ಅಂಗವಿಕಲರ ಮಾಸಾಶನ ಮಂಜೂರಾತಿ ಪ್ರಕ್ರಿಯೆ ಸರಳಗೊಳಿಸಲು ಡಿ.ಸಿ ಸೂಚನೆ

ಅಂಗವಿಕಲರು ಮಾಸಾಶನ ಮಂಜೂರಾತಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಮಂಜೂರಾತಿ ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

  ಅಂಗವಿಕಲರ ಕುಂದುಕೊರತೆಗಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಅರ್ಹ ಅಂಗವಿಕಲರು ಮಾಸಾಶನ ಮಂಜೂರಾತಿಗಾಗಿ ತಿಂಗಳುಗಟ್ಟಲೆ ಕಚೇರಿಗೆ ಅಲೆದಾಡುವಂತಹ ಸ್ಥಿತಿ ಇದೆ.  ಯಾವುದೇ ಅರ್ಹ ಅಂಗವಿಕಲ ಸರ್ಕಾರದ ಸೌಲಭ್ಯದಿಂದ ವಂಚಿತವಾಗಬಾರದು.  ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಈಗಾಗಲೆ ಜಿಲ್ಲೆಯಲ್ಲಿನ ಅಂಗವಿಕಲರ ಪಟ್ಟಿ ಲಭ್ಯವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆಯಾ ತಾಲೂಕು ತಹಸಿಲ್ದಾರರಿಗೆ, ಅರ್ಹ ಅಂಗವಿಕಲರ ಪಟ್ಟಿ ಹಾಗೂ ಮಾಹಿತಿ ಒದಗಿಸಿದಲ್ಲಿ, ತಹಸಿಲ್ದಾರರೇ ಮಾಸಾಶನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು.  ಅಂಗವಿಕಲರ ಪಟ್ಟಿ ಪರಿಶೀಲನೆಗೆ ಈಗಾಗಲೆ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಇರುವ ಅಂಗವಿಕಲ ಕಾರ್ಯಕರ್ತರು ಹಾಗೂ ಯುನಿಸೆಫ್ ಕಾರ್ಯಕರ್ತರ ಸಹಕಾರ ಪಡೆಯಬಹುದಾಗಿದೆ.  ಸರ್ಕಾರದಿಂದ ದೊರೆಯುವ ಸೌಲಭ್ಯಕ್ಕಾಗಿ ಅಂಗವಿಕಲರನ್ನು ವಿನಾಕಾರಣ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ.  ೨೦೧೧ ರ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ೩೪೫೯೯ ಜನ ಅಂಗವಿಕಲರಿದ್ದಾರೆ.  ಈಗಾಗಲೆ ೨೭೩೦೯ ಅಂಗವಿಕಲರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗಿದ್ದು, ಇನ್ನೂ ೭೨೯೦ ಅಂಗವಿಕಲರಿಗೆ ಅಧಿಕಾರಿಗಳು ತ್ವರಿತವಾಗಿ ಗುರುತಿನ ಚೀಟಿ ವಿತರಿಸಬೇಕು.  ಶ್ರವಣ ನ್ಯೂನತೆ ಇರುವವರಿಗೆ ಗುರುತಿನ ಚೀಟಿ ನೀಡಲು, ಜಿಲ್ಲೆಯಲ್ಲಿ ತಜ್ಞ ವೈದ್ಯರು ಇಲ್ಲದ ಕಾರಣ ತೊಂದರೆ ಆಗುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.  ಕೊಪ್ಪಳದ ಸಮೂಹ ಸಾಮರ್ಥ್ಯದಲ್ಲಿ ಆಡಿಯೋಗ್ರಾಮ್ ಉಪಕರಣದ ವಿಧಾನದಿಂದ ಶ್ರವಣ ನ್ಯೂನತೆಯ ಪ್ರಮಾಣವನ್ನು ಗುರುತಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಅಂಗವಿಕಲರ ಕಲ್ಯಾಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸ್ವಯಂ ಉದ್ಯೋಗಕ್ಕಾಗಿ ಸಾಲ : ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳು ತಮ್ಮ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಶೇ. ೩ ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿಡುತ್ತಿದ್ದು, ಇದರಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ಸಮರ್ಪಕವಾಗಿ ವಿತರಿಸಬೇಕು.  ಇದರ ಜೊತೆಗೆ ಅಂಗವಿಕಲರು ಸ್ವಯಂ ಉದ್ಯೋಗ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಸಹಾಯಧನ ಮಂಜೂರಾತಿ ಮಾಡುವ ಬಗ್ಗೆ ಪರಿಶೀಲಿಸಬೇಕು.  ಉಳಿದ ಮೊತ್ತವನ್ನು ಬ್ಯಾಂಕ್‌ಗಳು ಸಾಲವಾಗಿ ಫಲಾನುಭವಿಗಳಿಗೆ ನೀಡಬೇಕು.  ಸಾಲ ಮಂಜೂರು ಮಾಡುವ ಬ್ಯಾಂಕ್‌ಗಳಲ್ಲಿ ಮಾತ್ರ ಸ್ಥಳೀಯ ಸಂಸ್ಥೆಗಳು ತಮ್ಮ ಹಣಕಾಸಿನ ವ್ಯವಹಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಕ್ಷಣ ಇಲಾಖೆ ಅನುದಾನ : ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ೧೪ ವರ್ಷದೊಳಗಿನ ಅಂಗವಿಕಲ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಾಧನ ಸಲಕರಣೆಗಳನ್ನು ಶಿಕ್ಷಣ ಇಲಾಖೆ ವಿತರಿಸುತ್ತಿದೆ.  ಅಂಗವಿಕಲರ ಕಲ್ಯಾಣ ಇಲಾಖೆಯೂ ಸಹ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಿಸುತ್ತಿದ್ದು, ಒಂದೇ ಫಲಾನುಭವಿಗೆ ಎರಡು ಇಲಾಖೆಗಳಿಂದಲೂ ಸಾಧನ ಸಲಕರಣೆ ವಿತರಣೆಯಾಗುವ ಸಾಧ್ಯತೆಗಳಿರುವುದರಿಂದ, ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ವೆಚ್ಚ ಮಾಡುವ ಅನುದಾನವನ್ನು ಅಂಗವಿಕಲರ ಕಲ್ಯಾಣ ಇಲಾಖೆಗೆ ನೀಡಿದಲ್ಲಿ, ಇಂತಹ ಸಂಭವನೀಯ ಪ್ರಮಾದವನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮೂಲಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಡಿಡಿಪಿಐ ಜಿ.ಹೆಚ್. ವೀರಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಡಿವೈಎಸ್‌ಪಿ ರಾಜೀವ್ ಸೇರಿದಂತೆ ತಹಸಿಲ್ದಾರರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಅಂಗವಿಕಲರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
Please follow and like us:
error