ಗೌರಿ-ಗಣೇಶ ಹಬ್ಬ ದೇಶ ಕಟ್ಟುವ ಹಬ್ಬವಾಗಲಿ – ಡಿ.ಸಿ. ಕೆ.ಪಿ. ಮೋಹನ್‌ರಾಜ್

  ದೇಶ ಕಟ್ಟುವ ಉದ್ದೇಶದಿಂದ ಭಾರತದಲ್ಲಿ ಪ್ರಾರಂಭವಾದ ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ದೇವರಿಗೆ ಭಕ್ತಿ-ಭಾವ ಸಮರ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
  ಗೌರಿ-ಗಣೇಶ ಹಬ್ಬದ ಆಚರಣೆ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು.  ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೂರಿಸಬೇಕು.  ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು,  ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಏಕ-ಗವಾಕ್ಷಿ ಯೋಜನೆಯಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿಯೇ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು.  ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು, ಮೈಕ್ ಬಳಸುವುದನ್ನು ನಿಷೇಧಿಸಲಾಗಿದೆ.  ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.   ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಸಾರ್ವಜನಿಕರು ಬಳಸುವುದು ಸೂಕ್ತ.   ಮನೆ-ಮನೆಗಳಲ್ಲಿ ಕೂರಿಸುವ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಆಯಾ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಿಗೆ, ಸೂಕ್ತ ಸ್ಥಳದಲ್ಲಿ ನೀರಿನ ಟ್ಯಾಂಕರ್ ವ್ಯವಸ್ಥೆಗೊಳಿಸಲು ಸೂಚನೆ ನೀಡಲಾಗುವುದು.  ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.  ಕುಡಿಯುವ ನೀರಿನ ಬಾವಿಗಳಲ್ಲಿ ಗಣೇಶ ಮೂರ್ತಿ ವಿಸರ್ಜಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.     ಯಾರೋ ಒಬ್ಬ ಕಿಡಿಗೇಡಿಗಳ ಕುಕೃತ್ಯದಿಂದ ಒಂದು ಸಮುದಾಯಕ್ಕೇ ಕೆಟ್ಟ ಹೆಸರು ಬರುವುದರಿಂದ, ಯಾರೂ ಇಂತಹುದಕ್ಕೆ ಅವಕಾಶ ಮಾಡಿಕೊಡದೆ, ಶಾಂತಿ ಹಾಗೂ ಸೌಹಾರ್ದತೆಯಿಂದ ಗೌರಿ-ಗಣೇಶ ಹಬ್ಬ ಆಚರಿಸುವಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೧೦೨೦ ಕಡೆಗಳಲ್ಲಿ ಸಾರ್ವಜನಿಕ ಗಣಪತಿಗಳನ್ನು ಕೂರಿಸಲಾಗುತ್ತಿದೆ, ಈ ಪೈಕಿ ಹಬ್ಬದ ಮೂರನೇ ದಿನ ೩೨೦, ಐದನೇ ದಿನ ೫೩೨, ಒಂಭತ್ತನೇ ದಿನ ೪೦, ಹನ್ನೊಂದನೇ ದಿನ ೨೮ ಹೀಗೆ ಸುಮಾರು ಹದಿನೈದನೇ ದಿನದವರೆಗೂ ಸಾರ್ವಜನಿಕ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯುವ ಬಗ್ಗೆ ವರದಿ ಸಂಗ್ರಹಿಸಲಾಗಿದೆ.  ಭಕ್ತಿ-ಭಾವದಿಂದ ಹಾಗೂ ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸಬೇಕಾಗಿದ್ದು, ಆದರೆ, ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕೆಲವು ಯುವಕರು, ವ್ಯಕ್ತಿಗಳು ಮದ್ಯಪಾನ ಮಾಡಿಕೊಂಡು, ಅಶ್ಲೀಲ ಹಾಡುಗಳಿಗೆ ಅಸಭ್ಯ ನೃತ್ಯ ಮಾಡುತ್ತಾ ಸಾಗುವುದನ್ನು ಪ್ರತಿ ವರ್ಷ ಕಾಣುತ್ತಿದ್ದೇವೆ.  ಇಂತಹ ವರ್ತನೆ ಭಕ್ತಿ-ಭಾವದ ಕಾರ್ಯಕ್ರಮಕ್ಕೆ ಶೋಭೆ ತರುವುದಿಲ್ಲ.  ಆಸ್ಪತ್ರೆಗಳು ಹಾಗೂ ಧಾರ್ಮಿಕ ಕೇಂದ್ರಗಳ ಎದುರುಗಡೆ ಪಟಾಕಿ ಹಚ್ಚುವುದನ್ನು ನಿಷೇಧಿಸಲಾಗಿದೆ.  ಮೆರವಣಿಗೆ ಸಂದರ್ಭದಲ್ಲಿ ಡಿ.ಜೆ. ಸೌಂಡ್‌ಸಿಸ್ಟಂ ಬಳಕೆ ಮಾಡುವುದನ್ನು ಸುಪ್ರಿಂಕೋರ್ಟ್ ತೀರ್ಪಿನಲ್ಲಿ ನಿಷೇಧಿಸಲಾಗಿದ್ದು, ಮೆರವಣಿಗೆಗೆ ಡೊಳ್ಳು ಕುಣಿತ, ಪೂಜಾ ಕುಣಿತ, ಭಜನಾ ಮಂಡಳಿಗಳನ್ನು ಬಳಸಿದಲ್ಲಿ, ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.  ಪೆಂಡಾಲ್ ಹಾಗೂ ಗಣೇಶ ಮೂರ್ತಿಗಳ ರಕ್ಷಣೆಗಾಗಿ ಆಯಾ ಸಂಘಟಕರು ಸ್ವಯಂ-ಸೇವಕರನ್ನು ನೇಮಿಸಿಕೊಳ್ಳಬೇಕು.  ಪೆಂಡಾಲ್ ನಿರ್ಮಿಸುವಾಗ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.  ಪೆಂಡಾಲ್‌ನಲ್ಲಿ ಅಗ್ನಿ ಅವಘಡಗಳನ್ನು ತಪ್ಪಿಸಲು ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ಅಗತ್ಯ ಸಾಮಗ್ರಿಗಳನ್ನು ಇಟ್ಟುಕೊಳ್ಳಬೇಕು.  ಅಸುರಕ್ಷಿತ ವಿದ್ಯುತ್ ಸಂಪರ್ಕ ಪಡೆದಲ್ಲಿ, ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ, ಜೆಸ್ಕಾಂನವರ ಅನುಮತಿ ಪಡೆದು, ಸುರಕ್ಷಿತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು.  ಸಾರ್ವಜನಿಕ ತೊಂದರೆ ಹಾಗೂ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಪಟಾಕಿ ಬಳಕೆ ಮಾಡಲು, ಸಂಘಟಕರು, ಮೆರವಣಿಗೆ ಸಂದರ್ಭದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳಿಗೆ ವಹಿಸಬೇಕು.  ಒಟ್ಟಾರೆಯಾಗಿ ಹಬ್ಬ ಶಾಂತಿಯುತವಾಗಿ ನಡೆಸಲು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
  ಸಭೆಯಲ್ಲಿ  ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ, ಬಸವರಾಜ ಬಾವಲತ್ತಿ, ವೆಂಕಟಪ್ಪ ನಾಯಕ್, ವಿಜಯ್ ಬಿರಾದಾರ್ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು, ಶಿವಾನಂದ ಹೊದ್ಲೂರು, ಅಮಿತ್, ಗವಿಸಿದ್ದಪ್ಪ ಮುಂಡರಗಿ, ವಿವಿಧ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error