fbpx

ಗಂಗಾವತಿಯಲ್ಲಿ ಮಾ. ೦೫ ರಿಂದ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ

ಕೊಪ್ಪಳ ಮಾ. ೦೧ (ಕ.ವಾ): ಭಾರತ ಸರ್ಕಾರದ ವಾರ್ತಾ ಶಾಖೆ, ಕೇಂದ್ರ ಸರ್ಕಾರದ ಸಮಾಚಾರ ಹಾಗೂ ಪ್ರಸಾರ ಸಚಿವಾಲಯದ ಇತರ ಮಾಧ್ಯಮ ಘಟಕಗಳು, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಕೊಪ್ಪಳ ಹಾಗೂ ಗಂಗಾವತಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿಯ ಸಹಯೋಗದಲ್ಲಿ ಕರುನಾಡ ಭತ್ತದ ಕಣಜ ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಾರ್ಚ್ ೫ ರಿಂದ ಮೂರು ದಿನಗಳ ಕಾಲ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಹಮ್ಮಿಕೊಂಡಿದೆ.
ಸಮಾಜದ ಎಲ್ಲರಿಗೂ ಆರೋಗ್ಯ, ಆಹಾರ, ಆಶ್ರಯ ಒದಗಿಸುವ ಭಾರತ ಸರ್ಕಾರದ ಸಂಕಲ್ಪ ಹಾಗೂ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಮೂರೂ ದಿನಗಳ ಕಾಲ ಮೈದಾನದಲ್ಲಿ ನಡೆಯಲಿರುವ ವಸ್ತು ಪ್ರದರ್ಶನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮಳಿಗೆಯನ್ನು ತೆರೆಯಲಿದ್ದು, ತಮ್ಮ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸಚಿತ್ರ ಮಾಹಿತಿಯನ್ನು ಪೂರೈಸಲಿವೆ. ಮೂರೂ ದಿನಗಳ ಕಾಲ ಪದವಿಪೂರ್ವ ಕಾಲೇಜು ಮೈದಾನದಲ್ಲಿಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಡ ರೋಗಿಗಳ ಅನುಕೂಲಕ್ಕಾಗಿ ಬೆಳಗ್ಗೆ ೧೦ರಿಂದ ಸಂಜೆ ೫ಗಂಟೆಗಳ ವರೆಗೆ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದೆ.
ಸ್ವಾತಂತ್ರ್ಯದ ಹೊಸ ಹಾದಿಯಲ್ಲಿ ಸಾಗೋಣ ಎಂಬ ಘೋಷ ವಾಕ್ಯದೊಂದಿಗೆ ಯಲಹಂಕ, ಗೌರಿಬಿದನೂರು, ಹರಿಹರ, ಹೊಸಪೇಟೆ, ಭದ್ರಾವತಿ, ಕಡೂರು, ಕುಶಾಲನಗರ, ಕುಂದಾಪುರ, ಮುಳಬಾಗಿಲು, ಯಾದಗಿರಿ, ಗುಂಡ್ಲುಪೇಟೆ, ಬಸವಕಲ್ಯಾಣ, ತಿಪಟೂರು, ಪಾಂಡವಪುರ, ಹುಣಸೂರು ತಾಲೂಕು ಕೇಂದ್ರಗಳಲ್ಲಿ ಒಟ್ಟು ೧೫ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಪಿಐಬಿ, ಮಾರ್ಚ್ ಮೊದಲ ವಾರದಲ್ಲಿ ಗಂಗಾವತಿಯಲ್ಲಿ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಆಯೋಜಿಸಿದೆ. ಮಾಹಿತಿ ಒಂದು ಶಕ್ತಿ ಎಂದು ಪ್ರತಿಪಾದಿಸುವ ಮೂಲಕ ಗಂಗಾವತಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರದ ವಿವಿಧ ಜನಪರ ಯೋಜನೆಗಳ ಮಾಹಿತಿಯನ್ನು ಒದಗಿಸಿ, ಆ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಪ್ರಯೋಜನ ದೊರಕುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಮಾರ್ಚ್ ೫ರಂದು ಶನಿವಾರ ಬೆಳಗ್ಗೆ ೧೧ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು, ೬ರಂದು ಭಾನುವಾರ ಬೆಳಗ್ಗೆ ೧೦-೩೦ಕ್ಕೆ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕೃಷಿ, ತೋಟಗಾರಿಕೆ ಕುರಿತ ಕಾರ್ಯಾಗಾರ ಹಮ್ಮಿಕೊಂಡಿದೆ, ಅಂದು ಮಧ್ಯಾಹ್ನ ೩ ಗಂಟೆಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶ್ರೀರಾಮನಗರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಸಹ ಏರ್ಪಡಿಸಲಾಗಿದೆ. ೭ರಂದು ಸೋಮವಾರ ಬೆಳಗ್ಗೆ ೧೦-೩೦ಕ್ಕೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ನೂತನ ೧೫ ಅಂಶಗಳ ಕಾರ್ಯಕ್ರಮ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕುರಿತ ಕಾರ್ಯಾಗಾರ ನಡೆಯಲಿದ್ದು, ಅಂದೇ ಮಧ್ಯಾಹ್ನ ೩ ಗಂಟೆಗೆ ಎಸ್.ಜಿ.ಎಸ್.ವೈ, ಸಂಪೂರ್ಣ ಸ್ವಚ್ಛತಾ ಆಂದೋಲನ ಕುರಿತು ಕಾರ್ಯಾಗಾರ ನಡೆಯಲಿದ್ದು, ಆಯಾ ಇಲಾಖೆಯ ಉನ್ನತಾಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಜೊತೆಗೆ ಪ್ರತಿಯೊಂದು ಕಾರ್ಯಾಗಾರದ ಕೊನೆಯಲ್ಲಿ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸಂವಾದ ನಡೆಸಿ, ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನೂ ಸೂಚಿಸಲಿದ್ದಾರೆ.
ಮಾಹಿತಿ ಆಂದೋಲನದ ಅಂಗವಾಗಿ ಮೂರೂ ದಿನಗಳ ಕಾಲ ಸಂಜೆ ಚಲನಚಿತ್ರ ಪ್ರದರ್ಶನ ಹಾಗೂ ಜಾನಪದ ರಸಸಂಜೆ ಕಾರ್ಯಕ್ರಮಗಳು ನಡೆಯಲಿವೆ. ಮೈದಾನದಲ್ಲಿ ಭಾರತ ಸರ್ಕಾರದ ಡಿ.ಎ.ವಿ.ಪಿ. ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮಳಿಗೆಗಳನ್ನು ತೆರೆಯಲಿದ್ದು, ಸಾರ್ವಜನಿಕರಿಗೆ ತಮ್ಮ ತಮ್ಮ ಇಲಾಖೆಯ ಯೋಜನೆಗಳು, ಸಾಧನೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿವೆ. ಮಾಹಿತಿ ಆಂದೋಲನದ ಬಗ್ಗೆ ಗಂಗಾವತಿಯ ಸುತ್ತಮುತ್ತಲ ಗ್ರಾಮೀಣ ಜನರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಆಯ್ದ ಹಳ್ಳಿಗಳಲ್ಲಿ ವಾರ್ತಾ ಇಲಾಖೆ, ಕೊಪ್ಪಳ ಆಂದೋಲನ ಪೂರ್ವ ಪ್ರಚಾರ ಹಾಗೂ ಮಾಹಿತಿ ಸಿಂಚನ ಕಾರ್ಯಕ್ರಮವನ್ನೂ ಮಾರ್ಚ್ ೩ರಿಂದ ೧೩ರವರೆಗೆ ಹಮ್ಮಿಕೊಂಡಿದೆ.
Please follow and like us:
error

Leave a Reply

error: Content is protected !!