ಉದ್ಯೋಗಖಾತ್ರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿ : ಜಿ.ಪಂ. ಸಿಇಓ ರಾಜಾರಾಂ

 ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬನ್ನಿಕೊಪ್ಪ, ನಿಂಗಾಪೂರ ಮುಂತಾದೆಡೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೨೦೧೨-೧೩ನೇ ಸಾಲಿನ ಕುಡಿಯುವ ನೀರಿನ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬನ್ನಿಕೊಪ್ಪ ಗ್ರಾಮದ ಕುಡಿಯುವ ನೀರಿನ ಕೆರೆಯ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಮಾದರಿಯಲ್ಲಿ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಈ ಮೂಲಕ ಉದ್ಯೋಗ ಬಯಸುವ ಕೂಲಿಕಾರರಿಗೆ ಕೆಲಸ ನೀಡಲಾಗುವುದು ಎಂದರು. ನಂತರ ಕೂಲಿಕಾರರೊಂದಿಗೆ ಮಾತನಾಡಿದ ಅವರು ಇಂತಹ ಭೀಕರ ಬರಗಾಲ ಸಂಧರ್ಭದಲ್ಲಿ ಸಹ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಕೂಲಿ ಕಾರ್ಮಿಕರಿಗೆ ತುಂಬಾ ಅನುಕೂಲಕರವಾಗಿದೆ ಅದನ್ನು ಕೂಲಿ ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ಮತ್ತು ಈ ಯೋಜನೆಯಲ್ಲಿ ದುಡಿದ ಕೂಲಿ ಕಾರ್ಮಿಕರಿಗೆ ಕೂಲಿ ಹಣವನ್ನು ಕೂಡಲೆ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತ ಅಬಿವೃದ್ಧಿ ಅಧಿಕಾರಿ ರೇಣುಕಾ ಟಂಕದ ಅವರಿಗೆ ಆದೇಶಿಸಿದರು. ಈ ಸಂಧರ್ಭದಲ್ಲಿ ಗಣ್ಯರಾದ ನವೀನ ಗುಳಗಣ್ಣವರು, ದ್ಯಾಮಣ್ಣ ಜಮಖಂಡಿ, ಕುಕನೂರ ಗ್ರಾಮ ಪಂಚಾಯತ ಅಧ್ಯಕ್ಷರು ಯಲ್ಲಮ್ಮ ಗಾಣಗೇರ, ಉಪಾದ್ಯಕ್ಷ ಕರಬಸಯ್ಯ ಬಿನ್ನಾಳ, ಬನ್ನಿಕೊಪ್ಪ ಗ್ರಾ.ಪಂ.ಅಧ್ಯಕ್ಷ ಮುತ್ತಣ್ಣ ಗೊಂಡಬಾಳ, ಉಪಾಧ್ಯಕ್ಷ ರಾಜಾಬೀ ಸೊಂಪೂರ, ಬನ್ನಿಕೊಪ್ಪ ಗ್ರಾಮ ಪಂಚಾಯತ ಸದಸ್ಯರಾದ ಮೈಲಪ್ಪ ಹರಿಜನ, ಗುಡದಪ್ಪ ಗುರಿಕಾರ, ಅಬ್ದುಲಸಾಬ ನಧಾಫ, ತಿಮಾಣ್ಣ ನಡುಲಮನಿ,ಕನಕರಾಯ ಪೂಜಾರ, ಗುಡ್ಡದಪ್ಪ ಹಗಸಿನಮನಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎ.ಪಿ.ಚಲವಾದಿ.ಸಾಮಾಜಿಕ ಲೆಕ್ಕ ಪರಿಶೋಧಕದಾರ ವೀರಣ್ಣ ಸಲಮನಿ, ಎ.ಇ.ಇ. ಕುದರಿ, ಜಿಲ್ಲಾ ಪಂಚಾಯತ ಇಂಜನಿಯರಿಂಗ್ ವಿಭಾಗದ ಪದ್ಮನಾಬ ಜೋಶಿ, ಕೆ.ಐ.ತಮ್ಮಿನಾಳ, ಕುಕನೂರ ಹಾಗೂ ಬನ್ನಿಕೊಪ್ಪ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
ಉದ್ಯೋಗಖಾತ್ರಿ : ಎಲ್ಲ ಗ್ರಾ.ಪಂ. ಗಳಲ್ಲಿ ಕಾಮಗಾರಿ ಪ್ರಾರಂಭ
ಕೊಪ್ಪಳ,ಜು.೦೬(ಕ.ವಾ): ೨೦೧೨-೧೩ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೊಪ್ಪಳ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಿದ್ದು, ನೊಂದಾಯಿತ ಕೂಲಿಕಾರರು ಕೂಡಲೇ ಸಂಬಂಧಪಟ್ಟ ಗ್ರಾ.ಪಂ.ಗೆ ಭೇಟಿ ನೀಡಿ ಕೆಲಸವನ್ನು ಕೋರಿ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಉದ್ಯೋಗಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ನೋಂದಾಯಿತ ಕೂಲಿಕಾರರು ಆಯಾ ಗ್ರಾಮ ಪಂಚಾಯತಿಗೆ ತೆರಳಿ, ಉದ್ಯೋಗ ಪಡೆಯಬಹುದಾಗಿದೆ. ತಾಲೂಕಿನಲ್ಲಿ ಈಗಾಗಲೇ ೨೬ ರಾಜೀವ್‌ಗಾಂಧೀ ಸೇವಾ ಕೇಂದ್ರಗಳು ಪ್ರಗತಿಯಲ್ಲಿದ್ದು, ಉಳಿದ ಎಲ್ಲಾ ಗ್ರಾ.ಪಂ.ಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಿವೆ. ಈಗಾಗಲೆ ಭಾಗ್ಯನಗರ ಗ್ರಾ.ಪಂ.ಯಲ್ಲಿ ೫೮೫ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಪ್ರತಿ ಮಾನವ ದಿನಕ್ಕೆ ರೂ.೧೫೫/- ಕೂಲಿಯನ್ನು ನೀಡಲಾಗುತ್ತಿದೆ. ಸರ್ವರಿಗೂ ಸಮಾನ ಕೂಲಿ ನೀಡುವ ವ್ಯವಸ್ಥೆ ಇದ್ದು, ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ನೀಡುವ ಕುರಿತು ಡಂಗುರ ಮೂಲಕ ಪ್ರಚಾರ ನೀಡಲಾಗುತ್ತಿದೆ. ಉದ್ಯೋಗವನ್ನರಸಿ, ಇತರೆ ಪ್ರದೇಶಗಳಿಗೆ ವಲಸೆ ಹೋಗದೆ, ಕೂಲಿಕಾರರು ತಮ್ಮ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒದಗಿಸಲಾಗುವ ಕೆಲಸಕ್ಕೆ ಹಾಜರಾಗಬಹುದಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error