ಹಿರೇಹಳ್ಳ ಯೋಜನೆ ಅ. ೦೩ ರಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು.

ಕೊಪ್ಪಳ ಆ. ೦೧ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಕೊಪ್ಪಳ ಜಿಲ್ಲೆಯ ಹಿರೇಹಳ್ಳ ಯೋಜನೆಯ ಯಲಬುರ್ಗಾ ತಾಲೂಕಿನ ಶಿರೂರು, ವೀರಾಪುರ, ಮುತ್ತಾಳ, ಅರಕೇರಿ ಹಾಗೂ ಕೊಪ್ಪಳ ತಾಲೂಕಿನ ಮುದ್ಲಾಪುರ ಪುನರ್ವಸತಿ ಕೇಂದ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಪರಿಷ್ಕೃತ ಹಕ್ಕುಪತ್ರ ವಿತರಣೆ ಹಾಗೂ ವೀರಾಪುರ ಹಳ್ಳಕ್ಕೆ ನಿರ್ಮಿಸಿರುವ ಸೇತುವೆಯ ಉದ್ಘಾಟನಾ ಸಮಾರಂಭ ಅ. ೦೩ ರಂದು ಬೆಳಿಗ್ಗೆ ೧೧ ಗಂಟೆಗೆ ವೀರಾಪುರ ಗ್ರಾಮದಲ್ಲಿ ನಡೆಯಲಿದೆ.  ಪುನರ್ವಸತಿ ಕೇಂದ್ರಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ನೆರವೇರಿಸುವರು.  ಪುನರ್ವಸತಿ ಕೇಂದ್ರಗಳ ಪರಿಷ್ಕೃತ ಹಕ್ಕು ಪತ್ರ ವಿತರಣೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರು ನಡೆಸುವರು.  ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ವೀರಾಪುರ ಸೇತುವೆ ಉದ್ಘಾಟನೆ ನೆರವೇರಿಸುವರು.  ಯಲಬುರ್ಗಾ ಶಾಸಕರು ಹಾಗೂ ಹಿರೇಹಳ್ಳ ಯೋಜನೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷರಾದ ಬಸವರಾಜ ರಾಯರಡ್ಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ಕೆ. ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿ.ಪಂ. ಸದಸ್ಯರುಗಳಾದ ಈರಪ್ಪ ಕುಡಗುಂಟಿ, ಉಮಾ ಶಿವಪ್ಪ ಮುತ್ತಾಳ, ಅಶೋಕ ತೋಟದ, ವನಿತಾ ಗಡಾದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು. 
ಯಶಸ್ವಿನಿ ನೋಂದಣಿ ಅವಧಿ ಆ. ೩೧ ರವರೆಗೆ ವಿಸ್ತರಣೆ.
ಕೊಪ್ಪಳ, ಆ.೦೧ ಸಹಕಾರ ಇಲಾಖೆಯು ಪ್ರಸಕ್ತ ಸಾಲಿನ ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಾಯಿಸಲು ಅಥಾ ನವೀಕರಿಸುವ ಅವಧಿಯನ್ನು ಆಗಸ್ಟ್.೩೧ ರವರೆಗೆ ವಿಸ್ತರಿಸಿದೆ.
     ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯು ಸ್ವಯಂನಿಧಿ ಶಸ್ತ್ರ ಚಿಕಿತ್ಸಾ ಯೋಜನೆಯಾಗಿದ್ದು, ಈ ಯೋಜನೆಯಡಿ ಪ್ರಸಕ್ತ ಸಾಲಿಗೆ ನೋಂದಾಯಿಸಲು  ಗ್ರಾಮೀಣ ಸಹಕಾರ ಸಂಘಗಳಲ್ಲಿನ ಸದಸ್ಯರು ವಾರ್ಷಿಕ ವಂತಿಗೆ ರೂ.೨೫೦/- ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರಾಗಿದ್ದಲ್ಲಿ ೫೦ ರೂ.ಗಳನ್ನು ಸಂಘಕ್ಕೆ ಪಾವತಿಸಿ ನೋಂದಾಯಿಸಬಹುದು ಹಾಗೂ ನವೀಕರಿಸಿಕೊಳ್ಳಬಹುದು.
     ಸರ್ಕಾರವು ಪ್ರಸಕ್ತ ಸಾಲಿಗೂ ಯಶಸ್ವಿನಿ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯನ್ನು ನಗರ ಸಹಕಾರಿಗಳಿಗೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಸದಸ್ಯತ್ವ ನೋಂದಣಿಗೆ, ಯಾವುದೇ ಕಾರ್ಯನಿರತ ನಗರ ಪ್ರದೇಶದಲ್ಲಿ ಬರುವ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದು ೦೩ ತಿಂಗಳಾಗಿರಬೇಕು. ಹಾಗೂ ವಾರ್ಷಿಕ ವಂತಿಗೆ ೭೧೦ ರೂ.ನಂತೆ ಪ್ರಧಾನ ಅರ್ಜಿದಾರರು ಮತ್ತು ಅವರ ಕುಟುಂಬದ ಉದ್ದೇಶಿಸಿದ ಪ್ರತಿಯೊಬ್ಬ ಸದಸ್ಯರಿಗೆ ಕಡ್ಡಾಯವಾಗಿ ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ೧೧೦ ರೂ.ಗಳನ್ನು ವಂತಿಗೆಯಾಗಿ ಸಂಘಕ್ಕೆ ಪಾವತಿಸಬೇಕು. ನವಜಾತ ಶಿಶುವಿನಿಂದ ಹಿಡಿದು ವ್ಯಕ್ತಿಯ ಜೀವಿತಾವಧಿಯವರೆಗೂ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಒಂದೇ ಕುಟಂಬದಲ್ಲಿ ಐವರು ಅಥವಾ ಅದಕ್ಕಿಂತ ಹೆಚ್ಚಿಗೆ ಕುಟಂಬ ಸದಸ್ಯರನ್ನು ಯಶಸ್ವಿನಿ ಸದಸ್ಯರನ್ನಾಗಿ ನೊಂದಾಯಿಸಿದಲ್ಲಿ ಅವರು ಪಾವತಿಸಬೇಕಾದ ವಂತಿಗೆ ಹಣದಲ್ಲಿ ಶೇ.೧೫ ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
     ಈ ಯೋಜನೆಯಡಿ ಪ್ರಸಕ್ತ ಸಾಲಿಗೆ ಯಶಸ್ವಿನಿ ಸದಸ್ಯರುಗಳನ್ನು ನೊಂದಾಯಿಸುವ ಅಥವಾ ನವೀಕರಿಸುವ ಕೊನೆಯ ದಿನಾಂಕವನ್ನು ಆಗಸ್ಟ್.೩೧ ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖಾ ಕಛೇರಿಗಳನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: ೦೮೫೩೯-೨೨೧೧೦೯, ೨೨೧೬೦೧ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಡಾ. ಉಮೇಶ. ಜಿ ತಿಳಿಸಿದ್ದಾರೆ.
ಆಗಸ್ಟ್.೦೩ ರಂದು ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರ
ಕೊಪ್ಪಳ, ಆ.೦೧ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕದ ಇವರುಗಳ ಸಂಯುಕ್ತಾಶ್ರಯದಲ್ಲಿ ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರ ಆಗಸ್ಟ್.೦೩ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
     ಜಿಲ್ಲಾಧಿಕಾರಿ ಆರ್.ಆರ್. ಜನ್ನು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆರ್.ಜುಮ್ಮನ್ನವರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲ ಪಾಂಡು, ಖಜಾಂಚಿ ಯೋಗಾನಂದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಉಪ ಕಾರ್ಯದರ್ಶಿ ಎನ್.ಕೆ.ತೊರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀಕಾಂತ ಆರ್.ಬಾಸೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
     ಬೆಂಗಳೂರಿನ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಯೋಜನಾ ವ್ಯವವಸ್ಥಾಪಕಿ ಡಾ||ಸುಧಾ ಚಂದ್ರಶೇಖರ ವಿಶೇಷ ಉಪನ್ಯಾಸ ನೀಡಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಮೆಹಬೂಬ ಪಾಷಾ ಮೂಲಿಮನಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜಲಸಂಪನ್ಮೂಲ ಸಚಿವರ ಪರಿಷ್ಕೃತ ಪ್ರವಾಸ ಕಾರ್ಯಕ್ರಮ
ಕೊಪ್ಪಳ ಆ. ೦೧ (ಕರ್ನಾಟಕ ವಾರ್ತೆ): ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಆಗಸ್ಟ್ ೦೩ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
         ಪರಿಷ್ಕೃತ ಕಾರ್ಯಕ್ರಮದ ಅನ್ವಯ ಸಚಿವರು ಅಂದು ಬೆಳಿಗ್ಗೆ ೭-೧೫ ಗಂಟೆಗೆ ಹೊಸಪೇಟೆಯ ವೈಕುಂಠ ಅತಿಥಿ ಗೃಹಕ್ಕೆ ಆಗಮಿಸುವರು.  ನಂತರ ಬೆ. ೧೧ ಗಂಟೆಗೆ ಯಲಬುರ್ಗಾ ತಾಲೂಕು ವೀರಾಪುರ ಗ್ರಾಮಕ್ಕೆ ಆಗಮಿಸಿ, ಹಿರೇಹಳ್ಳ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ವೀರಾಪುರ, ಮುತ್ತಾಳ, ಮತ್ತು ಶಿರೂರು ಗ್ರಾಮಗಳ ಪುನರ್ವಸತಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಜರುಗುವ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು.  ಸಚಿವರು ಅದೇ ದಿನ ಮಧ್ಯಾಹ್ನ ೦೨ ಗಂಟೆಗೆ ವಿಜಯಪುರಕ್ಕೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.  
ವಸತಿ ಯೋಜನೆ ಮದ್ಯವರ್ತಿಗಳ ಹಾವಳಿ ಕಂಡುಬಂದಲ್ಲಿ ಮಾಹಿತಿ ನೀಡಿ.
ಕೊಪ್ಪಳ, ಆ.೦೧ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ಪಡೆಯಲು ಮದ್ಯವರ್ತಿಗಳಿಗೆ ಅಥವಾ ಇತರರಿಗೆ ಹಣ ನೀಡಿ ಮನೆ ಪಡೆಯಲು ಯತ್ನಿಸಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಮನವಿ ಮಾಡಿದ್ದಾರೆ.
     ವಸತಿ ಯೋಜನೆಯಡಿಯಲ್ಲಿ ನಿಗದಿಪಡಿಸಿದ ಮನೆಗಳನ್ನು ಸರಿಯಾಗಿ ಫಲಾನುಭವಿಗಳಿಗೆ ಹಂಚಿಕೆಗೆ ಈಗಾಗಲೇ ಲಾಟರಿ ಮುಖಾಂತರ ಆಯ್ಕೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಜವಾದ ಫಲಾನುಭವಿಗಳು ತಮ್ಮ ಅರ್ಜಿಗಳನ್ನು ದಾಖಲೆ ಸಮೇತವಾಗಿ ಸಂಬಂಧಿಸಿದ ಪಂಚಾಯಿತಿಗಳಿಗೆ ಸಲ್ಲಿಸಬೇಕು. ಅಲ್ಲದೇ ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು. ಜಿಲ್ಲಾ ಪಂಚಾಯಿತಿಯಿಂದ ಮನೆಗಳನ್ನು ಪಾರದರ್ಶಕತೆಯಿಂದ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾದ ಕಾರಣ ಮಧ್ಯವರ್ತಿಗಳಿಗೆ ಅಥವಾ ಇನ್ನಾರಿಗಾದರೂ ಹಣ ನೀಡಿ ವಸತಿ ಪಡೆಯಲು ಪ್ರಯತ್ನಿಸಬಾರದು.   ಒಂದು ವೇಳೆ ಅಂತಹ ಯಾವುದಾದರೂ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೊಬೈಲ್ ಸಂಖ್ಯೆ: ೯೪೮೦೮೭೧೦೦೦ ಗೆ ಎಸ್.ಎಂ.ಎಸ್ ಮೂಲಕ ಸಂದೇಶ ಕಳುಹಿಸಬಹುದಾಗಿದೆ ಅಥವಾ ಜಿಲ್ಲಾ ಪಂಚಾಯತಿ ಕಛೇರಿಯ ದೂರವಾಣಿ ಸಂಖ್ಯೆ ೦೮೫೩೯೨-೨೨೦೦೦೨ ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.
Please follow and like us:
error