fbpx

ಬಸವೇಶ್ವರರ ಜಯಂತಿ : ವಿಜೃಂಭಣೆಯಿಂದ ಅಚರಿಸಲು ನಿರ್ಧಾರ

 ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಮೇ. ೧೩ ರಂದು  ಕೊಪ್ಪಳದಲ್ಲಿ ಜಿಲ್ಲಾಡಳಿತ ಹಾಗೂ ಬಸವ ಜಯಂತ್ಯೋತ್ಸವ ಸಮಿತಿಯ ಸಂಯುಕ್ತ ಆಶ್ರಯದೊಂದಿಗೆ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು  ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.
  ಬಸವ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡುತ್ತಿದ್ದರು.
  ಈ ಬಾರಿಯ ಬಸವೇಶ್ವರರ ಜಯಂತಿ ಅಂಗವಾಗಿ ಮೇ. ೧೩ ರಂದು ಕೊಪ್ಪಳದ ಬಸವ ಜಯಂತಿ ಉತ್ಸವ ಸಮಿತಿಯ ಸಹಯೋಗದೊಂದಿಗೆ ಸಡಗರ, ಸಂಭ್ರಮದಿಂದ ಆಚರಿಸಲಾಗುವುದು.  ಕಾರ್ಯಕ್ರಮದಲ್ಲಿ ಬಸವ ತತ್ವಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಲು  ಬೀದರ್‌ನ ಬಸವಗಿರಿಯ ಬಸವ ಸೇವಾ ಪ್ರತಿಷ್ಠಾನದ ಶರಣೆ ಅಕ್ಕ ಅನ್ನಪೂರ್ಣ ತಾಯಿ ಮತ್ತು ವಚನ ಸಂಗೀತಕ್ಕಾಗಿ ಬಳ್ಳಾರಿಯ ಕೆ. ವಸಂತಕುಮಾರ ಮತ್ತು ಕವಿತಾ ವಸಂತಕುಮಾರ ಅವರನ್ನು ಆಹ್ವಾನಿಸಲಾಗಿದೆ.  ಸಂಸ್ಥಾನ ಶ್ರೀ ಗವಿಮಠದ ಜಗದ್ಗುರು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.  ಚಿತ್ರದುರ್ಗ ಜಿಲ್ಲೆ ಸಾಣೆಹಳ್ಳಿಯ ಸಿರಿಗೆರೆ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯರು ಪಾವನ ಸಾನಿಧ್ಯ ವಹಿಸುವರು.  ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ, ವಚನ ಗಾಯನ ಸೇರಿದಂತೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಬಸವ ಜಯಂತಿ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು.  ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ಮುಖಂಡರು, ಗಣ್ಯರು, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.  ಬಸವೇಶ್ವರರ ಜಯಂತಿ ಆಚರಣೆಗೆ ಸರ್ಕಾರದ ವತಿಯಿಂದ ಜಿಲ್ಲಾ ಮಟ್ಟಕ್ಕೆ ರೂ. ೫೦೦೦೦ ಹಾಗೂ ತಾಲೂಕು ಮಟ್ಟಕ್ಕೆ ರೂ. ೨೫೦೦೦ ಗಳ ಅನುದಾನ ಒದಗಿಸಲಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದರು.   
  ಸಭೆಯಲ್ಲಿ ಭಾಗವಹಿಸಿದ್ದ ಬಸವ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಅವರು ಮಾತನಾಡಿ ಮೇ. ೧೩ ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಬಸವೇಶ್ವರ ವೃತ್ತದ ಬಳಿ ಜಗಜ್ಯೋತಿ ಬಸವೇಶ್ವರರ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.  ಅಂದು ಸಂಜೆ ೪ ಗಂಟೆಗೆ ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಏರ್ಪಡಿಸಲಾಗಿದ್ದು, ಮೆರವಣಿಗೆಯು ಕೋಟೆ ಮಹೇಶ್ವರ ದೇವಸ್ಥಾನದಿಂದ ಹೊರಟು, ಗಡಿಯಾರಕಂಬ, ಆಜಾದ್ ವೃತ್ತ, ಕಿ

ತ್ತೂರು ಚೆನ್ನಮ್ಮ ವೃತ್ತ, ಜವಾಹರ ರಸ್ತೆ ಮಾರ್ಗವಾಗಿ, ಅಂಬೇಡ್ಕರ್ ವೃತ್ತ, ಕೊಟಗಾರಗೇರಾ ಶಾಲೆ ಮೂಲಕ ಗವಿಮಠ ಆವರಣ ತಲುಪಲಿದೆ.  ಗವಿಮಠ ಆವರಣದಲ್ಲಿ ಸಂಜೆ ೬ ಗಂಟೆಗೆ ಬಸವಜಯಂತಿ ಸಮಾರಂಭ ಜರುಗಲಿದೆ.  ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.  ಮೆರವಣಿಗೆ ಸಂದರ್ಭದಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ನಗರಸಭೆ ವತಿಯಿಂದ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕೈಗೊಳ್ಳಬೇಕು, ನಗರದ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದು ಅವರು ಮನವಿ ಮಾಡಿದರು.

  ಸಭೆಯಲ್ಲಿ ಭಾಗವಹಿಸಿದ್ದ ಶಿವಾನಂದ ಹೊದ್ಲೂರ್ ಅವರು ಮಾತನಾಡಿ, ಕಾರ್ಯಕ್ರಮದ ದಿನದಂದು ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನಗರವನ್ನು ಸುಂದರಗೊಳಿಸಬೇಕು ಎಂದು ಮನವಿ ಮಾಡಿದರು. 
  ನಗರಸಭೆ ವತಿಯಿಂದ ನಗರದ ಹೊರವಲಯದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಬಸವೇಶ್ವರರ ಪುತ್ಥಳಿಗೆ ಅಂದು ವಿಶೇಷ ಪೂಜೆ ಸಲ್ಲಿಸಲು ಇದೇ ಸಂದರ್ಭದಲ್ಲಿ ನಿರ್ಧರಿಸಲಾಯಿತು.
  ಸಭೆಯಲ್ಲಿ ಡಿವೈಎಸ್‌ಪಿ ಸುರೇಶ್ ಮಸೂತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೈಸ್ವಾಮಿ, ಡಿಡಿಪಿಐ ಜಿ.ಹೆಚ್. ವೀರಣ್ಣ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ನಿಂಬರಗಿ, ಆಹಾರ ಇಲಾಖೆ ಡಿಡಿ ಅಶೋಕ್ ಕಲಘಟಗಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ದಾನಪ್ಪ ಶೆಟ್ಟರ್, ರಾಜೇಶ್ ಶಶಿಮಠ, ಮಹೇಶ್ ಬೆಳವಣಕಿ, ನಾಗರಾಜ ಬಳ್ಳಾರಿ, ಶಿವಕುಮಾರ ಕುಕನೂರ ಮುಂತಾದ ಗಣ್ಯರು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
Please follow and like us:
error

Leave a Reply

error: Content is protected !!