ಐದನೆ ವರ್ಷಕ್ಕೆ ಕಾಲಿಟ್ಟ ರಾಜ್ಯ ಬಿಜೆಪಿ ಸರಕಾರ

ಬೆಂಗಳೂರು,ಮೇ 29:ಪಕ್ಷದೊಳಗಿನ ಆಂತರಿಕ ಕಚ್ಚಾಟ,ನಾಯಕತ್ವಕ್ಕಾಗಿ ನಡೆಯುತ್ತಿರುವ ಗುದ್ದಾಟ, ಭಿನ್ನಮತ, ರೇಸಾರ್ಟ್ ರಾಜಕೀಯದ ಮಧ್ಯೆ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ನಾಳೆಗೆ ನಾಲ್ಕು ವರ್ಷಗಳು ಪೂರೈಸುತ್ತಿದ್ದು,ಐದನೆ ವರ್ಷಕ್ಕೆ ಕಾಲಿಟ್ಟಿದೆ.ಇದೇ ಸಂದರ್ಭದಲ್ಲಿ ಬಿಜೆಪಿಯೊಳಗಿನ ಭಿನ್ನಮತ ಇನ್ನೂ ಶಮನವಾಗಿಲ್ಲ.ನಾಯಕತ್ವ ಬದಲಾವಣೆಗಾಗಿ ಯಡಿಯೂರಪ್ಪನವರ ಸಮರ ಇನ್ನಷ್ಟು ತೀವ್ರವಾಗಿದೆ.ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಮೊಮ್ಮಗಳ ಮದುವೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ಇತರ ವರಿಷ್ಠರ ಮುಂದೆ ಬಿಎಸ್‌ವೈ ಬಣದ ನಾಯಕರು ನಾಯಕತ್ವ ಬದಲಾವಣೆಗೆ ಒತ್ತಡ ಹೇರಲು ರಣತಂತ್ರ ರೂಪಿಸಿದ್ದಾರೆ.ಇದರಿಂದ ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಬಿಜೆಪಿಯೊಳಗೆ ಮತ್ತೆ ಶೀತಲ ಸಮರ ಆರಂಭವಾಗಲಿದೆ.ಮುಖ್ಯಮಂತ್ರಿ ಸದಾನಂದ ಗೌಡರ ತಲೆದಂಡ ಕೇಳುತ್ತಲೇ ಬಿಜೆಪಿಯೊಳಗೆ ಸಮರ ಸಾರಿರುವ ಯಡಿಯೂರಪ್ಪ ಹಾಗೂ ಅವರ ಬಣ,ಮತ್ತೆ ಹೋರಾಟವನ್ನು ತೀವ್ರಗೊಳಿಸಲು ವೇದಿಕೆ ಸಿದ್ಧಪಡಿಸಿಕೊಂಡಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ತಮ್ಮ ಹಾಗೂ ತಮ್ಮ ಆಪ್ತರ ನಿವಾಸ ಕಚೇರಿ,ಸಂಸ್ಥೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಎಫ್‌ಐಆರ್ ದಾಖಲಿಸಿದ್ದರೂ, ಹೋರಾಟವನ್ನು ಸಡಿಲಗೊಳಿಸದ ಯಡಿಯೂರಪ್ಪ, ತಮ್ಮ ಆಪ್ತರಾಗಿರುವ ಜಗದೀಶ್ ಶೆಟ್ಟರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಸಮರಕ್ಕಿಳಿದಿದ್ದಾರೆ.
ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳ ಅವಧಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಇತ್ತೀಚೆಗೆ ಸಿಇಸಿ ಕೇಳಿದ ಮಾಹಿತಿಗೆ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ರಕ್ಷಿಸುವ ರೀತಿಯಲ್ಲಿ ವರದಿ ನೀಡಿದ್ದಾರೆ ಎಂದು ಆಕ್ರೋಶಗೊಂಡಿರುವ ಬಿಎಸ್‌ವೈ ಬಣ ಈ ಬಾರಿ ಕೆಳಗಿಳಿಸಿಯೇ ಸಿದ್ಧ ಎಂದು ಪಣ ತೊಟ್ಟಿದೆ.ಈ ವಿಷಯವನ್ನೇ ಹಿಡಿದುಕೊಂಡು ಬಿಎಸ್‌ವೈ ಬಣದ ನಾಯಕರು ರವಿವಾರದಂದು ನಾಗ್ಪುರಕ್ಕೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಗೆ ದೂರು ನೀಡಿ ವಾಪಸಾಗಿತ್ತು. ಈ ವೇಳೆ ಸಮಾಧಾನಪಡಿಸಿದ್ದ ಗಡ್ಕರಿ, ತಾನು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಈ ಕುರಿತು ಚರ್ಚಿಸುತ್ತೇನೆ ಎಂದು ಹೇಳಿದ್ದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನಾಳೆ ಅವರು ಬೆಂಗಳೂರಿಗೆ ಬಂದಾಗ ಮತ್ತೆ ಅವರ ಮುಂದೆ ಶಕ್ತಿ ಪ್ರದರ್ಶಿಸಲು ಸಿದ್ಧತೆ ನಡೆಸಿರುವ ಬಿಎಸ್‌ವೈ ಬಣದ ನಾಯಕರು, ಒತ್ತಡ ತಂತ್ರಕ್ಕೆ ಮುದಾಗಲಿದ್ದಾರೆ. ಯಾವುದೇ ಕಾರಣಕ್ಕೂ ಸದಾನಂದ ಗೌಡರನ್ನು ಸಿಎಂ ಸ್ಥಾನದಲ್ಲಿ ಉಳಿಸಬಾರದು, ಜೊತೆಗೆ ತಮ್ಮ ಬಣದ ಜಗದೀಶ್ ಶೆಟ್ಟರ್‌ಗೆ ಸಿಎಂ ಗಾದಿ ನೀಡಬೇಕು ಎಂಬ ಒತ್ತಾಯ ಹೇರಲಿದೆ.ಈ ವರೆಗೆ ಜಗದೀಶ್ ಶೆಟ್ಟರ್ ವಿರುದ್ಧವೇ ನಿಂತಿದ್ದ ಯಡಿಯೂರಪ್ಪ, ಇದೀಗ ಸದಾನಂದ ಗೌಡರಿಗಿಂತಲೂ ಶೆಟ್ಟರ್ ಅವರೇ ವಾಸಿ ಎನ್ನುವ ತೀರ್ಮಾನಕ್ಕೆ ಬಂದಿದ್ದು, ಶೆಟ್ಟರ್‌ಗೆ ಪಟ್ಟ ಕಟ್ಟಲು ಮತ್ತೆ ಬಿಜೆಪಿಯೊಳಗೆ ಕಾಳಗ ನಡೆಯುವುದು ನಿಚ್ಚಳವಾಗಲಿದೆ.
ನಾಳೆ ನಗರದಲ್ಲಿ ನಡೆಯಲಿರುವ ತಮ್ಮ ಮೊಮ್ಮಗಳ ಮದುವೆಗೆ ಬರಲಿರುವ ಗಡ್ಕರಿ, ಹಿರಿಯ ನಾಯಕರಾದ ಅರುಣ್ ಜೇಟ್ಲಿ, ರಾಜನಾಥ ಸಿಂಗ್‌ರ ಮುಂದೆ ಒತ್ತಡ ಹೇರಲು ನಿರ್ಧರಿಸಿರುವ ಬಿಎಸ್‌ವೈ ಬಣ,ಪಕ್ಷದ ಶಾಸಕಾಂಗ ಸಭೆ ಕರೆಯುವಂತೆಯೂ ಆಗ್ರಹಿಸಲಿದೆ.ಸದಾನಂದ ಗೌಡ ಸಿಎಂ ಆದ ಮೇಲೆ ಪ್ರತಿಪಕ್ಷದವರೊಂದಿಗೆ ಕೈಮಿಲಾಯಿಸಿದ್ದು, ಜೊತೆಗೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಕುಟುಂಬದ ಸದಸ್ಯರ ಜೊತೆಗಿನ ಸಂಬಂಧದ ಕುರಿತು ಕೂಡಾ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Please follow and like us:
error