ಜಾತ್ರೆಗೆ ರವಿವಾರದ ರಂಗು

 : ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವ ಜರುಗಿ ಅಮವಾಸ್ಯೆ ಹತ್ತಿರವಾಗುತ್ತಿದ್ದರೂ ಜಾತ್ರೆಯಲ್ಲಿ  ಭಕ್ತರ ಪಾಲ್ಗೊಳ್ಳುವಿಕೆ ಕಡಿಮೆಯಾಗಿಲ್ಲ. ಜಾತ್ರೆಯ ೧೦ ನೇ ದಿನ ರವಿವಾರ ರಜೆಯ ದಿನವಾದ್ದರಿಂದ  ಜಾತ್ರೆಯಲ್ಲಿ ಅಪಾರ ಜನರು ಕಂಡು ಬಂದರು.  ಇದೇ ರೀತಿ ಸೋಮವಾರ ಹಾಗೂ ಗುರುವಾರವು ಜನದಟ್ಟನೆಯಿಂದ ಕೂಡಿರುತ್ತದೆ. ಹಳ್ಳಿ ಹಳ್ಳಿಗಳಿಂದ ಹಾಗೂ ನಗರದಿಂದ ಮಕ್ಕಳು ಮರಿಗಳೊಂದಿಗೆ ಇಡೀ ಕುಟುಂಬವೇ ಭಕ್ತಿಯಿಂದ ಶ್ರೀಮಠಕ್ಕೆ ಆಗಮಿಸಿ ಶ್ರೀಗವಿಸಿದ್ಧೇಶ್ವರರ ಕರ್ತೃ ಗದ್ದೂಗೆಗೆ ಕಾಯಿ ಕರ್ಪೂರ ಸಲ್ಲಿಸಲು ನಿಂತ ಭಕ್ತರ ಸಾಲುಗಳು ಶ್ರೀಮಠದಲ್ಲಿ ಕಂಗೊಳಿಸುತಲಿತ್ತು. ಕುಂಕುಮ,ವಿಭೂತಿ, ದಾರ, ಲಿಂಗು. ದೇವರ ಭಾವಚಿತ್ರಗಳನ್ನು ಖರೀದಿಸುವ ದೃಶ್ಯ ಸಹಜವಾಗಿ ಕಾಣುತಲಿತ್ತು. ಜೊತೆಗೆ ಮಹಿಳೆಯರು ಬಣ್ಣ ಬಣ್ಣದ ಬಳೆಗಳನ್ನು ಕೊಡಿಸುವ ಮತ್ತು ತಾವು ಹಾಕಿಸಿಕೊಳ್ಳುವ ಪ್ರೀತಿಯ ದ್ಯೋತಕ ಕಾಣುತ್ತಿತ್ತು. ಚಿಕ್ಕವರು ಬಲೂನು, ಎತ್ತಿನಬಂಡಿ, ಕೊಳಲು, ರಿಮೋಟ್ ಮೋಟಾರು ವಾಹನಗಳು ಇನ್ನಿತರ ಆಟಿಕೆಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ದೊಡ್ಡವರು ಗೃಹಬಳಕೆಯ ವಸ್ತುಗಳನ್ನು ಖರೀದಿಸುವಲ್ಲಿ ಮಗ್ನರಾಗಿದ್ದರು. ಕಬ್ಬಿನ ಹಾಲು ಕುಡಿಯುತ್ತಾ, ಗೋಭಿಮಂಚೂರಿ, ಗೋವಾ ಹಪ್ಪಳ, ಮಿರ್ಚಿ-ಮಂಡಕ್ಕಿ ತಿನ್ನುತ್ತಾ ಜಾತ್ರೆ ಮುಗಿಸಿಕೊಂಡು ಅಜ್ಜನ ಮಹಾದಾಸೋಹದಲ್ಲಿ ಪ್ರಸಾದ ಸ್ವೀಕರಿಸಿ  ಪುಳಕಿತರಾಗಿ ಮನೆಗೆ ತೆರಳುವ ದೃಶ್ಯ ಶ್ರೀಮಠದ ಜಾತ್ರೆಗೆ ರವಿವಾರ ರಂಗು ತಂದಿತ್ತು. 

Leave a Reply