ಮತ ಎಣಿಕಾ ಕೇಂದ್ರದಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧ- ಎಂ. ಕನಗವಲ್ಲಿ ಸೂಚನೆ

  ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕಾ ಕಾರ್ಯ ಫೆ. ೨೩ ರಂದು ಬೆಳಿಗ್ಗೆ ೦೮ ಗಂಟೆಗೆ ಆಯಾ ತಾಲೂಕು ಕೇಂದ್ರದಲ್ಲಿ ಪ್ರಾರಂಭವಾಗಲಿದ್ದು, ಮತ ಎಣಿಕಾ ಕೇಂದ್ರಕ್ಕೆ ಅನಗತ್ಯ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆಯಾ ತಾಲೂಕು ಚುನಾವಣಾದಿಕಾರಿಗಳಾದ ತಹಸಿಲ್ದಾರರಿಗೆ ಸೂಚನೆ ನೀಡಿದ್ದಾರೆ.
  ಮತಗಳ ಎಣಿಕಾ ಕಾರ್ಯವನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತ ರೀತಿಯಲ್ಲಿ ಜರುಗಿಸಬೇಕಾಗಿದ್ದು, ಮತ ಎಣಿಕಾ ಕೇಂದ್ರಕ್ಕೆ ಅನಾವಶ್ಯಕ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿರುತ್ತದೆ.  ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ ೦೩ ಟೇಬಲ್‌ಗಳಿರುವುದರಿಂದ ಆ ಕ್ಷೇತ್ರದ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್ ಮತ್ತು ೦೩ ಜನ ಎಣಿಕಾ ಏಜೆಂಟ್‌ಗಳು ಒಟ್ಟಾರೆ ಒಂದು ಕ್ಷೇತ್ರಕ್ಕೆ ೧+೩ ಜನ ಮಾತ್ರ ಉಪಸ್ಥಿತರಿರಬೇಕು.  ತಾಲೂಕು ಪಂಚಾಯತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ ೦೧ ಟೇಬಲ್ ಮಾತ್ರ ಇರುವುದರಿಂದ, ಆ ಕ್ಷೇತ್ರದ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್ ಅಥವಾ ಪೊಲಿಂಗ್ ಏಜೆಂಟ್ ಮಾತ್ರ ಅಂದರೆ ಒಬ್ಬರು ಮಾತ್ರ ಉಪಸ್ಥಿತರಿರಬೇಕು.  
  ಎಣಿಕಾ ಕೊಠಡಿಗಳಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಮತ್ತು ಅನೇಕ ಜನರ ಉಪಸ್ಥಿತಿಯು ಅನಾವಶ್ಯಕ ಗೊಂದಲಕ್ಕೆ ಮತ್ತು ಮತ ಎಣಿಕಾ ಕಾರ್ಯಕ್ಕೆ ಅಡ್ಡಿಯಾಗಲಿದ್ದು, ಮೇಲೆ ತಿಳಿಸಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಗೊಂದಲ ರಹಿತ ಮತ ಎಣಿಕಾ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಆಯಾ ತಹಸಿಲ್ದಾರರಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದ್ದಾರೆ.
Please follow and like us:
error