You are here
Home > Koppal News > ತೆಲುಗು ನಟ ಉದಯ್ ಕಿರಣ್ ಆತ್ಮಹತ್ಯೆ

ತೆಲುಗು ನಟ ಉದಯ್ ಕಿರಣ್ ಆತ್ಮಹತ್ಯೆ

ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಉದಯ್ ಕಿರಣ್ ರವಿವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 33 ವರ್ಷ ವಯಸ್ಸಾಗಿತ್ತು.

ಕೌಟುಂಬಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿರುವ ಉದಯ್‌ಕಿರಣ್, ಹೈದರಾಬಾದ್-ಪೂಂಜಾಗುಟ್ಟದ ಶ್ರೀನಗರ್ ಕಾಲನಿಯಲ್ಲಿರುವ ತನ್ನ ನಿವಾಸದಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
1980ರ ಜನವರಿ 26ರಂದು ಜನಿಸಿದ್ದ ಉದಯ್ ಕಿರಣ್‌ರ 34ನೆ ವರ್ಷದ ಜನ್ಮದಿನಕ್ಕೆ 20 ದಿನಗಳಷ್ಟೇ ಬಾಕಿಯಿದ್ದವು. ವರ್ಷದ ಹಿಂದಷ್ಟೇ ಅವರು ವಿಶಿಷ್ಟಾ ಎಂಬಾಕೆಯೊಂದಿಗೆ ಮದುವೆಯಾಗಿದ್ದರು. ಖಾಸಗಿ ಕೆಲಸದ ನಿಮಿತ ಪತ್ನಿ ಮಣಿಕೊಂಡಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಉದಯ್ಕಿರಣ್ ಒಬ್ಬರೇ ಇದ್ದರು. ವಿಶಿಷ್ಟಾ ಅನೇಕ ಬಾರಿ ಪತಿಗೆ ಮೊಬೈಲ್ ಫೋನ್‌ಗೆ ಕರೆಗಳನ್ನ ಮಾಡಿದರೂ ಯಾವುದೇ ಉತ್ತರ ಬಾರದಿದ್ದಾಗ ಈ ಬಗ್ಗೆ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅಕ್ಕಪಕ್ಕದವರು ಉದಯ್‌ಕಿರಣ್‌ರ ಮನೆಗೆ ತೆರಳಿ ನೋಡಿದಾಗ ನಟ ನೇಣುಬಿಗಿದುಕೊಂಡಿರುವುದು ತಿಳಿದುಬಂದಿದೆ. ಕೂಡಲೇ ಅವರನ್ನು ಅಪೋಲೊ ಆಸ್ಪತ್ರೆಗೆ ಕರೆದೊಯ್ಯುಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಸಿನಿಮಾ ವೃತ್ತಿ ಜೀವನ
ಉದಯ್ ಕಿರಣ್ 17ರ ಹರೆಯದಲ್ಲೇ (2000ರಲ್ಲಿ) ತೇಜ ನಿರ್ದೇಶನದ ‘‘ಚಿತ್ರಂ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನುವ್ವ ನೇನು, ಮನಸಂತಾ ನುವ್ವೆ, ಶ್ರೀರಾಮ್ ಮೊದಲಾದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಉದಯ್ ಕಿರಣ್ ಭಾರೀ ಭರವಸೆ ಮೂಡಿಸಿದ್ದರು. ಈ ಪೈಕಿ ನುವ್ವ ನೇನು (2001ರಲ್ಲಿ) ಚಿತ್ರದ ನಟನೆಗೆ ಉತ್ತಮ ನಟ ಫಿಲಂಫೇರ್ ಪ್ರಶಸ್ತಿ ಬಂದಿತ್ತು. ಪದ್ಮಶ್ರೀ ಕಮಲ ಹಾಸನ್ ಬಳಿಕ ಕಿರಿ ವಯಸ್ಸಿನ ನಟನೊಬ್ಬ ಫಿಲಂಫೇರ್ ಪ್ರಶಸ್ತಿಗೆ ಪಾತ್ರರಾದ ಕೀರ್ತಿಗೆ ಅವರು ಪಾತ್ರರಾಗಿದ್ದರು.
2006ರಲ್ಲಿ ಪೊಯಿ ಎಂಬ ಚಿತ್ರದ ಮೂಲಕ ಉದಯ್‌ಕಿರಣ್ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದರು. ಒಟ್ಟು 19 ಚಿತ್ರಗಳಲ್ಲಿ ನಟಿಸಿದ ಈ ಚಾಕಲೇಟ್ ಹೀರೋ ಕಳೆದ ಕೆಲವು ವರ್ಷಗಳಿಂದ ಸರಿಯಾದ ಅವಕಾಶಗಳಿಲ್ಲದೇ ಭಾರೀ ಸಂಕಷ್ಟದ ಸ್ಥಿತಿಯಲ್ಲಿದ್ದರೆನ್ನಲಾಗಿದೆ. ಅವರು ಕೆಲವು ಚಿತ್ರಗಳಲ್ಲಿ ನಟಿಸಿದರಾದರೂ ಯಾವುದೇ ಚಿತ್ರವೂ ಹಿಟ್ ಆಗದೇ ಇದ್ದದ್ದು ಅವರಲ್ಲಿ ಹತಾಶೆ ಮೂಡಿಸಿತ್ತೆನ್ನಲಾಗಿದೆ. ಬಹುಶಃ ಇದೂ ಕೂಡ ಆತ್ಮಹತ್ಯೆಗೆ ಕಾರಣವಿದ್ದಿರಬಹುದೆಂದು ಶಂಕಿಸಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Top