ಆಲಿಕಲ್ಲು ಮಳೆ : ನಷ್ಟ ಪ್ರಮಾಣ ಅಂದಾಜು ಸಮೀಕ್ಷೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಸವರಾಜ ಸೂಚನೆ


 ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವಾರ ಸಂಭವಿಸಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ನಷ್ಟದ ಪ್ರಮಾಣವನ್ನು ಅಂದಾಜಿಸಲು ಕೂಡಲೆ ಸಮೀಕ್ಷೆ ಕೈಗೊಂಡು, ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಕಳೆದ ವಾರ ಆಲಿಕಲ್ಲು ಮಳೆ ಸುರಿದಿದ್ದರಿಂದ ರೈತರ ತೋಟಗಾರಿಕೆ, ಕೃಷಿ ಬೆಳೆಗಳ ನಷ್ಟವೂ ಸೇರಿದಂತೆ ಜನ-ಜಾನುವಾರುಗಳ ಪ್ರಾಣ ಹಾನಿ ಸಂಭವಿಸಿದೆ.  ಬರ ಪರಿಹಾರ ಕಾಮಗಾರಿಗಳು ಹಾಗೂ ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ಸರ್ಕಾರ ಕಳೆದ ವಾರ ಕೊಪ್ಪಳ ಜಿಲ್ಲೆಗೆ ೦೧ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಮಾ. ೧೧ ರಂದು ಪುನಃ ೫೦ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಿದೆ.  ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗೆ ನೀತಿ ಸಂಹಿತೆ ಜಾರಿಯ ಅಡ್ಡಿ ಇರುವುದಿಲ್ಲವಾದ್ದರಿಂದ, ಜನ-ಜಾನುವಾರು ಹಾನಿಗೆ ಕೂಡಲೆ ಪರಿಹಾರ ನೀಡಬೇಕು.  ತೋಟಗಾರಿಕೆ ಹಾಗೂ ಕೃಷಿ ಬೆಳೆ ನಷ್ಟಕ್ಕೆ ನಿಯಮಾನುಸಾರ ಪರಿಹಾರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಆಲಿಕಲ್ಲು ಮಳೆಯಿಂದ ಸಂಭವಿಸಿದ ಒಟ್ಟಾರೆ ನಷ್ಟದ ಪ್ರಮಾಣವನ್ನು ಅಂದಾಜಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮೀಕ್ಷಾ ಕಾರ್ಯ ಕೈಗೊಂಡು ಸಮಗ್ರವರದಿಯನ್ನು ಕೂಡಲೆ ಸರ್ಕಾರಕ್ಕೆ ಸಲ್ಲಿಸಬೇಕು.  ಈ ವರದಿಯ ಆಧಾರದಲ್ಲಿ ಪರಿಹಾರ ಕಾರ್ಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Please follow and like us:

Related posts

Leave a Comment