’ಕಿಷ್ಕಿಂದ’ ನಗರ ಸಾರಿಗೆ ಬಸ್‌ಗಳ ಉದ್ಘಾಟನೆ

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ೧೭ ಕೋಟಿ ರೂ. ಲಾಭ- ರಾಮಲಿಂಗಾರೆಡ್ಡಿ
 ಬರೀ ನಷ್ಟವನ್ನೇ ಎದುರಿಸುತ್ತಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇದೇ ಮೊದಲ ಬಾರಿಗೆ ಲಾಭದತ್ತ ಮುಖ ಮಾಡಿದ್ದು, ಈ ಬಾರಿ ೧೭. ೫೧ ಕೋಟಿ ರೂ. ಲಾಭ ಗಳಿಸಿದೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.
  ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣ ಆವರಣದಲ್ಲಿ ಏರ್ಪಡಿಸಲಾಗಿದ್ದ ’ಕಿಷ್ಕಿಂದ’ ನಗರ ಸಾರಿಗೆ ಬಸ್‌ಗಳ ಉದ್ಘಾಟನೆ ಹಾಗೂ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  

  ಪ್ರಯಾಣಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈವರೆಗೂ ಬರೀ ನಷ್ಟವನ್ನೇ ಎದುರುಸುತ್ತಿತ್ತು.  ಆದರೆ ಈ ಬಾರಿ ಪ್ರಥಮ ಬಾರಿಗೆ ಸಂಸ್ಥೆಯು ೧೭. ೫೧ ಕೋಟಿ ರೂ. ಲಾಭ ಗಳಿಸಿದೆ.  ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯು ೭೫ ಲಕ್ಷ ರೂ. ನಷ್ಟದಲ್ಲಿತ್ತು. ಆಂದ್ರಪ್ರದೇಶದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತಂತೆ ಉಂಟಾಗಿರುವ ಗಲಾಟೆ-ಗದ್ದಲದ ವಾತಾವರಣ ಇಲ್ಲದೇ ಇದ್ದಲ್ಲಿ, ಲಾಭದ ಪ್ರಮಾಣ ಇನ್ನಷ್ಟು ಹೆಚ್ಚು ಇರುತ್ತಿತ್ತು.  ಕೇಂದ್ರ ಸರ್ಕಾರದ ನರ್ಮ್ ಯೋಜನೆಯಡಿ ಕೊಪ್ಪಳ ನಗರಕ್ಕೆ ೨೦ ಹಾಗೂ ಗಂಗಾವತಿಗೆ ೨೫ ನಗರ ಸಾರಿಗೆ ಬಸ್‌ಗಳನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ ಕೊಪ್ಪಳದಲ್ಲಿ ಸದ್ಯ ೧೨ ಕಿಷ್ಕಿಂದ ನಗರ ಸಾರಿಗೆ ಬಸ್‌ಗಳನ್ನು ಪ್ರಾರಂಭಿಸಲಾಗಿದೆ.  ನರ್ಮ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ. ೮೦ ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. ೨೦ ರಷ್ಟು ವೆಚ್ಚವನ್ನು ಭರಿಸುವ ಮೂಲಕ ಈ ಹೊಸ ಬಸ್‌ಗಳನ್ನು ನೀಡಲಾಗಿದೆ.  ಜಿಲ್ಲೆಯ ಮಸಬಹಂಚಿನಾಳ, ತಾಳಕೇರಿ, ಗುನ್ನಾಳ, ಬಳ್ಳೂಟಗಿ, ಹಿರೇಮ್ಯಾಗೇರಿ ಗ್ರಾಮಗಳಲ್ಲಿ ನೂತನವಾಗಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು.  ತಾವರಗೇರಾ, ಕವಲೂರು, ಸಿದ್ದಾಪುರ, ಕಾತರಕಿ ಗುಡ್ಲಾನೂರು, ಇರಕಲ್‌ಗಡ, ಮುನಿರಾಬಾದ, ಬಿಸರಳ್ಳಿ ಬಸ್ ನಿಲ್ದಾಣಗಳ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು.  ಅಗತ್ಯ ಬಿದ್ದಲ್ಲಿ ಇನ್ನಷ್ಟು ಕಡೆ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಈ.ಕ.ರ.ಸಾ.ಸಂಸ್ಥೆಯಲ್ಲಿ ೪೭೫ ಚಾಲಕ, ೫೧೭ ಚಾಲಕ-ಕಂ-ನಿರ್ವಾಹಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಂವಿಧಾನದ ೩೭೧-ಜೆ ಕಲಂ ತಿದ್ದುಪಡಿ ಸೌಲಭ್ಯ ಅನುಷ್ಠಾನಗೊಳಿಸಿದ ನಂತರ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.  ಅಲ್ಲದೆ  ೨೫೯- ಭದ್ರತಾ ರಕ್ಷಕರು, ೩೯- ಸಹಾಯಕ ಸಂಚಾರ ನಿರೀಕ್ಷಕರು ಮತ್ತು ೫೦೦- ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದ್ದು, ಇವೆಲ್ಲವೂ ಸಹ ಸಂವಿಧಾನದ ೩೭೧-ಜೆ ಕಲಂ ತಿದ್ದುಪಡಿ ಸೌಲಭ್ಯ ಅನುಷ್ಠಾನಗೊಳಿಸಿದ ನಂತರವೇ ನೇಮಕ ಪ್ರಕ್ರಿಯೆ ನಡೆಸಲಾಗುವುದು.  ಸಾರಿಗೆ ಸಂಸ್ಥೆಯಲ್ಲಿ ಆದಾಯ ಸೋರಿಕೆಯನ್ನು ತಡೆಗಟ್ಟಿ, ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಲು ಸಂಸ್ಥೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಳು, ಚಾಲಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಮಾತನಾಡಿ, ಅಪಘಾತ ರಹಿತ ಚಾಲನೆ ನಡೆಸಿ ಪ್ರಶಸ್ತಿ ಪಡೆದ ಚಾಲಕರು ಅಭಿನಂದನಾರ್ಹರು.  ಎಲ್ಲ ಚಾಲಕರೂ ಅಪಘಾತ ರಹಿತ ಚಾಲನೆ ಸೇವೆ ಒದಗಿಸುವಂತಾಗಬೇಕು.  ಕೊಪ್ಪಳ ಜಿಲ್ಲೆಯ ಕಾರಟಗಿ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ.  ಪ್ರಯಾಣಿಕರು ಖಾಸಗಿ ಬಸ್ ಪ್ರಯಾಣಕ್ಕಿಂತಲೂ, ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಮೊದಲ ಆದ್ಯತೆ ನೀಡುವಂತೆ ಕರೆ ನೀಡಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೊಪ್ಪಳ ನಗರಕ್ಕೆ ನೂತನವಾಗಿ ನಗರ ಸಾರಿಗೆ ಸೇವೆ ಪ್ರಾರಂಭಿಸಿರುವುದು ಅತ್ಯಂತ ಸ್ವಾಗತಾರ್ಹವಾಗಿದ್ದು, ದುಬಾರಿಯ ಈ ದಿನಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಬೇಕೆನ್ನುವ, ನಾಗರೀಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.  ಗ್ರಾಮೀಣ ಪ್ರದೇಶಗಳಿಗೂ ಇದೇ ರೀತಿ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆಯ ಬೇಡಿಕೆ ಇನ್ನೂ ಈಡೇರಬೇಕಿದೆ.  ಕೊಪ್ಪಳ-ಹೊಸಪೇಟೆ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸಲು ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
  ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಬಸ್‌ಗಳು ಅತ್ಯಂತ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದ್ದು, ಇದಕ್ಕಾಗಿ ಪ್ರತಿ ವರ್ಷ ಪ್ರಶಸ್ತಿಯನ್ನು ಗಳಿಸುತ್ತಿದೆ.  ಸಾರಿಗೆ ವ್ಯವಸ್ಥೆ ಸುಗಮವಾಗಿ ನಡೆಯಬೇಕಿದ್ದಲ್ಲಿ, ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ.  ಸಾರಿಗೆ ಸಂಸ್ಥೆಯಲ್ಲಿನ ಆದಾಯ ಸೋರಿಕೆ ತಡೆಗಟ್ಟಲು ಸಂಸ್ಥೆಯು ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ ಎಂದರು.
  ಸಂಸದ ಶಿವರಾಮಗೌಡ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿ.ಪಂ. ಸದಸ್ಯರುಗಳಾದ ವಿಜಯಲಕ್ಷ್ಮಿ ರಾಮಕೃಷ್ಣ, ಈರಪ್ಪ ಕುಡಗುಂಟಿ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಅವರು ಪ್ರಾರಂಭದಲ್ಲಿ ಸ್ವಾಗತಿಸಿದರು.  ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್ ವಂದಿಸಿದರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.
Please follow and like us:
error