You are here
Home > Koppal News > ಬಿಎಸ್‌ವೈಗೆ ಮಿಶ್ರಫಲ : ಜೈಲು-ಜಾಮೀನು

ಬಿಎಸ್‌ವೈಗೆ ಮಿಶ್ರಫಲ : ಜೈಲು-ಜಾಮೀನು

ಬೆಂಗಳೂರು, ನ.3: ಭೂ ಹಗರಣದ ಸುಳಿಗೆ ಸಿಲುಕಿ ಜೈಲು ಪಾಲಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಗುರುವಾರ ಮಿಶ್ರಫಲ ದೊರೆತಿದೆ. ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ದಾಖಲಿಸಿದ್ದ ಎರಡನೆ ಹಾಗೂ ಮೂರನೆ ದೂರುಗಳ ಸಂಬಂಧ ಯಡಿಯೂರಪ್ಪನವರ ನ್ಯಾಯಾಂಗ ಬಂಧನವನ್ನು ನ.15ರವರೆಗೆ ವಿಸ್ತರಿಸಿ ಲೋಕಾಯುಕ್ತ ನ್ಯಾಯಾಲಯ ಆದೇಶಿಸಿದರೆ, ಎರಡನೆ ದೂರಿನ ಸಂಬಂಧ ಹೈಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅಲ್ಲದೆ ಮೂರನೆ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಶುಕ್ರವಾರ ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಹೈಕೋರ್ಟ್ 3ನೆ ದೂರಿನಲ್ಲೂ ಜಾಮೀನು ನೀಡಿದರೆ, ಯಡಿಯೂರಪ್ಪನವರ ಎರಡು ವಾರಗಳ ಜೈಲು ವಾಸಕ್ಕೆ ತೆರೆ ಬೀಳಲಿದೆ. ಆದರೆ, ಜಾಮೀನು ನಿರಾಕರಿಸಿದಲ್ಲಿ ಅವರ ಜೈಲುವಾಸ ಮುಂದುವರಿಯುತ್ತದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಯಡಿಯೂರಪ್ಪನವರ ಪಾಲಿಗೆ ನಿರ್ಣಾಯಕ ದಿನವಾಗಲಿದೆ. ಇದಲ್ಲದೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಯ ಜೈಲು ವಾಸದ ಭವಿಷ್ಯ ಕೂಡ ನಾಳೆಯೇ ನಿರ್ಧಾರವಾಗಲಿದೆ.
ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ:  ಜಮೀನು ಡಿನೋಟಿಫಿಕೇಷನ್ ಸಂಬಂಧ ಬಾಷಾ ದಾಖಲಿಸಿದ್ದ ಎರಡು ಮತ್ತು ಮೂರನೆ ದೂರುಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪಮತ್ತು ಶಾಸಕ ಕೃಷ್ಣಯ್ಯ ಶೆಟ್ಟಿಯವರ ನ್ಯಾಯಾಂಗ ಬಂಧನದ ಅವಧಿಯನ್ನು ನ.15ರವರೆಗೆ ವಿಸ್ತರಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ಗುರುವಾರ ಆದೇಶಿಸಿದೆ. ಇಬ್ಬರ ನ್ಯಾಯಾಂಗ ಬಂಧನದ ಅವಧಿ ಗುರುವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ದೂರುಗಳ ವಿಚಾರಣೆ ನಡೆಸಿದ ನ್ಯಾ.ಎನ್.ಕೆ. ಸುಧೀಂದ್ರ ರಾವ್ ಈ ಆದೇಶ ನೀಡಿದರು. 
ಕೃಷ್ಣಯ್ಯ ಶೆಟ್ಟಿಯನ್ನು ಹಾಜರು ಪಡಿಸಿದ ಜೈಲಧಿಕಾರಿಗಳು ಭದ್ರತಾ ಸಿಬ್ಬಂದಿಯ ಕೊರತೆಯಿಂದ ಯಡಿಯೂರಪ್ಪನವರನ್ನು ಹಾಜರು ಪಡಿಸಲಿಲ್ಲ. ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ಯಡಿಯೂರಪ್ಪನವರ ಖುದ್ದು ಹಜಾರಾತಿಗೆ ವಿನಾಯ್ತಿ ಕೋರಿದರು. ಯಡಿಯೂರಪ್ಪನವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ. ಅಳಿಯ ಸೋಹನ್ ಕುಮಾರ್, ಶಾಸಕ ಹೇಮಚಂದ್ರ ಸಾಗರ್ ಸೇರಿದಂತೆ ಪ್ರಕರಣದ ಇತರ ಆರೋಪಿಗಳು ಹಾಜರಿದ್ದರು.
ಜಾಮೀನು ಮಂಜೂರು: ಸಿರಾಜಿನ್ ಬಾಷಾರ 2ನೆ ದೂರಿನ ಸಂಬಂಧ ಯಡಿಯೂರಪ್ಪನವರಿಗೆ ಷರತ್ತುಬದ್ಧ ಜಾಮೀನು ನೀಡಿ ಹೈಕೋರ್ಟ್ ಗುರುವಾರ ಆದೇಶಿಸಿದೆ. ರೂ. 5ಲಕ್ಷ ವ್ಯಕ್ತಿಗತ ಬಾಂಡ್, ಇಬ್ಬರ ಭದ್ರಾತಾ ಖಾತರಿ ನೀಡಬೇಕು, ಸಾಕ್ಷಿಗಳನ್ನು ಬೆದರಿಸುವ ಅಥವಾ ಸಾಕ್ಷಾಧಾರಗಳ ನಾಶಕ್ಕೆ ಯತ್ನಿಸಬಾರದು ಎಂದು ನ್ಯಾ.ಬಿ.ವಿ.ಪಿಂಟೊ, ಷರತ್ತು ವಿಧಿಸಿ ಅವರಿಗೆ ಜಾಮೀನು ಮಂಜೂರು ಮಾಡಿದರು. ಡಿನೋಟಿಫಿಕೇಷನ್ ಹಗರಣದ ವಹಿವಾಟು ಬೇನಾಮಿದಾರರ ಹೆಸರಿನಲ್ಲಿ ನಡೆದಿದ್ದು, ಯಡಿಯೂರಪ್ಪ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಸೂಕ್ತ ಸಾಕ್ಷಾಧಾರಗಳಿಲ್ಲ. ಇದು ಜೀವಾವಧಿ ಶಿಕ್ಷೆಗೆ ಗುರಿ ಮಾಡುವ ಪ್ರಕರಣವೇನಲ್ಲ. ಡಿನೋಟಿಫಿಕೇಶನ್ ಆರೋಪ ಹೊರತುಪಡಿಸಿದರೆ, ಯಡಿಯೂರಪ್ಪ ಯಾವುದೇ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿಲ್ಲ ಮತ್ತು ಅಪರಾಧ ಹಿನ್ನೆಲೆಯುಳ್ಳವರಲ್ಲ ಎಂದು ನ್ಯಾಯಮೂರ್ತಿ ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಆರೋಪದ ಸಂಬಂಧ ಪೂರ್ಣ ಪ್ರಮಾಣದ ದಾಖಲಾತಿಗಳು ಇಲ್ಲದಾಗ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡುವುದು ಅಪರಾಧ ನ್ಯಾಯಶಾಸ್ತ್ರದ ಉಲ್ಲಂಘನೆಯಾಗಿದೆ. ಲೋಕಾಯುಕ್ತ ಕೋರ್ಟ್ ದೂರುದಾರರಿಂದ ಪ್ರಮಾಣೀಕೃತ ಹೇಳಿಕೆ ಪಡೆದಾಕ್ಷಣ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಜೈಲಿಗೆ ಕಳುಹಿಸಿರುವುದು ಸಮಂಜಸವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಧೀನ ನ್ಯಾಯಾಲಾಯ ಯಾವುದೇ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸುವ ಮುನ್ನ ಪ್ರಕರಣದ ಗಂಭೀರತೆ ಮತ್ತು ಪ್ರಕರಣದಲ್ಲಿನ ಕಾನೂನು ಅಂಶಗಳನ್ನು ಪರಿಗಣಿಸ ಬೇಕಾಗುತ್ತದೆ. ಅಲ್ಲದೆ ನ್ಯಾಯಾಲಯ ಆದೇಶದಲ್ಲಿ ತತ್ವಗಳನ್ನು ಬೋಧಿಸುವ ಅಗತ್ಯವಿಲ್ಲ. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧದ ಆರೋಪಗಳು ಒಂದೇ ತೆರನಾಗಿರುತ್ತವೆ. ಪ್ರಕರಣದ ಸಹ ಆರೋಪಿಗಳಿಗೆ ಜಾಮೀನು ನೀಡಿ, ಯಡಿಯೂರಪ್ಪನವರ ಮನವಿತಿರಸ್ಕರಿಸಿದ ಲೋಕಾಯುಕ್ತ ಕೋರ್ಟ್‌ನ ಕ್ರಮ ಸರಿಯಲ್ಲ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ ತೀರ್ಪು: ಸಿರಾಜಿನ್ ಬಾಷಾರ 3ನೆ ದೂರಿನ ಸಂಬಂಧ ಯಡಿಯೂರಪ್ಪನವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ನಾಳೆ ಪ್ರಕಟಿಸಲಿದೆ. ಆದರೆ, ಡಿನೋಟಿಫಿಕೇಷನ್ ಹಿನ್ನೆಲೆಯಲ್ಲಿ ಯಡಿಯೂರಪ್ಪರನವರನ್ನು ಜೈಲಿನಲ್ಲಿಡುವ ಬದಲು, ಸರಕಾರಕ್ಕೆ ಆಗಿರುವ ನಷ್ಟವನ್ನು ತುಂಬುವುದರ ಕುರಿತು ಸೂಕ್ತ ಸಲಹೆ ನೀಡುವಂತೆ ಬಾಷಾ ಪರ ವಕೀಲರಿಗೆ ನ್ಯಾಯಮೂರ್ತಿ ನಿರ್ದೇಶಿಸಿದ್ದಾರೆ.
ವಿಚಾರಣೆ ಮುಂದೂಡಿಕೆ:  ಜಮೀನು ಡಿನೋಟಿಫಿಕೇಷನ್ ಸಂಬಂಧ ವಕೀಲ ಸಿರಾಜಿನ್ ಬಾಷಾ ದಾಖಲಿಸಿದ್ದ 1, 4 ಮತ್ತು 5ನೆ ದೂರುಗಳ ಸಂಬಂಧ ಯಡಿಯೂರಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ.8ಕ್ಕೆ ಮುಂದೂಡಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಚ್.ಬಿಳ್ಳಪ್ಪ, ದೂರುದಾರ ಬಾಷಾಗೆ ಅರ್ಜಿಯ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿದರು

Leave a Reply

Top