ಶಾರುಕ್ ದಸ್ತಗಿರಿಗೆ ಯೇಲ್ ವಿಶ್ವವಿದ್ಯಾಲಯ ವಿಷಾದ

ನ್ಯೂಯಾರ್ಕ್, ಎ.14: ಅಮೆರಿಕದ ವಿಮಾನ ನಿಲ್ದಾಣವೊಂದರಲ್ಲಿ ದಸ್ತಗಿರಿಗೊಳಗಾದ ಬಾಲಿವುಡ್ ನಟ ಶಾರುಕ್ ಖಾನ್‌ರನ್ನು ಆಹ್ವಾನಿಸಿದ್ದ ಯೇಲ್ ವಿಶ್ವವಿದ್ಯಾಲಯವು ಘಟನೆಯನ್ನು ‘ದುರದೃಷ್ಟಕರ’ ಎಂದು ವ್ಯಾಖ್ಯಾನಿಸಿದ್ದು, ಆದಾಗ್ಯೂ ಕೊನೆಗೆ ಪ್ರಕರಣ ಸುಖಾಂತ್ಯಗೊಂಡಿದೆಯೆಂದು ಸಮಾಧಾನ ವ್ಯಕ್ತಪಡಿಸಿದೆ.
ತನ್ನ ಸಿನಿಮಾಗಳಲ್ಲಿ ಆರಂಭ ಹೇಗಾಯಿತು ಎನ್ನುವುದಕ್ಕಿಂತ ಮುಕ್ತಾಯ ಹೇಗಾಯಿತು ಎಂಬುದು ಅತಿಮುಖ್ಯವೆಂದು ಸ್ವತಃ ಶಾರುಕ್ ಖಾನ್‌ರೇ ಹೇಳುತ್ತಾರೆ. ನಿನ್ನೆಯ ಕತೆ ದುರದೃಷ್ಟಕರ ರೀತಿಯಲ್ಲಿ ಆರಂಭವಾಯಿತು. ಆದರೆ, ಎಲ್ಲರೂ ಸಂತೋಷಗೊಳ್ಳುವಂತೆ ಮುಕ್ತಾಯವಾಯಿತೆಂದು ಯಾಲೆಯ ಅಂತಾರಾಷ್ಟ್ರೀಯ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಜಾರ್ಜ್ ಜೋಸೆಫ್ ಇ-ಮೇಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಯಾಲೆ ವಿವಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವುದಕ್ಕಾಗಿ ಅಮೆರಿಕಕ್ಕೆ ಆಗಮಿಸಿದ್ದ ಖಾನ್‌ರನ್ನು ನಿನ್ನೆ ನ್ಯೂಯಾರ್ಕ್‌ನ ವೈಟ್‌ಪ್ಲೇನ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಎರಡು ತಾಸುಗಳ ಕಾಲ ವಶಪಡಿಸಿಕೊಂಡಿದ್ದರು.
ಭಾರತೀಯ ದೂತಾವಾಸದ ಮಧ್ಯಪ್ರವೇಶದ ಬಳಿಕ ಅವರ ಬಿಡುಗಡೆಯಾಗಿತ್ತು.ಇದು ಹೊಸದಿಲ್ಲಿಯನ್ನು ಕೆರಳುವಂತೆ ಮಾಡಿತ್ತು.

Leave a Reply