ಮನೋವಿಜ್ಞಾನದಿಂದ ಮಾನಸಿಕ ಒತ್ತಡ ನಿರ್ವಹಣೆ ಸಾಧ್ಯ ಕೃಷ್ಣ ಡಿ.ಉದಪುಡಿ.

ಕೊಪ್ಪಳ, ಜು.20 ಮನುಷ್ಯನ ದಿನನಿತ್ಯದ ಜಂಜಾಟಗಳ ಮಾನಸಿಕ
ಒತ್ತಡವನ್ನು ಮನೋವಿಜ್ಞಾನ ಬಳಕೆಯ ವಿಧಾನದಿಂದ ನಿರ್ವಹಣೆ ಮಾಡಬಹುದಾಗಿದೆ. ಈ
ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮಾನಸಿಕ ದೃಢತೆ ಪಡೆಯುವಂತೆ ಮಾಡುವ
ಉದ್ದೇಶದಿಂದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ.ಡಿ.ಉದಪುಡಿ ತಿಳಿಸಿದರು.
ಜಿಲ್ಲಾ ಪಂಚಾಯತಿ, ಯುನಿಸೆಫ್ ಹಾಗೂ 6th ಸೆನ್ಸ್ ಸಂಸ್ಥೆ ಇವರುಗಳ
ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಜು.20 ಮತ್ತು 21 ರಂದು
ಎರಡು ದಿನಗಳ ಕಾಲ ನಗರದ ಬಿ.ಎಸ್. ಪವಾರ್ ಹೊಟೆಲ್‍ನಲ್ಲಿ ಸೋಮವಾರದಿಂದ ಏರ್ಪಡಿಸಲಾಗಿರುವ
ಬದಲಾವಣೆ ನಿರ್ವಹಣೆ ಹಾಗೂ ನಾಯಕತ್ವದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು
ಮಾತನಾಡಿದರು.
ಸದಾ ಒಂದಿಲ್ಲೊಂದು ಸಾರ್ವಜನಿಕ ಜಂಜಾಟ ಹಾಗೂ
ಒತ್ತಡಗಳಲ್ಲಿ ಸಿಲುಕಿ ಮಾನಸಿಕ ನೆಮ್ಮದಿಯಿಂದ ವಂಚಿತಗೊಳ್ಳುತ್ತಿರುವ ಚುನಾಯಿತ
ಪ್ರತಿನಿಧಿಗಳು, ಮನೋವಿಜ್ಞಾನದ ಬಳಕೆಯ ವಿಧಾನದಿಂದ ಮಾನಸಿಕ ದೃಢತೆಯ ಜೊತೆಗೆ
ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಲಿದೆ. ಹಿಂದುಳಿದ ಜಿಲ್ಲೆಯಾದ
ಕೊಪ್ಪಳದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಉತ್ತಮವಾಗಿ ಹಾಗೂ ಕ್ಷಿಪ್ರಗತಿಯಲ್ಲಿ
ಅನುಷ್ಠಾನಗೊಳಿಸಲು ಈ ತರಬೇತಿ ಕಾರ್ಯಾಗಾರವು ಅತ್ಯುಪಯುಕ್ತವಾಗಿದೆ. ಈ ತರಬೇತಿಯು
ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಭಾಗಿತ್ವ ಹಾಗೂ
ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಪಂಚಾಯಿತಿಯ ವಿವಿಧ ಅಭಿವೃದ್ಧಿ
ಯೋಜನೆಗಳನ್ನು ಕಾರ್ಯಗತಗೊಳಿಸಲು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‍ನ
ಎಲ್ಲಾ ಸದಸ್ಯರು ತರಬೇತಿಯ ಸದುಪಯೋಗ ಪಡೆದುಕೊಂಡು, ಅಭಿವೃದ್ಧಿ ಕಾರ್ಯಗಳಿಗೆ
ಸಹಕರಿಸಬೇಕು ಎಂದು ಮನವಿ ಮಾಡಿದರು. ಈಗಾಗಲೇ ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತ್
ಅಭಿವೃದ್ಧಿ ಅಧಿಕಾರಿಗಳ ಮೂರು ಗುಂಪುಗಳಿಗೆ ತರಬೇತಿ ನೀಡಲಾಗಿದೆ. ಮುಂದಿನ
ದಿನಮಾನಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೂ ಸಹ ಈ ತರಬೇತಿಯನ್ನು
ವಿಸ್ತರಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷ್ಣ
ಉದಪುಡಿ ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಜಿಲ್ಲಾ
ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗಳ ಪ್ರಯತ್ನದಿಂದಾಗಿ ಇಂದು ಈ ತರಬೆತಿಯು ಕಾರ್ಯರೂಪ ಪಡೆದುಕೊಂಡಿದೆ. ಈ ಹಿಂದೆ
ಇದೇ ತರಬೇತಿ ಪಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿಯಲ್ಲಿ
ಸಾಕಷ್ಟು ಧನಾತ್ಮಕ ಬದಲಾವಣೆ ಕಂಡು ಬಂದಿದ್ದು, ಈ ಕಾರಣದಿಂದಾಗಿಯೇ ಈ ತರಬೇತಿಯನ್ನು
ಜಿಲ್ಲಾ ಪಂಚಾಯಿತಿ ಸದಸ್ಯರಿಗೂ ವಿಸ್ತರಿಸಲಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯರು ಈ
ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಂಗಳೂರಿನ 6th ಸೆನ್ಸ್
ಸಂಸ್ಥೆಯ ತರಬೇತುದಾರ ಡಾ|| ಅಬ್ರಹಾಂ ರೂಬಿ ಮಾತನಾಡಿ, ಬದಲಾವಣೆ ನಿರ್ವಹಣೆ ಹಾಗೂ
ನಾಯಕತ್ವದ ತರಬೇತಿಯು ಮನೋವಿಜ್ಞಾನಕ್ಕೆ ಸಂಬಂಧಪಟ್ಟ ವೈಜ್ಞಾನಿಕ ತರಬೇತಿಯಾಗಿದ್ದು,
ಜಿಲ್ಲಾ ಪಂಚಾಯತ್ ಸದಸ್ಯರಲ್ಲಿ ತಮ್ಮ ಸಂಪೂರ್ಣ ಸಾಮಥ್ರ್ಯವನ್ನು ಬಳಸುವ ಕೌಶಲ್ಯವನ್ನು
ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ನಮ್ಮ ಜೀವನ ಮಟ್ಟವನ್ನು
ಸುಧಾರಿಸಿಕೊಳ್ಳುವಲ್ಲಿ ಮನೋವಿಜ್ಞಾನವು ಅತ್ಯಂತ ಸಹಕಾರಿಯಾಗಿದ್ದು, ಅದನ್ನು ನಮ್ಮ
ಏಳ್ಗೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಈ ತರಬೇತಿಯ ಮೂಲಕ ತಿಳಿಸಲಾಗುತ್ತದೆ ಎಂದು
ಅವರು ತಿಳಿಸಿದರು.
ತರಬೇತಿ ಕಾರ್ಯಗಾರದಲ್ಲಿ ಜಿಲ್ಲಾ ಪಂಚಯತಿಯ ಸದಸ್ಯರುಗಳು,
ವಿವಿಧ ತಾಲೂಕಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರುಗಳು, ಜಿಲ್ಲಾ ಪಂಚಾಯತ್ ಯೋಜನಾ
ನಿರ್ದೇಶಕ ರವಿ ಬಸರಿಹಳ್ಳಿ, ಯುನಿಸೆಫ್‍ನ ರಾಜ್ಯಮಟ್ಟದ ಅಧಿಕಾರಿ ರಾಮಸ್ವಾಮಿ ಕೃಷ್ಣನ್,
ಕೊಪ್ಪಳ ಯುನಿಸೆಫ್‍ನ ಹರೀಶ ಜೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:

Leave a Reply