೂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಬಿಜೆಪಿಯೊಳಗೆ ಉಂಟಾಗಿರುವ ಭಿನ್ನಮತ, ಗುಂಪುಗಾರಿಕೆ, ಬಿಕ್ಕಟ್ಟು ತಾರಕಕ್ಕೇರುವುದನ್ನು ಕಂಡ ಆರೆಸ್ಸೆಸ್ ನಾಯಕರು, ಸರಕಾರ ಪತನವಾಗುವ ಮುನ್ಸೂಚನೆ ಅರಿತು ಇಂದು ಸಂಧಾನ ಸಭೆ ನಡೆಸಿದ್ದಾರೆ.ಆದರೆ ಸಂಧಾನ ಸಭೆಯಲ್ಲಿ ಯಡಿಯೂರಪ್ಪನವರ ವಿರುದ್ಧ ಆರೆಸ್ಸೆಸ್ ಮುಖಂಡರು ಕಿಡಿಗಾರಿದ್ದು,ತೀವ್ರ ತರಾಟೆಗೂ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಯಡಿಯೂರಪ್ಪ ಮತ್ತೆ ಮುಖ್ಯ ಮಂತ್ರಿಯಾಗುವ ಅಪೇಕ್ಷೆ ವ್ಯಕ್ತಪಡಿಸಿದ್ದು, ಜೊತೆಗೆ ತನ್ನ ಬೆಂಬಲಿಗ ಸಚಿವ, ಶಾಸಕರ ಮೂಲಕ ಹೈಕಮಾಂಡ್‌ಗೂ ಒತ್ತಡ ಹೇರಿದ್ದರು.ಆದರೆ ಹೈಕಮಾಂಡ್ ಇದಕ್ಕೆ ಸೊಪ್ಪು ಹಾಕದುದನ್ನು ಕಂಡು ಸಂಕ್ರಾತಿಯವರೆಗೆ ಕಾಯುತ್ತೇನೆ.
ಬಳಿಕ ತನ್ನ ನಿರ್ಧಾರ ತಾನು ತೆಗೆದುಕೊಳ್ಳುವುದಾಗಿ ಹೈಕಮಾಂಡ್‌ಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರು. ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪರೊಂದಿಗೆ ಬಹಿರಂಗವಾಗಿ ಅವರು ವಾಕ್ಸಮರ ಕೂಡಾ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯದಲ್ಲಿ ಸರಕಾರ ಪತನವಾಗುವ ಜೊತೆಗೆ ಪಕ್ಷ ಕೂಡಾ ಇಬ್ಭಾಗವಾಗುವ ಮುನ್ಸೂಚನೆಯನ್ನು ಅರಿತು ಆರೆಸ್ಸೆಸ್ ಮುಖಂಡರು ಇಂದು ಸಂಧಾನ ಸಭೆ ಆಯೋಜಿಸಿದ್ದರು.
ನಗರದ ಆರ್‌ಎಂಬಿ ಬಡಾವಣೆಯಲ್ಲಿರುವ ವಿಧಾನ ಪರಿಷತ್ತಿನ ಸದಸ್ಯ ಲೆಹರ್‌ಸಿಂಗ್ ನಿವಾಸದಲ್ಲಿಂದು ಸಂಜೆ ನಡೆದ ಸಭೆಯಲ್ಲಿ ಆರೆಸ್ಸೆಸ್ ಮುಖಂಡರಾದ ಮಂಗೇಶ್ ಬೆಂಡೆ, ಸತೀಶ್, ಕಲ್ಲಡ್ಕ ಪ್ರಭಾಕರ ಭಟ್, ಮುಖ್ಯಮಂತ್ರಿ ಸದಾನಂದ ಗೌಡ,ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವರಾದ ಸುರೇಶ್ ಕುಮಾರ್, ಅಶೋಕ್, ಶೋಭಾ ಕರಂದ್ಲಾಜೆ ಸೇರಿದಂತೆ ಮತ್ತಿತರ ಸಚಿವರು, ನಾಯಕರು ಭಾಗವಹಿಸಿದ್ದರು.
ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸರಕಾರ ಉಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ನಿರ್ಧಾರದ ಕುರಿತು ಚರ್ಚೆ ನಡೆದಿದ್ದು, ಜೊತೆಗೆ ಯಡಿಯೂರಪ್ಪರ ನಡವಳಿಕೆ, ನಿರ್ಧಾರದ ಕುರಿತು ಆಕ್ಷೇಪ ವ್ಯಕ್ತವಾಗಿದ್ದು, ಇದರಿಂದ ಯಡಿಯೂರಪ್ಪ ತೀವ್ರ ಮುಜುಗರ ಎದುರಿಸಿದ್ದು, ಇದು ಅವರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.ಸಭೆಯ ಬಳಿಕ ಮಾಧ್ಯಮದವರ ಮುಂದೆ ಪ್ರತ್ಯಕ್ಷವಾದ ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ, ತಾವೆಲ್ಲ ಒಗ್ಗಟ್ಟಾಗಿದ್ದೇವೆ. ತಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಹೇಳಿಕೆ ನೀಡಿದರು.
ಆರೆಸ್ಸೆಸ್ ನಾಯಕರು ಸರಕಾರ ಹಾಗೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಎಂದು ಸಲಹೆ, ಸೂಚನೆ ನೀಡಿದ್ದಾರೆ ಎಂದ ಅವರು, ನಾವೆಲ್ಲ ಒಟ್ಟಾಗಿ ಮುಂದೆ ಸಾಗುತ್ತೇವೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸುತ್ತೇವೆ ಎಂದು ಹೇಳಿದರು.ಯಾರಿಗೂ ನೋವಾಗದ ರೀತಿಯಲ್ಲಿ, ಯಾವುದೇ ಸ್ಥಾನಮಾನವಿಲ್ಲದೆ ಪಕ್ಷವನ್ನು ರಾಜ್ಯದಲ್ಲಿ ಕಟ್ಟುವುದಕ್ಕಾಗಿ ತಾನು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಇದಕ್ಕೆ ಪಕ್ಷದವರೆಲ್ಲರೂ ಒಪ್ಪಿಗೆ ನೀಡಿದ್ದಾರೆ. ಮುಂದೆ ಒಟ್ಟಾಗಿ ಒಗ್ಗಟ್ಟಾಗಿ ಸಾಗುತ್ತೇವೆ ಎಂದು ಆರೆಸ್ಸೆಸ್ ಮುಖಂಡರಿಗೆ ತಿಳಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಇದೇ ವೇಳೆ ಮಾತನಾಡಿದ ಈಶ್ವರಪ್ಪ, ಬರುವ ದಿನಗಳಲ್ಲಿ ಒಗ್ಗಟ್ಟಾಗಿ ರಾಜ್ಯದ ಬೇರೆ ಬೇರೆ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಜೊತೆಗೆ ಪಕ್ಷವನ್ನು ಕೂಡಾ ಇನ್ನಷ್ಟು ಗಟ್ಟಿಗೊಳಿಸುತ್ತೇವೆ. ಈ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ ಮುಂದೆ ಸಾಗುತ್ತೇವೆ ಎಂದರು.ಮೇಲ್ನೋಟಕ್ಕೆ ನಾವೆಲ್ಲ ಒಂದಾಗಿದ್ದೇವೆ ಎಂಬಂತೆ ನಾಟಕೀಯ ರೀತಿಯಲ್ಲಿ ಮಾಧ್ಯಮದವರಿಗೆ ಫೋಸು ನೀಡಿದ ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ, ಆರೆಸ್ಸೆಸ್‌ನವರು ನೀಡಿದ ಸಂಧಾನ ಸೂತ್ರಕ್ಕೆ ಮಾತ್ರ ಮಣಿದಿಲ್ಲ ಎಂಬುವುದು ಮೂಲಗಳು ಸ್ಪಷ್ಟಪಡಿಸಿದೆ.
ಸಂಧಾನ ಸಭೆಯಲ್ಲಿ ಆರೆಸ್ಸೆಸ್ ಮುಖಂಡರು, ಯಡಿಯೂರಪ್ಪರ ಬೇಡಿಕೆ, ಒತ್ತಡ ತಂತ್ರಗಾರಿಕೆ, ಪದೇ ಪದೇ ನಡೆಸುತ್ತಿರುವ ಆಪ್ತರ ಜೊತೆಗಿನ ಸಮಾಲೋಚನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಮುಂದೆ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ಕೂಡಾ ನೀಡಿದ್ದಾರೆ.ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ನಡೆಸುತ್ತಿರುವ ಯಡಿಯೂರಪ್ಪರಿಗೆ ಸದ್ಯಕ್ಕೆ ಸ್ಥಾನಮಾನದ ಕುರಿತು ಚಕಾರವೆತ್ತದಂತೆ ಸ್ಪಷ್ಟ ಸೂಚನೆ ನೀಡಿರುವ ಆರೆಸ್ಸೆಸ್ ಮುಖಂಡರು, ನಮ್ಮ ತೀರ್ಮಾನಕ್ಕೆ ವಿರುದ್ಧವಾಗಿ ನಡೆದರೆ ಮುಂದೆ ಪರಿಸ್ಥಿತಿ ನೆಟ್ಟಗಿರಲ್ಲ ಎಂಬ ರೀತಿಯ ಮುನ್ನೆಚ್ಚರಿಕೆ ಕೂಡಾ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಸಭೆಯಲ್ಲಿ ಸರಕಾರದ ಉಳಿವು, ಪಕ್ಷ ಬಲವರ್ಧನೆ, ಭಿನ್ನಮತ, ಗುಂಪುಗಾರಿಕೆ, ವಾಕ್ಸಮರದ ಕುರಿತು ಚರ್ಚೆ ನಡೆದಿದೆ. ಜೊತೆಗೆ ಈಶ್ವರಪ್ಪ ಹಾಗೂ ಯಡಿಯೂರಪ್ಪರ ಮಧ್ಯೆಗಿನ ಜಂಗೀಕುಸ್ತಿಯನ್ನು ಕೂಡಲೇ ನಿಲ್ಲಿಸಿ, ರಾಜ್ಯದಲ್ಲಿ ಪಕ್ಷ ಹಾಗೂ ಸರಕಾರದ ಕುರಿತು ಹೆಚ್ಚಿನ ಗಮನ ನೀಡುವಂತೆಯೂ ಸೂಚನೆ ನೀಡಲಾಗಿದೆ.ಯಡಿಯೂರಪ್ಪರ ವಿರುದ್ಧ ಆರೆಸ್ಸೆಸ್ ನಾಯಕರು ಸಭೆಯಲ್ಲಿ ಚಾಟಿ ಬೀಸಿರುವುದು ಅವರ ಬೆಂಬಲಿಗರನ್ನು ಮತ್ತಷ್ಟು ಕೆರಳಿಸಿದೆ.
ಜೊತೆಗೆ ಯಡಿಯೂರಪ್ಪರ ಬೇಡಿಕೆಯನ್ನೆಲ್ಲ ತಳ್ಳಿ ಹಾಕಿರುವುದು ಬಿಜೆಪಿಯೊಳಗೆ ಮತ್ತೆ ಬಿಕ್ಕಟ್ಟನ್ನು ಜೀವಂತವಾಗಿರಿಸಿದೆ. ಒಟ್ಟಾರೆ ಸಂಧಾನ ಸಭೆಯ ಸರ್ಕಸ್ ಯಶಸ್ವಿಯಾಗದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಮತ್ತೆ ಒಂದು ಸುತ್ತಿನ ಸಭೆಯನ್ನು ಸದ್ಯದಲ್ಲಿ ಸೇರಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. – ವಾರ್ತಾಭಾರತಿ
Please follow and like us:
error