You are here
Home > Koppal News > ಉತ್ತಮ ಗುಣಮಟ್ಟದ ಸೇವೆಗಾಗಿ ಜನನಿ ಸುರಕ್ಷಾ ಯೋಜನೆ: ಎ.ಎಸ್. ಕಂದಗಲ್

ಉತ್ತಮ ಗುಣಮಟ್ಟದ ಸೇವೆಗಾಗಿ ಜನನಿ ಸುರಕ್ಷಾ ಯೋಜನೆ: ಎ.ಎಸ್. ಕಂದಗಲ್

 ಜನನಿ ಸುರಕ್ಷಾ ಯೋಜನೆ ಜಾರಿಗೊಳಿಸಿದ ನಂತರ ದೇಶದಲ್ಲಿ ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಹೆಚ್ಚಳವಾಗಿದೆ. ಗರ್ಭಿಣಿಯರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಸೇವೆಗಾಗಿ ಜನನಿ ಸುರಕ್ಷಾ ಯೋಜನೆ ರೂಪಿತವಾಗಿದೆ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎ. ಎಸ್. ಕಂದಗಲ್ ಹೇಳಿದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಬಳ್ಳಾರಿ ಘಟಕವು ತಾಲೂಕಾ ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಸಮಖ್ಯಾ ಮತ್ತು ಕಲ್ಪವೃಕ್ಷ ಮಹಿಳಾ ಮಹಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಇಲ್ಲಿಗೆ ಸಮೀಪದ ಹೆದ್ದೋಣಿಯಲ್ಲಿ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ತಜ್ಞ ಉಪನ್ಯಾಸ ಮಾಡಿದ ಅವರು, ಹೆರಿಗೆ ಸೇವೆಗಾಗಿ ೧೦೮ ಕ್ಕೆ ದೂರವಾಣಿ ಕರೆ ಮಾಡಿದರೆ ಆರೋಗ್ಯ ಕವಚ ಆಂಬ್ಯುಲೆನ್ಸ್ ಉಚಿತವಾಗಿ ದೊರೆಯುತ್ತದೆಂದರು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಜಾರಿಯಿಂದಾಗಿ ಆಶಾ ಕಾರ್ಯಕರ್ತೆಯರು, ಫಲಾನುಭವಿಗಳ ಮನೆಯ ಬಾಗಿಲಿಗೆ ಔಷದೋಪಚಾರವನ್ನು ಕೊಡುತ್ತಿದ್ದಾರೆಂದ ಡಾ|| ಭೀಮಣ್ಣ ನಡುಮನಿ, ಸಾರ್ವಜನಿಕ ಆಸ್ಪತ್ರೆಗಳನ್ನು ಸಮುದಾಯವೇ ನಿರ್ವಹಿಸಲು ಸಾದ್ಯವಾಗುವಂತೆ ಆರೋಗ್ಯ ರಕ್ಷಾ ಸಮಿತಿಗಳನ್ನು ರಚಿಸಲಾಗಿದೆ ಎಂದರು. ಸಾಂಕ್ರಾಮಿಕ ರೋಗಗಳ ನಿವಾರಣೆ, ಸಾರ್ವತ್ರಿಕ ಚುಚ್ಚುಮದ್ದು ಕಾರ್ಯಕ್ರಮ ಗ್ರಾಮದ ಆರೋಗ್ಯ ಸುಧಾರಣೆಗಳಿಗೆ ಬೇಕಾದ ಕ್ರಿಯಾ ಯೋಜನೆಗಳನ್ನು ತಯಾರಿಸುವದು ಮುಂತಾದವುಗಳು ಗ್ರಾಮ ಆರೋಗ್ಯ ಸಮಿತಿಯ ಉದ್ದೇಶಗಳೆಂದರು.
ಡೆಂಗ್ಯೂ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದು ಸೊಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ ಎಂದು ರೋಗದ ಮುಖ್ಯ ಲಕ್ಷಣಗಳನ್ನು ವಿವರಿಸಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದ ಕ್ಷೇತ್ರ ಪ್ರಚಾರ ಇಲಾಖೆಯ ಜಿ. ಪ್ರಕಾಶ, ಜನನಿ ಸುರಕ್ಷಾ ಯೋಜನೆಯು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ರೂಪಿತಗೊಂಡಿದೆಯೆಂದರು.
ಜಾಥಾ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿತ್ತು. ದೇವಮ್ಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳಾ ಸಮಖ್ಯಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ವಂದಿಸಿದರು.  ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಮಕ್ಕಳಿಂದ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

Leave a Reply

Top