ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೆ ಮುನ್ನುಡಿ: ಪಾಟೀಲ್

  ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಮಹತ್ವದ ನಾಲ್ಕು ಅಧಿಸೂಚನೆಗಳಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಂಕಿತ ಹಾಕಿರುವುದರಿಂದ ಆ ಭಾಗದ ಜನರ ಭಾಗ್ಯದ ಬಾಗಿಲು ತೆರೆದಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ಸರಕಾರಿ ಉದ್ಯೋಗ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧದ ನಾಲ್ಕು ಅಧಿಸೂಚನೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದರಿಂದಾಗಿ, ಕಲಂ371(ಜೆ) ಪ್ರಕಾರ ಲಭಿಸಿರುವ ವಿಶೇಷ ಸ್ಥಾನಮಾನ ಜಾರಿಗೊಳಿಸುವ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದರು. 
ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371(ಜೆ) ಕಲಂ ತಿದ್ದುಪಡಿಯ ವಿಶೇಷ ಗೆಜೆಟ್ ಅಧಿಸೂಚನೆ ಇಂದು ಹೊರ ಬೀಳಲಿದ್ದು, ತಡೆ ಹಿಡಿಯಲಾಗಿದ್ದ ವಿವಿಧ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ಸಿಗಲಿದೆ. ಹಿಂದುಳಿದ ಭಾಗ ಎಂಬ ಶಾಪ ವಿಮೋಚನೆಯಾಗಲಿದೆ. ಮುಂದಿನ 10 ವರ್ಷಗಳಲ್ಲಿ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಬದಲಾವಣೆಯನ್ನು ಕಾಣಲಿದ್ದೇವೆ ಎಂದು ಪಾಟೀಲ್ ಹೇಳಿದರು.
ಸರಕಾರಿ ನೇಮಕಾತಿಗಳಿಗೆ ಸಂಬಂಧಿಸಿದಂತೆ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ‘ಎ’ ವರ್ಗದ ಹುದ್ದೆಗಳಿಗೆ ಶೇ.75, ‘ಬಿ’ ವರ್ಗದ ಶೇ.75, ‘ಸಿ’ ವರ್ಗದ ಶೇ.80, ‘ಡಿ’ ವರ್ಗದಲ್ಲಿ ಶೇ.85, ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇ.8ರಷ್ಟು ಮೀಸಲಾತಿ ಕಲ್ಪಿಸುವುದನ್ನು ಅಧಿಸೂಚನೆಯಲ್ಲಿ ಸೇರಿಸಲಾಗಿದೆ ಎಂದು ಅವರು ತಿಳಿಸಿದರು.
2013ರ ಜನವರಿ 1ಕ್ಕಿಂತ ಮುಂಚೆ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಜನಿಸಿದವರು ಹಾಗೂ ಈ ನಿಗದಿತ ದಿನಾಂಕಕ್ಕಿಂತ ಮೊದಲು ವಾಸಿಸುತ್ತಿದ್ದ ಪೋಷಕರು ಹಾಗೂ ಅವರ ಮಕ್ಕಳು ಈ ಉದ್ಯೋಗ ಮೀಸಲಾತಿ ಹಾಗೂ ಇನ್ನಿತರ ಮೀಸಲಾತಿಗೆ ಒಳಪಡುತ್ತಾರೆ ಎಂದು ಅವರು ಹೇಳಿದರು.
ಮತದಾರರ ಗುರುತು ಚೀಟಿ ಇನ್ನಿತರ ದಾಖಲಾತಿಗಳನ್ನು ಆಧಾರವಾಗಿ ಪಡೆಯಲಾಗುತ್ತದೆ. ಉಳಿದ ಎಲ್ಲ ವಿವರಗಳನ್ನು ರಾಜ್ಯಪತ್ರದಲ್ಲಿ ತಿಳಿಸಲಾಗುತ್ತಿದೆ. ಈ ಯೋಜನೆಗೆ ಕೇಂದ್ರದಿಂದ ವಿಶೇಷ ಅನುದಾನವಿಲ್ಲ. ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.
14ನೆ ಹಣಕಾಸು ಯೋಜನೆಯಡಿ ಕೇಂದ್ರ ಸರಕಾರಕ್ಕೆ 15 ಸಾವಿರ ಕೋಟಿ ರೂ.ಗಳ ಬೇಡಿಕೆ ಇಡಲಾಗಿದೆ. ಯೋಜನೆ, ಆಡಳಿತ ಸುಧಾರಣೆ, ಶಿಕ್ಷಣ, ಉದ್ಯೋಗ ನೀಡಿಕೆ ಎಲ್ಲವನ್ನೂ ಪರಿಗಣಿಸಿದರೆ ಹೈದರಾಬಾದ್ ಕರ್ನಾಟಕ ಭಾಗ ಅಭಿವೃದ್ಧಿ ಪಥದತ್ತ ಸಾಗಲಿದೆ. ಇನ್ನು 10 ವರ್ಷಗಳಲ್ಲಿ ಕಣ್ಣಿಗೆ ಕಾಣುವ ಅಭಿವೃದ್ಧಿ ಕೆಲಸಗಳು ಸಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಮಂಡಳಿ ಕಾರ್ಯಾಚರಣೆ ನಡೆಸಲಿದ್ದು, ಈ ಸಮಿತಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಎಲ್ಲ ಸಂಸತ್ ಸದಸ್ಯರು, ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಇರುತ್ತಾರೆ. ಅಲ್ಲದೆ, ಆ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾಯಿತ ಮುಖ್ಯಸ್ಥರು ಇರುತ್ತಾರೆ ಎಂದು ಸಚಿವರು ತಿಳಿಸಿದರು.
ಮಂಡಳಿಯ ಕಾರ್ಯಾಚರಣೆಯನ್ನು ರಾಜ್ಯ ಯೋಜನಾ ಇಲಾಖೆಯು ನಿರ್ವಹಿಸಲಿದೆ. ಹೈದರಾಬಾದ್-ಕರ್ನಾಟಕ ಪ್ರದೇಶ ಶೈಕ್ಷಣಿಕ ಮೀಸಲಾತಿಯನ್ನು ರಾಜ್ಯ ಶಿಕ್ಷಣ ಇಲಾಖೆಯು ನಿರ್ವಹಿಸಲಿದೆ. ವಿವಿಧ ಇಲಾಖಾ ಆಡಳಿತ ಕಾರ್ಯದರ್ಶಿಗಳು ಉದ್ಯೋಗ ಮೀಸಲಾತಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ಇಲಾಖೆಗಳು ಜಾರಿಗೊಳಿಸುವ ಕಾರ್ಯಸೂಚಿಗಳಿಗೆ ಸಹಕಾರ ಹಾಗೂ ಮಾರ್ಗದರ್ಶನ ನೀಡಲಿದ್ದು, ಆದೇಶದ ಸಂಬಂಧದಲ್ಲಿ ಉದ್ಭವಿಸುವ ತೊಂದರೆಗಳಿಗೆ ಅಗತ್ಯ ಸ್ಪಷ್ಟನೆ ನೀಡಲಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಡಾ.ನಂಜುಂಡಪ್ಪ ವರದಿಯ ಅನುಷ್ಠಾನ ಕಾರ್ಯಾಚರಣೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಯಿಂದ ಹೊರತುಪಡಿಸಿದ ತಾಲೂಕುಗಳು ಇರುವುದರಿಂದ ಅದು ಮುಂದುವರಿಯಲಿದೆ ಎಂದು ಅವರು ಹೇಳಿದರು.
Please follow and like us:
error