You are here
Home > Koppal News > ಬಿಎಸ್‌ವೈ: ಉಪಚುನಾವಣೆಯಿಂದ ದೂರ; ಬಿಜೆಪಿಗೆ ತೀವ್ರ ಮುಜುಗರ;

ಬಿಎಸ್‌ವೈ: ಉಪಚುನಾವಣೆಯಿಂದ ದೂರ; ಬಿಜೆಪಿಗೆ ತೀವ್ರ ಮುಜುಗರ;

 ಅನಿವಾರ್ಯ ಕಾರಣಗಳಿಂದ ಭಾಗವಹಿಸಲ್ಲ: ಯಡಿಯೂರಪ್ಪ
ಹುಬ್ಬಳ್ಳಿ, ನ.13: ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಒಡೆದ ಮನೆಯಾಗಿರುವ ಬಿಜೆಪಿಗೆ ಈಗ ಬಳ್ಳಾರಿ ಚುನಾವಣೆ ದೊಡ್ಡ ಕಂಟಕವನ್ನೇ ತಂದೊಡ್ಡಿದೆ.
ಒಂದೆಡೆ ಶ್ರೀರಾಮುಲು ಬಿಜೆಪಿಗೆ ಗುಡ್‌ಬೈ ಹೇಳಿರುವುದರಿಂದ ಅವರ ಆಪ್ತ ಶಾಸಕರು, ಸಂಸದರು ಕೂಡಾ ಬಿಜೆಪಿ ತೊರೆಯುವ ಚಿಂತನೆಯಲ್ಲಿದ್ದರೆ, ಇನ್ನೊಂದೆಡೆ ಯಡಿಯೂರಪ್ಪ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಲು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಮುಖ್ಯಮಂತ್ರಿ ಸದಾನಂದ ಗೌಡರ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಬಳ್ಳಾರಿ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ, ಇಲ್ಲದಿದ್ದರೆ ಪ್ರಚಾರ ಕಾರ್ಯದಿಂದ ದೂರು ಉಳಿಯುವುದಾಗಿ ಹೈಕಮಾಂಡ್ ಮೇಲೆ ಯಡಿಯೂರಪ್ಪ ಒತ್ತಡ ಹಾಕಿದ್ದಾರೆನ್ನಲಾಗಿದೆ. ಇದರಿಂದ ಅವರ ಬಣದ ಎಲ್ಲ ಸಚಿವರು, ಶಾಸಕರು, ನಾಯಕರು ಕೂಡಾ ಚುನಾವಣಾ ಪ್ರಚಾರದಿಂದ ದೂರ ಉಳಿಯುವುದು ಸ್ಪಷ್ಟ.
ಈ ಮಧ್ಯೆ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪ ಕೆಲ ವೈಯಕ್ತಿಕ ಕಾರಣಗಳಿಂದಾಗಿ ಉಪ ಚುನಾವಣೆಯ ಪ್ರಚಾರ ಕಾರ್ಯದಿಂದ ದೂರ ಉಳಿಯುವುದಾಗಿ ಸ್ಪಷ್ಟಪಡಿಸಿದರು.
ಇದರಿಂದ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದ್ದು, ಮತ್ತೆ ಪಕ್ಷದೊಳಗೆ ದೊಡ್ಡ ಮಟ್ಟದ ಕದನ ನಡೆಯುವ ಸಾಧ್ಯತೆ ಇದೆ. ಡಿನೋಟಿಫಿಕೇಶನ್ ಹಗರಣದಿಂದ ಜೈಲು ಪಾಲಾಗಿದ್ದ ಯಡಿಯೂರಪ್ಪ ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಬಿಜೆಪಿಯೊಳಗಿನ ಕಚ್ಚಾಟ ತಾರಕ್ಕೇರಿದ್ದು, ಯಡಿಯೂರಪ್ಪ ತನಗೆ ರಾಜ್ಯಾಧ್ಯಕ್ಷನ ಪಟ್ಟ ಸಿಗಲೇ ಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಈ ಕಾರಣದಿಂದಲೇ ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಯಡಿಯೂರಪ್ಪ ಗೈರಾಗಿದ್ದರು.
ಹುಬ್ಬಳ್ಳಿಯಲ್ಲಿಂದು ಶಾಸಕ ಚಿಕ್ಕನಗೌಡರ್‌ರ ಪುತ್ರಿಯ ವಿವಾಹಕ್ಕೆಂದು ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅನಿವಾರ್ಯ ಕಾರಣಗಳಿಂದ ನನಗೆ ಬಳ್ಳಾರಿ ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದರು.
ಆದರೆ ತನ್ನ ಆಪ್ತರೆಲ್ಲರೂ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿರುವುದರಿಂದ ಗೆಲುವು ತಮ್ಮದೇ ಎಂದವರು ಹೇಳಿದರು.
ಕೆಲವು ವಿಶೇಷ ಕಾರಣಗಳಿಂದಾಗಿ ತಾನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿರಲಿಲ್ಲ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ಕೆ ಹೋಗಲು ಆಗುತ್ತಿಲ್ಲ. ಅದನ್ನೆಲ್ಲ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದ ಯಡಿಯೂರಪ್ಪ, ತಮ್ಮೆಳಗೆ ಯಾವುದೇ ಭಿನ್ನಮತವಿಲ್ಲ ಎಂದರು.
ರಾಜ್ಯದಲ್ಲಿ ಮಧ್ಯಾಂತರ ಚುನಾವಣೆ ಎದುರಾಗಲಿದೆ ಎಂಬ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ಸರಕಾರ ಸಂಪೂರ್ಣ 5 ವರ್ಷ ಆಡಳಿತ ನಡೆಸಲಿದೆ ಎಂದು ಒತ್ತಿ ಹೇಳಿದರು.
ಪಕ್ಷದಲ್ಲಿ ಯಾವುದೇ ರೀತಿಯ ಹುದ್ದೆಗೆ ಆಸೆಪಟ್ಟಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಇರಲು ಇಷ್ಟ ಪಡುತ್ತೇನೆ ಎಂದು ಅವರು ತಿಳಿಸಿದರು.
ಯಡಿಯೂರಪ್ಪನವರೇ ಸೂಪರ್ ಸಿಎಂ?: ಹುಬ್ಬಳ್ಳಿಯಲ್ಲಿ ಸಾಬೀತು
ಹುಬ್ಬಳ್ಳಿ, ನ.13: ಡಿ.ವಿ.ಸದಾನಂದ ಗೌಡ ಹೆಸರಿಗೆ ಮಾತ್ರ ರಾಜ್ಯದ ಮುಖ್ಯಮಂತ್ರಿ, ಇಂದಿಗೂ ರಾಜ್ಯದ ಸೂಪರ್ ಮುಖ್ಯಮಂತ್ರಿ ಆಗಿರುವುದು ಯಡಿಯೂರಪ್ಪ ಎಂಬುದಕ್ಕೆ ಹುಬ್ಬಳ್ಳಿಯಲ್ಲಿಂದು ನಡೆದ ಘಟನೆಗಳೇ ಸಾಕ್ಷಿ.
ಹುಬ್ಬಳ್ಳಿಯಲ್ಲಿಂದು ನಡೆದ ಬಿಜೆಪಿ ಶಾಸಕ ಚಿಕ್ಕನಗೌಡರ್‌ರ ಪುತ್ರಿಯ ವಿವಾಹಕ್ಕೆ ಬಂದಿದ್ದ ಸದಾನಂದ ಗೌಡ ಹಾಗೂ ಯಡಿ ಯೂರಪ್ಪನವರಿಗೆ ಸಿಕ್ಕಿದ ಪ್ರತ್ಯೇಕ ಭವ್ಯ ಸ್ವಾಗತವೇ ಇದಕ್ಕೆ ಸಾಕ್ಷಿಯಾಯಿತು.
ಯಡಿಯೂರಪ್ಪ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಅವರನ್ನು ಸ್ವಾಗತಿಸಲು ಬಿಜೆಪಿ ನಾಯಕರು, ಕಾರ್ಯಕರ್ತರ ದಂಡೇ ಸೇರಿತ್ತು. ಅಲ್ಲಿಂದ ಅವರನ್ನು ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು.
ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಯಡಿಯೂರಪ್ಪನವರಿಗೆ ಜೈಕಾರ ಹಾಕಿಕೊಂಡು ಮುಂದೆ ಸಾಗಿದರು. ಈ ವೇಳೆ ಯಡಿ ಯೂರಪ್ಪನವರೊಂದಿಗೆ ಸಚಿವ ರಾದ ಜಗದೀಶ್ ಶೆಟ್ಟರ್, ಸಿ.ಎಂ.ಉದಾಸಿ, ರೇಣುಕಾಚಾರ್ಯ ಸೇರಿದಂತೆ ಹಲವು ಶಾಸಕರು ಹಾಜರಿದ್ದರು. ಆದರೆ ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಸ್ವಾಗತಿಸಲು ಕಾರ್ಯಕರ್ತರೇ ಬಾರದಿದ್ದುದು ಅವರಿಗೆ ಕೊಂಚ ನಿರಾಸೆಯನ್ನುಂಟು ಮಾಡಿತು.
ಯಡಿಯೂರಪ್ಪನವರಿಗೆ ಸಿಕ್ಕಂತಹ ಭವ್ಯ ಸ್ವಾಗತ ಸದಾನಂದ ಗೌಡರಿಗೆ ಸಿಗಲಿಲ್ಲ. ಅವರನ್ನು ಸ್ವಾಗತಿಸಲು ಸಚಿವ ಬಸವರಾಜ ಬೊಮ್ಮಾಯಿ ಬಿಟ್ಟರೆ ಬೇರೆ ಯಾವ ನಾಯಕರೂ ಹಾಜರಿರಲಿಲ್ಲ. ಇದರಿಂದ ಡಿವಿ ನಿರಾಸೆಗೊಂಡಂತೆ ಕಂಡುಬಂತು ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದರು.
ತಾನು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದು, ನೂತನ ವಧುವರರಿಗೆ ಶುಭ ಹಾರೈಸಿ ಬೆಂಗಳೂರಿಗೆ ಹೋಗುತ್ತೇನೆ. ಅಲ್ಲಿಯೇ ರಾಜಕೀಯದ ಕುರಿತು ಮಾತನಾಡುತ್ತೇನೆ ಎಂದು ಡಿ.ವಿ. ಮುಂದೆ ಸಾಗಿದರು

Leave a Reply

Top