ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಂದ ನರೇಗಲ್ ಪುನರ್ವಸತಿ ಗ್ರಾಮದ ೨೩೩ ಮನೆಗಳ ವಿತರಣೆ

 ಕೊಪ್ಪಳ ತಾಲೂಕು ಓಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನರೇಗಲ್ ಪುನರ್ವಸತಿ ಗ್ರಾಮಸ್ಥರಿಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಸುಮಾರು ೨೩೩ ಮನೆಗಳ ಹಕ್ಕುಪತ್ರ ವಿತರಣೆ ಮಾಡಿದರು.
 

ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಆಸರೆ ಮನೆಗಳ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು, ಈ ಹಿಂದೆ ನೆರೆ ಹಾವಳಿಯಿಂದ ಪದೇ ಪದೇ ಸಂತ್ರಸ್ಥರಾಗುತ್ತಿದ್ದವರಿಗೆ, ಪುನರ್ವಸತಿ ಗ್ರಾಮ ಕಲ್ಪಿಸಿ, ಅವರಿಗೆ ಹೊಸ ಮನೆಗಳನ್ನು ಕೊಡುವ ಯೋಜನೆ, ವಿಳಂಬವಾಗಿಯಾದರೂ, ಇದೀಗ ಫಲಾನುಭವಿಗಳಿಗೆ ಮನೆಗಳನ್ನು ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ.  ಹಕ್ಕುಪತ್ರ ಪಡೆದ ಫಲಾನುಭವಿಗಳು, ತಪ್ಪದೆ ಆಯಾ ಮನೆಗಳ ಪ್ರವೇಶ ಮಾಡಿ, ವಾಸ ಮಾಡಬೇಕು.  ವಿಪ್ರೋ ಕಂಪನಿಯವರ ಸಹಭಾಗಿತ್ವದಲ್ಲಿ ನರೇಗಲ್‌ನಲ್ಲಿ ಸುಮಾರು ೪೩೮ ಮನೆಗಳನ್ನು ನಿರ್ಮಿಸಲಾಗಿದ್ದು, ಈ ಪೈಕಿ ಇದೀಗ ಒಟ್ಟು ೨೩೩ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಪ್ರೋ ಕಂಪನಿಯ ಅಡ್ವೈಸರ್ ವಿಜಯಕುಮಾರ್ ಅವರು ಮಾತನಾಡಿ, ಕಂಪನಿಯ ವತಿಯಿಂದ ಉತ್ತಮವಾಗಿ ಮನೆಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿಗಳಿಗೆ ಮನೆಗಳ ವಿತರಣೆ ಕಾರ್ಯ ಸಾಕಾರಗೊಂಡಿದ್ದಕ್ಕೆ ಸಂತಸವಾಗಿದೆ ಎಂದರು.
  ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿ.ಪಂ. ಸದಸ್ಯೆ ವನಿತಾ ಗಡಾದ್, ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ತಾ.ಪಂ. ಸದಸ್ಯರುಗಳಾದ ಶ್ರೀನಿವಾಸ ಹ್ಯಾಟಿ, ರಮೇಶ್, ಕೊಪ್ಪಳ ತಹಸಿಲ್ದಾರ್ ತಿಪ್ಪೇರುದ್ರಸ್ವಾಮಿ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:
error