ಮಡೆಸ್ನಾನಕ್ಕೆ ಕಾನೂನಿನ ನಿಷೇಧ ಔಷಧಿಯಾಗಬಹುದೇ?

  ಕೆ. ದೇಜಪ್ಪ ವಕೀಲರು, ಉಡುಪಿ
ಕರಾವಳಿ ಕರ್ನಾಟಕದ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿ ‘ಮಡೆಸ್ನಾನ’ದ ಆಚರಣೆಯು ಶತಮಾನಗಳಿಂದ ನಿರಂತರವಾಗಿ ನಡೆದು ಬರುತ್ತಿದ್ದರೂ ಇತ್ತೀಚೆಗೆ ಅದನ್ನು ವಿಸ್ತೃತವಾಗಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಸುದ್ದಿವಾಹಿನಿ ಗಳು ಬಿತ್ತರಿಸಿದ ಪರಿಣಾಮಗಾಗಿ, ಅದರ ಪರ ಮತ್ತು ವಿರುದ್ಧ ಭುಗಿಲೆದ್ದ ವಿಚಾರ ಸಂಕಿರಣ ಜನರ ಯೋಚನೆಗೆ ಸಾಕಷ್ಟು ಉರುವಲನ್ನು ನೀಡಿವೆ. ಈಗ ಕೊಂಚ ಶಮನಗೊಂಡಿರುವ ಆ ಚರ್ಚೆಯನ್ನು ಇನ್ನೊಮ್ಮೆ ಉಲ್ಬಣಿಸುವುದು ಈ ಲೇಖನದ ಉದ್ದೇಶವಲ್ಲ. ಇದರ ವ್ಯಾಪ್ತಿ ಅಂತಹ ಆಚರಣೆಗಳಿಗೆ ಕಾನೂನಿನ ನಿಷೇಧ ಔಷಧಿಯಾಗಬಹುದೇ ಎಂಬುದಕ್ಕಷ್ಟೇ ಸೀಮಿತ. ಒಂದು ಸಮಾಜದಲ್ಲಿ ಘರ್ಷಣೆ ಅಥವಾ ವಿರೋಧದ ಮೂಲ ಒಬ್ಬರ ‘ಸರಿ’ ಇನ್ನೊಬ್ಬರ ದೃಷ್ಟಿಯಲ್ಲಿ ‘ತಪ್ಪು’ ಎಂದಾಗುವುದು. ಒಂದೇ ಕೃತ್ಯವನ್ನು ಒಬ್ಬರು ಸರಿಯೆಂದು, ಇನ್ನೊಬ್ಬರು ತಪ್ಪೆಂದು ಗ್ರಹಿಸುವುದು ಅವರವರ ಭಾವಕ್ಕನುಗುಣವಾಗಿ. ಕಾನೂನು, ಇಂತಹ ಮಾನವ ಸಂಬಂಧಗಳನ್ನು ಕ್ರೋಡೀಕರಿಸಿ, ನಿಯಂತ್ರಿಸುವ ಒಂದು ಸಾಧನ. ಅದು, ಸಮಾಜದ ಸಹಬಾಳ್ವೆಯಲ್ಲಿ ತಪ್ಪು-ಸರಿ ಗಳನ್ನು ವಿಶ್ಲೇಷಿಸುವ, ಮಾಡು-ಬಿಡುಗಳನ್ನು ಸೂಚಿಸುವ ಮಾರ್ಗದರ್ಶಿ. ನ್ಯಾಯವನ್ನು ಕಾಪಾಡಲು ರೂಪಿಸುವ ಒಂದು ವ್ಯವಸ್ಥೆಯೇ ಕಾನೂನು.
ಅದರ ಮುಖ್ಯ ಉದ್ದೇಶ ಪಾಲಕರಿಗೆ ರಕ್ಷೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ. ಆದರೆ ನಮ್ಮ ವಿಷಯಕ್ಕೆ ಬೇಕಾದ ಅಂಶವೆಂದರೆ ಮಾನವನ ನಂಬಿಕೆ ಯನ್ನು ಕಾನೂನಿನಿಂದ ನಿಯಂತ್ರಿಸಲು ಸಾಧ್ಯವೇ ಎಂಬುದು.ಈ ಚಿಂತನೆಗೆ ಪೂರಕವಾಗಿ ಒಂದು ಉದಾಹರಣೆಯನ್ನು ಗಮನಿಸಿ. ಕೇರಳದ ಶಬರಿಮಲೆಯಲ್ಲಿ ‘ಮಕರ ಜ್ಯೋತಿ’ಯನ್ನು ವೀಕ್ಷಿಸಲು ಸೇರುವ ಅಸಂಖ್ಯಾತ ಭಕ್ತಾದಿ ಗಳಲ್ಲಿ ಹಲವರು ನೂಕುನುಗ್ಗಲಿನಿಂದ ಸಾಯುತ್ತಾರೆ. ಕೆಲವು ವರ್ಷಗಳ ಹಿಂದೆ, ಜ್ಯೋತಿವೀಕ್ಷಣೆಗೆಂದು ಲಕ್ಷಾಂತರ ಜನರು ಜಮಾಯಿಸಿದ್ದ ಗುಡ್ಡವೊಂದು ಕುಸಿದುಬಿದ್ದು ಐವತ್ತಕ್ಕೂ ಹೆಚ್ಚು ಸಾವು ಸಂಭವಿಸಿತ್ತು.
ವಿಚಾರ ವಾದಿಗಳ ನಿರಂತರ ಪರಿಶ್ರಮದ ಫಲವಾಗಿ, ಅಯ್ಯಪ್ಪ ದೇವಾಲಯದ ಆಡಳಿತ ಮಂಡಳಿ ಮತ್ತು ಅಲ್ಲಿಯ ರಾಜ್ಯ ಸರಕಾರ ಆ ಜ್ಯೋತಿ ಯು ದೈವಿಕವಲ್ಲ, ಮಾನವ ಸೃಷ್ಟಿಯೆಂಬುದನ್ನು ಕೇರಳ ಉಚ್ಚನ್ಯಾಯಾಲಯದಲ್ಲಿ ಒಪ್ಪಿಕೊಂಡಿವೆ. ಇದು ಭಕ್ತಾದಿಗಳ ಮುಗ್ಧತೆಯನ್ನು ಬಳಸಿ ದುಡ್ಡುಮಾಡುವ ಒಂದು ಕುತಂತ್ರವೆಂಬುದೂ ಸಾಬೀತಾಗಿದೆ. ಈ ಗುಟ್ಟು ಈಗ ರಟ್ಟಾಗಿ ಸಾಕಷ್ಟು ಪ್ರಚಾರವೂ ದೊರೆತಿದೆ. ಆದರೂ ಜೀವದ ಹಂಗುತೊರೆದು ಆ ‘ಜ್ಯೋತಿ’ಯನ್ನು ವೀಕ್ಷಿಸುವ ಭಕ್ತಾದಿಗಳಿಗೆ ಈಗಲೂ ಕೊರತೆ ಯಿಲ್ಲ. ಮುಂದಿನ ಜನವರಿ 14ರಂದು ಈ ಪ್ರಕ್ರಿಯೆ ಪುನರಾವರ್ತಿಸುತ್ತದೆ.
ಇನ್ನೊಂದು ಉದಾಹರಣೆಯನ್ನು ತೆಗೆದು ಕೊಳ್ಳಿ. ಬೆಳಗಾವಿ ಜಿಲ್ಲೆಯ ಯೆಲ್ಲಮ್ಮ ಗುಡ್ಡದಲ್ಲಿ ನಡೆಯುವ ‘ಬೆತ್ತಲೆ ಸೇವೆ’ಯನ್ನು ಸರಕಾರ ನಿಷೇಧಿಸಿದೆ.ಅದರ ಪರಿಣಾಮವೇನಾಗಿದೆ ಯೆಂಬುದನ್ನು ತಿಳಿಯಲು ಮುಂದಿನ ಜಾತ್ರೆಯ ನಂತರ ಆ ಸಮಾಚಾರದತ್ತ ಸ್ವಲ್ಪಗಮನವಿಟ್ಟರೆ ಸಾಕು.ಅದು, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ನಿಷೇಧಿಸಿದ ಪರಿಣಾಮಕ್ಕಿಂತ ಹೆಚ್ಚು ಭಿನ್ನವಾಗಿಲ್ಲ.ಮತ್ತೊಂದು ಉದಾಹರಣೆಯನ್ನು ನೋಡಿ. ಕರಾವಳಿಯ ಮಾರಿಗುಡಿಗಳಲ್ಲಿ, ವರ್ಷದಲ್ಲಿ ಎರಡರಿಂದ ಮೂರು ಬಾರಿ ನಡೆಯುವ ‘ಮಾರಿಪೂಜೆ’ಯಲ್ಲಿ ಹಿಂದೆ ಅಪಾರ ಸಂಖ್ಯೆಯ ಕುರಿ, ಆಡು, ಕೋಳಿಗಳನ್ನು ಬಲಿಕೊಡಲಾಗುತ್ತಿತ್ತು.
ರಾಮಕೃಷ್ಣ ಹೆಗ್ಡೆಯವರು ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಇದನ್ನು ಸರಕಾರ ನಿಷೇಧಿಸಿತ್ತು. ಅದರ ಪರಿಣಾಮವಾಗಿ ಆಡು, ಕುರಿಗಳ ಬಲಿ ನಿಂತಿದೆಯಾದರೂ ಕೋಳಿಗಳ ‘ಅರ್ಪಣೆ’ ಇನ್ನೂ ಮುಂದುವರಿದಿದೆ.ಮೇಲಿನವು ಕೇವಲ ಸಾಂಕೇತಿಕ ಉದಾ ಹರಣೆಗಳು. ಇಂತಹವುಗಳನ್ನು ಒಂದರ ಹಿಂದೊಂದರಂತೆ ಉಲ್ಲೇಖಿಸಬಹುದು. ಇವುಗಳಲ್ಲಿ ಕಾನೂನು ವಿಧಿಸಿದ ನಿಷೇಧ ಪುಸ್ತಕದ ಬದನೆಕಾಯಿಯಂತಾಗಿದೆ. ಇಲ್ಲಿ ನಾವು ಗಮನಿಸಬೇಕಾದುದೆಂದರೆ, ಎಲ್ಲಿಯವರೆಗೆ ಒಂದು ವಿಚಾರದ ಬಗ್ಗೆ ಜನರ ನಂಬಿಕೆ ಅಚಲವಾಗಿದೆಯೋ ಅಲ್ಲಿಯವರೆಗೆ ಅದರ ವಿರುದ್ಧ ಮಾಡುವ ಯಾವುದೇ ಬಾಹ್ಯ ಒತ್ತಡ ಪೂರ್ಣ ಫಲಕಾರಿಯಾಗದೆಂಬ ಅಂಶ.
ಯಾವುದೇ ಆಚರಣೆಯ ಮುಂದುವರಿಕೆಗೆ ಮೂಲಕಾರಣ ಅದರ ಹಿಂದಿರುವ ನಂಬಿಕೆ. ಈ ಮಾತನ್ನು ಧಾರ್ಮಿಕ ವಿಚಾರಗಳಿಗೆ ಹೇಳುವುದಾದರೆ, ಯಾವುದರಲ್ಲಿ ಜನರಿಗೆ ವಿಶ್ವಾಸವಿದೆಯೋ ಅದನ್ನ ವರು ಶ್ರದ್ಧೆಯಿಂದ ಪಾಲಿಸುತ್ತಾರೆ. ಕಾಲಕ್ರಮೇಣ ಅದು ವಿವೇಚನೆಯಿಲ್ಲದೆ ಆಚರಿಸಲ್ಪಡುವ ಸಂಪ್ರದಾಯವಾಗಬಹುದು. ಆದರೆ ಎಲ್ಲಿಯ ವರೆಗೆ ಆಚರಿಸುವವರ ಮನದಲ್ಲಿ ನಂಬಿಕೆ ದೃಢವಾಗಿದೆಯೋ ಅಲ್ಲಿಯವರೆಗೆ ಆ ಆಚರಣೆ ಮುಂದುವರಿಯುತ್ತದೆ.ಒಬ್ಬ ಒಂದು ಹರಕೆ ಹೊರುತ್ತಾನೆ; ಅವನ ಬಯಕೆ ಈಡೇರುತ್ತದೆ. ಆದರೆ ಇನ್ನೊಬ್ಬನ ಹರಕೆ ಅವನ ಬಯಕೆಯನ್ನು ಈಡೇರಿಸು ವುದಿಲ್ಲ. ಆದರೆ ಈ ಇಬ್ಬರಲ್ಲೂ ಕಂಡುಬರುವ ಸಮಾನಾಂಶವೆಂದರೆ, ಅವರಿಬ್ಬರೂ ತಮ್ಮ ತಮ್ಮ ಹರಕೆಗಳನ್ನು ಮುಂದುವರಿಸುವುದು.
ಮೊದಲಿನವ ತನ್ನ ಇಚ್ಛೆಯನ್ನು ಈಡೇರಿಸಿದ ದೇವರಿಗೆ ಇನ್ನೊಂದು ಹರಕೆಯ ಮೂಲಕ ತನಗಿರುವ ಅನನ್ಯ ಭಕ್ತಿಯನ್ನು ತೋರಿಸಿದರೆ, ಇನ್ನೊಬ್ಬ ತನ್ನ ಹಾರೈಕೆಯನ್ನು ಈಡೇರಿಸದ ದೇವರು ಇನ್ನೊಂದು ಹರಕೆಯಿಂದಾದರೂ ತನ್ನನ್ನು ಕರುಣಿಸಬಹುದೆಂದುಕೊಳ್ಳುತ್ತಾನೆ! ಇದು ಮಾನವ-ಮಾನವ ಮತ್ತು ಮಾನವ-ದೇವರ (ನಂಬಿಕೆಯ) ಸಂಬಂಧಗಳಲ್ಲಿ ಕಂಡುಬರುವ ಮುಖ್ಯ ವ್ಯತ್ಯಾಸ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 1532ನೆ ವರ್ಷಗಳಿಂದಲೂ ಮಡೆಸ್ನಾನ ಆಚರಣೆಯಲ್ಲಿತ್ತು ಎಂದು ವರದಿಯಾಗಿದೆ. ಇದರರ್ಥ ಅದಕ್ಕೂ ಹಿಂದೆ ಅದು ಇರಲಿಲ್ಲವೆಂದಲ್ಲ; ಆ ಪದ್ಧತಿಯ ಬಗ್ಗೆ ಇರುವ ದಾಖಲೆ ಆ ವರ್ಷದಿಂದೀಚಿನದ್ದು ಎಂದಷ್ಟೇ ಅರ್ಥ.
ಮಡೆಸ್ನಾನ ಆ ದೇವಾಲಯದಲ್ಲಿ ಅದಕ್ಕಿಂತಲೂ ನೂರಾರು ವರ್ಷಗಳ ಹಿಂದಿನಿಂದಲೂ ಇದ್ದಿರಬಹುದು; ಅದರ ದಾಖಲಾತಿಯಿಲ್ಲ ಅಷ್ಟೆ. ನಾವು 1532ನೇ ಇಸವಿಯನ್ನು ಆಧಾರವಾಗಿಟ್ಟುಕೊಂಡರೂ, ಸುಮಾರು ಐನ್ನೂರು ವರ್ಷಗಳಿಂದ ಈ ಪದ್ಧತಿ ಆಚರಣೆಯಲ್ಲಿತ್ತೆಂಬುದು ನಿರ್ವಿವಾದ. ಐದು ಶತಮಾನಗಳಿಂದ ನಿರಂತರವಾಗಿ ನಡೆದು ಬರು ತ್ತಿದ್ದ ಈ ಪದ್ಧತಿಗೆ ಮೊಟ್ಟ ಮೊದಲ ತೀವ್ರ ವಿರೋಧ ಕಂಡುಬಂದುದು 2011ರಲ್ಲಿ! ಇದನ್ನು ಕೂಡಲೇ ನಿಲ್ಲಿಸಬೇಕೆಂದು ಬಯಸುವ ವರು ನಿಜವಾಗಿಯೂ ಮಾನವನ ಮನೋಗುಣ ವನ್ನು ಅರಿಯರು.ಸಮಾಜ ಸುಧಾರಣೆಯೆಂದರೆ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲ್ಪಡುವ, ಅಥವಾ ಎಷ್ಟು ಚರ್ಚಿಸಿದರೂ ನಿರ್ಣಯಿಸಲಾರದೆ ನನೆಗುದಿಗೆ ತಳ್ಳಲ್ಪಡುವ ಸಂಸತ್ತಿನ ಮಸೂದೆ ಯಲ್ಲ.
ಅದು ಆಗು-ಹೋಗುಗಳನ್ನು ಗಮನಿಸದೆ, ತಮ್ಮ ಜೀವನವಿಡೀ ಹೋರಾಡಿದರೂ ಫಲಿಸದಿದ್ದರೆ, ಮುಂದಿನ ಮತ್ತು ತದ ನಂತರದ ತಲೆಮಾರುಗಳು ಮುಂದುವರಿಸಿ ಕೊಂಡು ಹೋಗುವ ಅವಿರತ ಪ್ರಯತ್ನ. ಉದಾಹರಣೆಗೆ ಅಸ್ಪಶತೆಯನ್ನು ಹೋಗ ಲಾಡಿಸಲು ಗಾಂಧೀಜಿಯವರಂತೆ ಎಷ್ಟು ಜನ ಜೀವನವಿಡೀ ಹೋರಾಡಿದರು, ಹೋರಾಡುತ್ತಿದ್ದಾರೆ? ಆದರೂ ನಮ್ಮಲ್ಲಿ ಅಸ್ಪಶತೆ ಕೊನೆಗೊಂಡಿದೆಯೇ? ಇಲ್ಲ, ಆದರೆ ಪ್ರಯತ್ನ ಮುಂದುವರಿಯುತ್ತಿದೆ; ಮುಂದುವರಿಯಬೇಕು.‘ಮಡೆ’ ಒಂದು ತುಳು ಶಬ್ದ; ಅದರ ಸಮೀಪದ ಕನ್ನಡಾನುವಾದ ‘ಎಂಜಲು’ ಎಂದಾಗುತ್ತದೆ. ಅಂದರೆ, ಮಡೆಸ್ನಾನವೆಂದರೆ ಎಂಜಲು ಸ್ನಾನ ಎಂದಾಯಿತು. ಸ್ನಾನ ಶುದ್ಧತೆಯ ಪ್ರತೀಕವಾದರೆ, ಎಂಜಲು ಅಶುದ್ಧತೆಯನ್ನು ಬಿಂಬಿಸುತ್ತದೆ.
ಇದೆಂತಹ ‘ಸ್ನಾನ’ವೆನ್ನುವುದು ತಾರ್ಕಿಕ ಆಕ್ಷೇಪ; ಆದರೆ ನಂಬಿಕೆಯ ತಳಹದಿ ತರ್ಕಶಾಸ್ತ್ರವಲ್ಲ! ನಂಬಿಕೆಯ ಆಧಾರದಲ್ಲಿ ಮುಂದುವರಿ ಯುವ ಯಾವುದೇ ಆಚರಣೆಯನ್ನು ತರ್ಕದಿಂದ ನಿಲ್ಲಿಸಲಾಗದು. ಅದನ್ನು ನಿಲ್ಲಿಸಲು ಈಗಿನ ನಂಬಿಕೆಗಿಂತ ಬಲಯುತವಾದ ನಂಬಿಕೆ ಯನ್ನು ಆಚರಿಸುವವರ ಮನದಲ್ಲಿ ಬೇರೂರಿಸ ಬೇಕು. ಉದಾಹರಣೆಗೆ, ಎಂಜಲೆಲೆಯ ಮೇಲೆ ಉರುಳಾಡುವುದರಿಂದ ರೋಗಗಳು ಹರಡುತ್ತವೆ ಯೆಂಬುದನ್ನು ತಿಳಿಸಲು ವಿಚಾರವಾದಿಗಳು ಶ್ರಮಿಸುತ್ತಿದ್ದಾರೆ. ಈ ಮಾತನ್ನು ಸಾಕಷ್ಟು ಅಧ್ಯಯನ ನಡೆಸಿದ ವರದಿಗಳಿಂದ ಅದರ ಆಚರಣಾಕರ್ತರಿಗೆ ಮನವರಿಕೆ ಮಾಡ ಬಹುದು. ಒಟ್ಟಿನಲ್ಲಿ ಅದನ್ನು ಆಚರಿಸುವವರಿಗೆ ಆ ಆಚರಣೆ ಬೇಡವಾಗಬೇಕು; ಆಗ ಮಾತ್ರ ಅದು ನಿಲ್ಲುತ್ತದೆ.
ಎಲ್ಲೆಲ್ಲಿ ಕಾನೂನು ಅಪಾರ ನಂಬಿಕೆಗೆ ವಿರುದ್ಧವಾಗಿ ಬಳಸಲ್ಪಟ್ಟಿದೆಯೋ ಅಲ್ಲಲ್ಲಿ ಅದು ಸೋತಿದೆ. ಅಲ್ಲದೆ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗದ ಕಾನೂನು ತನ್ನ ಹಿರಿಮೆಯನ್ನು ಕಳೆದುಕೊಳ್ಳುತ್ತದೆ. ಜನರಿಗೆ ಅದರ ಮೇಲಿರಬೇಕಾದ ಗೌರವ ಮತ್ತು ಭಯ ಮಾಯವಾಗುತ್ತದೆ. ಇದರಿಂದ ಒಳಿತಿಗಿಂತ ಹೆಚ್ಚು ಕೆಡುಕಾಗುತ್ತದೆ. ಕೆಲವೊಮ್ಮೆ ವಿರೋಧ ಒಂದು ಆಚರಣೆಯನ್ನು ನಿಲ್ಲಿಸುವ ಬದಲು ಅದನ್ನು ತೀವ್ರಗೊಳಿಸಬಹುದು. ನಿಶ್ಚಿತವಾಗಿ ಹೇಳಬಹುದಾದ ಒಂದು ಮಾತೆಂದರೆ ಮನಸ್ಸು ಯಾವುದನ್ನು ಬಲವಾಗಿ ನಂಬುತ್ತದೆಯೋ ಅದನ್ನು ಬುದ್ಧಿಯೂ ತಿರಸ್ಕರಿಸಲಾರದು (ಮೇಲೆ ಹೇಳಿದ ಮಕರ ಜ್ಯೋತಿ ಇದಕ್ಕೊಂದು ಉತ್ತಮ ಉದಾಹರಣೆ). ಮನಸ್ಸಿನ ಈ ಶಕ್ತಿಯನ್ನು ವಿಶ್ಲೇಷಿಸದೆ, ನಂಬಿಕೆಯನ್ನು ‘ಸರಿ’ ಮತ್ತು ‘ತಪ್ಪು’ ಗಳನ್ನಾಗಿ ವಿಂಗಡಿಸುವುದು ಸಮಸ್ಯೆಗೆ ಪರಿಹಾರವಲ್ಲ.
ರೋಗಲಕ್ಷಣವನ್ನು ಕಂಡುಹಿಡಿಯುವುದು ಮತ್ತು ಅದಕ್ಕೆ ಪರಿಣಾಮಕಾರಿ ಔಷಧಿ ನೀಡು ವುದು ಬೇರೆ-ಬೇರೆ. ಒಂದು ಆಚರಣೆಯನ್ನು ಕಾನೂನಿನಿಂದ ನಿಷೇಧಿಸಬಹುದು, ಅದರ ಹಿಂದಿರುವ ನಂಬಿಕೆಯನ್ನಲ್ಲ. ನಂಬಿಕೆಯನ್ನು ಬದಲಿಸಬಹುದು; ಆದರೆ ನಿಷೇಧಿಸಲಾಗದು. ಆದರೂ ಸಹ, ಮಡೆಸ್ನಾನದಂತಹ ಪದ್ದತಿ ಒಂದಲ್ಲ ಒಂದು ದಿನ ಸಂಪೂರ್ಣವಾಗಿ ನಿಂತುಹೋಗುವುದಂತೂ ಶತಸ್ಸಿದ್ಧ. ಹಾಗಾಗಲು ವರ್ಷ, ದಶಕ ಅಥವಾ ಶತಮಾನಗಳ ಸಮಯ ಬೇಕಾಗಬಹುದು. ಆದರೆ ಅದಕ್ಕೆ ಕಾರಣವಾಗುವುದು ಕೇವಲ ಜನರ ವಿರೋಧವಲ್ಲ. ವಿರೋಧ ಈ ನಿಲುಗಡೆಯನ್ನು ಕ್ಷಿಪ್ರಗೊಳಿಸಬಹುದು; ಆದರೆ ಒಮ್ಮಿಂದೊಮ್ಮೆಗೇ ನಿಲ್ಲಿಸಲಾರದು. ಅದು ಅಳಿಯುವ ಏಕೈಕ ಕಾರಣವೆಂದರೆ ‘ಎಲ್ಲರಿಗೂ ಸಮಾನವಾಗಿ ಅನ್ವಯಿಸದ ಯಾವುದೇ ಸಂಪ್ರದಾಯ ತನ್ನ ನಿರಂತರತೆಯನ್ನು ಉಳಿಸಿಕೊಳ್ಳಲಾರದು’ ಎನ್ನುವ ಸಾರ್ವಕಾಲಿಕ ಸತ್ಯ.
ಈ ಸಂಪ್ರದಾಯವನ್ನು ಸಮುದಾಯದ ಪ್ರತಿಯೊಬ್ಬರೂ ಆಚರಿಸುತ್ತಿದ್ದರೆ, ಅದಕ್ಕೆ ವಿರೋಧವಿರುತ್ತಿರಲಿಲ್ಲ. (ದೇವಸ್ಥಾನದ ಒಳಗೆ ಹೊಗುವಾಗ ಪಾದರಕ್ಷೆಯನ್ನು ಹೊರಗಿಡುವುದಕ್ಕೆ ಯಾರದ್ದಾದರೂ ವಿರೋಧವಿದೆಯೇ?) ಮಡೆಸ್ನಾನದ ವಿರೋಧದ ಮೂಲ ಅದರ ಆಚರಣೆಯಲ್ಲಿ ಕಂಡುಬರುವ ಅಸಮಾನತೆ; ಮುಂದೊಂದು ದಿನ ಈ ಅಸಮಾನತೆಯೇ ಅದರ ಅವಸಾನಕ್ಕೆ ಕಾರಣವಾಗುತ್ತದೆ. ಈ ಕೆಲಸವನ್ನು ಕಾನೂನು ಮಾಡಲಾರದು. – ವಾರ್ತಾಭಾರತಿ 
Please follow and like us:
error