ಸಂಗಣ್ಣ ಕರಡಿ ಕೊಪ್ಪಳದ ನೂತನ ಎಂ.ಪಿ : ಸಂಪೂರ್ಣ ವಿವರಗಳು

 ಕೊಪ್ಪಳ ಲೋಕಸಭಾ ಕ್ಷೇತ್ರದ ನೂತನ ಪ್ರತಿನಿಧಿಯಾಗಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು  ೩೨೪೧೪ ಮತಗಳ ಅಂತರದಿಂದ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.
  ಮತ ಎಣಿಕೆ ಸಿಬ್ಬಂದಿಗಳಲ್ಲಿ ಅತ್ಯುತ್ಸಾಹ, ಸಾರ್ವಜನಿಕರು ಹಾಗೂ ಅಭ್ಯರ್ಥಿಗಳಲ್ಲಿ ತೀವ್ರ ಕುತೂಹಲ, ವಿಜೇತ ಅಭ್ಯರ್ಥಿಯ ಮುಖದಲ್ಲಿ ಗೆಲುವಿನ ನಗೆ, ಬಿ.ಜೆ.ಪಿ. ಕಾರ್ಯಕರ್ತರಲ್ಲಿ ವಿಜಯೋತ್ಸಾಹ ಇವು ಮತ ಎಣಿಕೆ ಕೇಂದ್ರವಾದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯ ಆವರಣದಲ್ಲಿ ಶುಕ್ರವಾರ ಕಂಡು ಬಂದ ಪ್ರಮುಖ ದೃಶ್ಯಾವಳಿಗಳು.  ಅಂದು ಬೆಳಿಗ್ಗೆ ೮ ಗಂಟೆಗೆ ಪ್ರಾರಂಭಗೊಂಡ ಮತ ಎಣಿಕೆ ಕಾರ್ಯ ಮಧ್ಯಾಹ್ನ ಸುಮಾರು ೦೩ ಗಂಟೆಗೆ ಪೂರ್ಣಗೊಂಡಿತು.  ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಫಲಿತಾಂಶವನ್ನು ಪ್ರಕಟಿಸಿದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು ೩೨೪೧೪ ಮತಗಳ ಅಂತರದಿಂದ ವಿಜೇತರಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು.
  ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು ೧೫೩೪೮೨೬ ಮತದಾರರ ಪೈಕಿ ೧೦೦೬೬೮೫ ಮತದಾರರು ಮತ ಚಲಾವಣೆ ಮಾಡಿದ್ದರು.  ಮತ ಎಣಿಕೆ ಪ್ರಾರಂಭಗೊಂಡ ನಂತರ ಮೊದಲ ಸುತ್ತಿನಿಂದ ಕೊನೆಯ ೧೯ ನೇ ಸುತ್ತಿನವರೆಗೂ  ಮುನ್ನಡೆ ಕಾಯ್ದುಕೊಂಡು ಸಾಗಿದ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್ ಅವರಿಗಿಂತ ೩೨೮೨ ಹೆಚ್ಚು ಮತಗಳನ್ನು ಪಡೆದರು, ನಂತರ ಎರಡನೆ ಸುತ್ತಿನಲ್ಲಿ ೩೭೦೪ ಮತಗಳ ಮುನ್ನಡೆ, ಮೂರನೆ ಸುತ್ತಿನಲ್ಲಿ ೮೪೦೨ ಮತಗಳಿಂದ ಮುಂದಿದ್ದರು.  ನಾಲ್ಕನೆ ಸುತ್ತಿನಲ್ಲಿ ಮುನ್ನಡೆಯ ಅಂತರ ೯೬೨೧ ಮತಗಳಾಗಿದ್ದರೆ, ಐದನೆ ಸುತ್ತಿನಲ್ಲಿ ಈ ಅಂತರ ೯೬೨೪ ಮತಗಳಾಗಿತ್ತು.  ನಂತರ ಹತ್ತನೆ ಸುತ್ತಿನಲ್ಲಿ ಸಂಗಣ್ಣ ಕರಡಿ ಅವರು ೧೨೬೧೬ ಮತಗಳ ಮುನ್ನಡೆ ಸಾಧಿಸಿದರು.  ಹದಿನೈದನೆ ಸುತ್ತಿನಲ್ಲಿ ೩೧೬೫೨, ಹದಿನಾರನೆ ಸುತ್ತಿನಲ್ಲಿ ೩೪೦೭೨ ಮತಗಳಿಂದ ಮುನ್ನಡೆ ಸಾಧಿಸಿದ ಅವರು ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್ ಅವರಿಗಿಂತ ೩೨೪೧೪ ಮತಗಳ ಅಂತರದಿಂದ ಜಯ ಸಾಧಿಸಿದರು.   ಸಂಗಣ್ಣ ಕರಡಿ ಅವರು ಒಟ್ಟು ೪೮೬೩೮೩ ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್ ಒಟ್ಟು ೪೫೩೯೬೯ ಮತಗಳನ್ನು ಗಳಿಸಿ ಎರಡನೆ ಸ್ಥಾನ ಪಡೆದರು.  ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರದಲ್ಲಿ ಅವಕಾಶ ಕಲ್ಪಿಸಲಾಗಿದ್ದ NOTA  (ಮೇಲ್ಕಂಡ ಯಾರೂ ಅಲ್ಲ) ಆಯ್ಕೆಗೆ ೧೨೯೪೭ ಮತದಾರರು ಮತ ಚಲಾಯಿಸಿದ್ದಾರೆ.  ಇದು ಮೂರನೆ ಸ್ಥಾನ ಪಡೆದಿರುವುದು ವಿಶೇಷವಾಗಿದೆ. 
  ಕೊಪ್ಪಳ ಲೋಕಸಭಾ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ೧೬ ಅಭ್ಯರ್ಥಿಗಳು ಗಳಿಸಿದ ಒಟ್ಟು ಮತಗಳ ವಿವರ ಇಂತಿದೆ.  ಸಂಗಣ್ಣ ಕರಡಿ (ಬಿಜೆಪಿ)- ೪೮೬೩೮೩.  ಬಸವರಾಜ ಹಿಟ್ನಾಳ್ (ಕಾಂಗ್ರೆಸ್)- ೪೫೩೯೬೯, ಸೈಯದ್ ಆರಿಫ್ (ಬಿ.ಎಸ್.ಪಿ.)- ೯೫೨೯,   ತಿಮ್ಮಪ್ಪ ಉಪ್ಪಾರ (ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಪಕ್ಷ)- ೨೪೫೯, ನಜೀರ್ ಹುಸೇನ್ (ರಾ.ಕ್ರಾಂ.ಸ.ಪಕ್ಷ)- ೨೧೨೯. ಡಿ.ಹೆಚ್. ಪೂಜಾರ್ (ಸಿಪಿಐ-ಎಂಎಲ್ ರೆಡ್‌ಸ್ಟಾರ್)- ೨೬೩೬ ಭರದ್ವಾಜ (ಸಿ.ಪಿ.ಐ.ಎಮ್.ಎಲ್.)- ೨೦೮೯, ರಮೇಶ್ ಕೋಟಿ (ರಿಪಾಇಂ)- ೧೮೬೭.  ಕೆ.ಎಂ. ರಂಗನಾಥ ರೆಡ್ಡಿ (ಸಮಾಜವಾದಿ ಪಕ್ಷ)- ೨೩೦೫. ಶಿವಕುಮಾರ ತೋಂಟಾಪುರ (ಆಮ್‌ಆದ್ಮಿ)- ೩೪೨೫.  ಅಣ್ಣೋಜಿರಾವ್ (ಪಕ್ಷೇತರ)- ೨೦೧೨.  ವಿ. ಗೋವಿಂದ (ಪಕ್ಷೇತರ)- ೬೩೦೦.  ಗೋವಿಂದರೆಡ್ಡಿ ಪಚ್ಚರಳ್ಳಿ (ಪಕ್ಷೇತರ)- ೨೮೩೯.  ನಾಗಪ್ಪ ಜಿ. ಕಾರಟಗಿ (ಪಕ್ಷೇತರ)- ೨೮೯೪.  ಬಿ. ಮನೋಹರ (ಪಕ್ಷೇತರ)- ೪೪೩೩.  ಸುರೇಶ (ಪಕ್ಷೇತರ)- ೮೨೯೨.  ಓಔಖಿಂ (ಮೇಲ್ಕಂಡ ಯಾರೂ ಅಲ್ಲ)- ೧೨೯೪೭.
ಅಂಚೆ ಮತಗಳು ; ಈ ಬಾರಿಯ ಕೊಪ್ಪಳ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ೭೧೪ ಮತಗಳು ಅಂಚೆ ಮೂಲಕ ಚಲಾವಣೆಗೊಂಡಿದ್ದು, ಆ ಪೈಕಿ ೨೯೮ ಮತಗಳು ಕ್ರಮಬದ್ಧವಾಗಿದ್ದರೆ, ೪೧೬ ಮತಗಳು ವಿವಿಧ ಕಾರಣಗಳಿಗಾಗಿ ತಿರಸ್ಕೃತಗೊಂಡವು.  ಬಿ.ಜೆ.ಪಿ. ಅಭ್ಯರ್ಥಿ ಸಂಗಣ್ಣ ಕರಡಿ ಅವರು ಅತಿ ಹೆಚ್ಚು ೧೯೫ ಅಂಚೆಮತಗಳನ್ನು ಪಡೆದರು,  ಉಳಿದಂತೆ ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್- ೯೬, ಶಿವಕುಮಾರ ತೋಂಟಾಪುರ- ೦೩, ಅಣ್ಣೋಜಿರಾವ್- ೦೧, ಡಿ.ಹೆಚ್. ಪೂಜಾರ್- ೦೧, ನೊಟ- ೦೨ ಅಂಚೆಮತಗಳು ಲಭಿಸಿದವು.  
Please follow and like us:
error