fbpx

ಕನ್ನಡನೆಟ್ ಡಾಟ್‌ಕಾಂ ಗೆ “ಅಂತಾರಾಷ್ಟ್ರೀಯ ಮಂಥನ್ ಮಾಧ್ಯಮ ಪ್ರಶಸ್ತಿ”

ಕೊಪ್ಪಳ : ಸಿರಾಜ್ ಬಿಸರಳ್ಳಿ ಸಂಪಾದಕತ್ವದ ಇ-ಪತ್ರಿಕೆ ಕೊಪ್ಪಳದ ಕನ್ನಡನೆಟ್ ಡಾಟ್‌ಕಾಂ ೨೦೧೩ನೇ ಸಾಲಿನ ಮಂಥನ್ ಮಾಧ್ಯಮ ಪ್ರಶಸ್ತಿಗೆ ಪಾತ್ರವಾಗಿದೆ. 
ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್‌ರ ಉಪಸ್ಥಿತಿಯಲ್ಲಿ ದೆಹಲಿಯ ಇಂಡಿಯಾ ಹೆಬಿಟೆಟ್ ಸೆಂಟರ್‌ನ ಸ್ಟೇನ್ ಅಡಿಟೋರಿಯಂನಲ್ಲಿ ದಿ ೫-೧೨-೨೦೧೩ರಂದು ನಡೆದ ಅಂತರಾಷ್ಟ್ರಿಯ ಮಟ್ಟದ ಸಮಾರಂಭದಲ್ಲಿ ಸಿರಾಜ್ ಬಿಸರಳ್ಳಿಯವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಿಜಿಟಲ್ ಎಂಪಾವರಮೆಂಟ್ ಪೌಂಡೇಶನ್ ಮತ್ತು ವರ್ಲ್ಡ ಸಮಿಟ್,ಇಂಟೆಲ್,ಫೇಸ್ ಬುಕ್,ಮೈಕ್ರೋಸಾಪ್ಟ್ ,ಯುನಿಸೆಫ್,ವೋಡಾಪೋನ್  ಸೇರಿದಂತೆ ಮೂವತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಟ್ಟದ ಸಂಘ,ಸಂಸ್ಥೆಗಳ ಆಶ್ರಯದಲ್ಲಿ ನೀಡಲಾಗುವ ಈ ಪ್ರಶಸ್ತಿಯು ದಕ್ಷಿಣ ಏಷಿಯಾ ಮತ್ತು ಏಷಿಯಾ ಪೆಸಿಫಿಕ್ ರಾಷ್ಟ್ರಗಳ ಸುದ್ದಿ ಸಂಸ್ಥೆಗಳಿಗೆ ನೀಡಲಾಗುತ್ತದೆ. ಮಾಹಿತಿ ತಂತ್ರಜ್ಞಾನವನ್ನು ಗ್ರಾಮೀಣ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಬಳಸುವ ಮೂಲಕ ಸಮಾಜದ ಅಭಿವೃದ್ದಿಗೆ ಮತ್ತು ಜನಸಾಮಾನ್ಯರಿಗೆ ತಂತ್ರಜ್ಞಾನದ ಲಾಭವನ್ನು ತಲುಪಿಸುವ ಕೆಲಸ ಮಾಡುತ್ತಿರುವ ವಿವಿಧ ಸಂಸ್ಥೆಗಳ ಸೇವೆ ಮತ್ತು ಕಾರ‍್ಯಚಟುವಟಿಕೆಯನ್ನು ಗುರುತಿಸುವ ಮೂಲಕ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಕನ್ನಡನೆಟ್ ಡಾಟ್ ಕಾಂ ಕಳೆದ ೪ ವರ್ಷಗಳಿಂದ ಉತ್ತರ ಕರ್ನಾಟಕದ ಪ್ರಪ್ರಥಮ ಆನ್ ಲೈನ್ ಪತ್ರಿಕೆಯಾಗಿ ಸ್ಥಳೀಯ ಮಾಹಿತಿ,ಸುದ್ದಿ ಹಾಗೂ ವಿವರಗಳನ್ನು ನೀಡುವ ಮೂಲಕ ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ  ಲಕ್ಷಾಂತರ ಓದುಗರನ್ನು ತಲುಪುತ್ತಿದೆ.
ಕನ್ನಡ ಭಾಷೆಯಲ್ಲಿಯೇ ಸುದ್ದಿ ಮತ್ತು ಮಾಹಿತಿಯನ್ನು ನೀಡುವ ಮೂಲಕ ಪ್ರಾದೇಶಿಕ ಭಾಷೆಯನ್ನು ಇಂಟರ್‌ನೆಟ್‌ನಲ್ಲಿ  ಬಳಸುವ ಮತ್ತು ಅದರ ಮೂಲಕ ಭಾಷೆಯ ಅಭಿವೃದ್ದಿ ಕೆಲಸದಲ್ಲಿ ತೊಡಗಿರುವ ಹಾಗೂ ತಂತ್ರಜ್ಞಾನದ ಸದುಪಯೋಗವನ್ನು ಜನಸಮುದಾಯಕ್ಕೆ, ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿರುವ ಸಿರಾಜ್ ಬಿಸರಳ್ಳಿ ಸಂಪಾದಕತ್ವದ ಇ-ಪತ್ರಿಕೆ ಕನ್ನಡನೆಟ್ ಡಾಟ್ ಕಾಂ ನ ಕಾರ‍್ಯಚಟುವಟಿಕೆಗೆ ಈ ಪ್ರಶಸ್ತಿ ನೀಡಲಾಗಿದೆ.
ಈ ಪ್ರಶಸ್ತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನೇಪಾಳ,ಬಾಂಗ್ಲಾದೇಶ,ಪಾಕಿಸ್ತಾನ, ಶ್ರೀಲಂಕಾ,ನ್ಯೂಜಿಲೆಂಡ್ ಸೇರಿದಂತೆ ೩೨ ದೇಶಗಳ ವಿವಿಧ ಆನ್‌ಲೈನ್ ಪತ್ರಿಕೆಗಳು ಸ್ಪರ್ಧಿಯಲ್ಲಿದ್ದವು. ಪ್ರಾದೇಶಿಕ ಮಟ್ಟದಲ್ಲಿ ಪ್ರಾದೇಶಿಕ ಭಾಷೆಯನ್ನು ಬಳಸಿಕೊಂಡು ಲಕ್ಷಾಂತರ ಓದುಗರನ್ನು ತಲುಪಿರುವ ಕನ್ನಡನೆಟ್ ಡಾಟ್ ಕಾಂನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಡೆಫ್ ಸಂಸ್ಥೆಯ ಓಸ್ಮಾ ಮಂಜರ್,ಡಬ್ಲುಎಸ್‌ಎನ ಡಾ.ಪ್ರೊ.ಪೀಟರ್ ಎ.ಬ್ರುಕ್, ನಾಸ್ಕಾಂನ ಅಧ್ಯಕ್ಷರಾದ ಡಾ.ಚಂದ್ರಶೇಖರ , ಡಾ.ಅಜಯ್ ಕುಮಾರ್ ಮಾಹಿತಿ ತಂತ್ರಜ್ಞಾನ ಇಲಾಖೆಯ ಜಂಟಿ ಕಾರ‍್ಯದರ್ಶಿ, ಸುಪ್ರಿಯಾ ಸಾಹು ಜಂಟಿ ಕಾರ‍್ಯದರ್ಶಿ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ ಖಾತೆ,ಯುನೆಸ್ಕೋದ ಪ್ರತಿನಿಧಿಗಳು ಸೇರಿದಂತೆ ವಿವಿಧ ದೇಶಗಳ ಅಮಂತ್ರಿತ ಗಣ್ಯರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!