ನಾಡಿನ ಕಲೆ ಸಂಸ್ಕೃತಿ ಉಳಿಸಲು ಸಮುದಾಯ ಕೈ ಜೋಡಿಸಬೇಕು -ಹೊನ್ನೂರಸಾಬ್ ಭೈರಾಪುರ

ಕೊಪ್ಪಳ, ನ. ೧೩ : ನಾಡಿನ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಸಮುದಾಯ ಕೈಜೋಡಿಸಬೇಕು ಎಂದು ಭಾಗ್ಯನಗರ ಗ್ರಾ. ಪಂ. ಅಧ್ಯಕ್ಷ  ಹೊನ್ನೂರಸಾಬ್ ಭೈರಾಪುರ ಹೇಳಿದ್ದಾರೆ. 

ನ.೧೨ ರಂದು ಸಂಜೆ ೬:೩೦ಕ್ಕೆ ಭಾಗ್ಯನಗರ ಸರಕಾರಿ ಪ. ಪೂ. ಕಾಲೇಜಿನ ಆವರಣದಲ್ಲಿ ರಂಗಯಾನ ವೇದಿಕೆ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿ ಶ್ರೀನಿವಾಸ ಗುಪ್ತಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸಿನಿಮಾ ಮತ್ತು ಟಿವಿ ಮಾಧ್ಯಮದ ಹೊಡೆತದಿಂದಾಗಿ ಗ್ರಾಮೀಣ ಕಲೆಗಳಾದ ದೊಡ್ಡಾಟ, ಬಯಲಾಟ, ನಾಟಕಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂಥ ನಾಟಕ ಪ್ರದರ್ಶನಗಳು ಮೇಲಿಂದ ಮೇಲೆ ಪ್ರದರ್ಶನಗೊಳ್ಳಬೇಕು ಎಂದರು. 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಮಾತನಾಡಿ, ಜಾನಪದ ಹಿನ್ನೆಲೆಯುಳ್ಳ ಸಂಗ್ಯಾ ಬಾಳ್ಯಾ ನಾಟಕ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ನಶಿಸುತ್ತಿರುವ ಕಲೆಗಳು ನಮ್ಮ ಪುರಾತನ ಸಂಸ್ಕೃತಿಯ ಪ್ರತೀಕವಾಗಿವೆ ಈ ನಿಟ್ಟಿನಲ್ಲಿ ರಂಗಯಾನ ವೇದಿಕೆ ಭಾಗ್ಯನಗರದಲ್ಲಿ ನಾಟಕ ಪ್ರಯೋಗಿಸುವ ಮೂಲಕ ಒಂದು ಒಳ್ಳೆಯ ಪ್ರಯತ್ನ ಮಾಡಿದೆ ಎಂದರು. 
ಇನ್ನೊಬ್ಬ ಮುಖ್ಯ ಅತಿಥಿ ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಘಂಟಿ ಅವರು ಮಾತನಾಡಿ, ಮರಿಯಮ್ಮನಹಳ್ಳಿ ನಾಟ್ಯ ಕಲಾ ರಂಗದ ಕಲಾವಿದರು ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನ ನೀಡುವ ಮೂಲಕ ನಮ್ಮೆಲ್ಲರನ್ನು ಹಿಂದಿನ ಕಾಲಮಾನಕ್ಕೆ ಕೊಂಡೊಯ್ದರು. ಇಂಥ ನಾಟಕ ಪ್ರದರ್ಶನದ ಮೂಲಕ ಕಲೆ, ಸಂಸ್ಕೃತಿಯನ್ನು ಜೀವಂತವಾಗಿಸುವಲ್ಲಿ ರಂಗಯಾನ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರಮ ಸಾರ್ಥಕವಾಗಿದೆ ಎಂದರು.
ಕೈಮಗ್ಗ ಹಾಗೂ ಜವಳಿ ಇಲಾಖೆ ಸಹಾಯಕ ನಿರ್ದೇಶಕ ಕೀರ್ತೆಪ್ಪ ಗೋಟೂರು, ಜಾನಪದ ತಜ್ಞ ಸಿ. ವಿ. ಜಡಿ, ಉದ್ಯಮಿ ಯಮನಪ್ಪ ಕಬ್ಬೇರ, ತಾ.ಪಂ. ಸದಸ್ಯ ಶ್ರೀನಿವಾಸ ಹ್ಯಾಟಿ, ಸರಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕ ಸುರೇಂದ್ರಗೌಡ ಪಾಟೀಲ, ಗ್ರಾ. ಪಂ. ಸದಸ್ಯರಾದ ಪರಶುರಾಮ ದಲಬಂಜನ, ಚಂದ್ರು ಉಂಕಿ, ಸುರೇಶ ದರಗದಕಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಶಾಲೆಯ ವಿದ್ಯಾರ್ಥಿನಿಯರಾದ ಶಾರದಾ ಹಾಗೂ ತ್ರಿವೇಣಿ ಪ್ರಾರ್ಥಿಸಿದರು. ಪತ್ರಕರ್ತ ಹಾಗೂ ಕಲಾವಿದ ವೈ. ಬಿ. ಜೂಡಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಶಿಕ್ಷಕ ಸೋಮಶೇಖರ ಹರ್ತಿ ವಂದಿಸಿದರು.

Leave a Reply