ಶಿಕ್ಷಣವು ಜ್ಞಾನ ಸಂಪಾದನೆಗಾಗಿದೆ-ಪ್ರಬೋಧ್ ನಾಯಕ್

ಹೊಸಪೇಟೆ: ಶಿಕ್ಷಣವು ಅರ್ಹತೆಯ ಬೆಂಬಲದಿಂದ ಬರುವುದಕ್ಕಿಂತಲೂ ಸಮಾಜದೊಂದಿಗಿನ ನಮ್ಮ ವರ್ತನೆಯನ್ನು ಅವಲಂಬಿಸಿ ಆ ಮೂಲಕ ಜ್ಞಾನ ಸಂಪಾದನೆಯಾಗುತ್ತದೆ ಎಂದು ಹಿರಿಯ ಚಾರ್ಟೆಡ್ ಅಕೌಂಟೆಂಟ್ ಪ್ರಬೋಧ್ ನಾಯಕ್ ಹೇಳಿದರು.
ವಿಜಯನಗರ ಕಾಲೇಜಿನಲ್ಲಿ ಬಿಬಿಎಂ ವಿಭಾಗವು ಏರ್ಪಡಿಸಿದ್ದ ರಾಜ್ಯಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ ’ಅದ್ವಿತೀಯ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನುಭವಗಳಿಂದ ಸಿಗುವ ಶಿಕ್ಷಣವು ತರಗತಿ ಮತ್ತು ಪುಸ್ತಕಗಳಿಂದ ಸಿಗುವ ಶಿಕ್ಷಣದ ಪ್ರಾಯೋಗಿಕ ರೂಪವಾಗಿದೆ.  ಇಂದು ಸ್ಪರ್ಧೆ ಎಂಬುದು ಜ್ಞಾನಕ್ಕಾಗಿ ಇರುವುದೇ ಹೊರತು ಗೆಲುವಿಗಾಗಿ ಅಲ್ಲ ಎಂಬ ಹೊಸ ಪರಿಕಲ್ಪನೆಯಲ್ಲಿ ರೂಪಗೊಂಡಿದೆ ಎಂದರು.  ಕೌಟುಂಬಿಕ ವ್ಯವಸ್ಥೆಯು ಸಾಮಾಜಿಕ ಅಗತ್ಯಕ್ಕೆ ಸ್ಪಂದಿಸಿ ಸಾಗಬೇಕಾಗಿರುವುದರಿಂದ ಕೌಟುಂಬಿಕ ಪರಿಕಲ್ಪನೆಯೇ ಒಂದು ಗುಂಪಿನ ಬುದ್ದಿವಂತ ಜನರು ಒಂದೆಡೆ ಆಧುನಿಕ ಸಮಾಜದ ಬಗ್ಗೆ ಚಿಂತಿಸುವ ನೆಲೆಯಾಗಿ ಪರಿವರ್ತನೆಗೊಂಡಿದೆ.  ಸಮಸ್ಯೆಗಳಿಂದ ದೂರ ಸಾಗುವುದಕ್ಕಿಂತಲೂ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಇಂದಿನ ಸಮಾಜದ ವಿದ್ಯಾರ್ಥಿಗಳು ಮಾಡಬೇಕಾಗಿದೆ.  ಆಧುನಿಕ ವಿದ್ಯುನ್ಮಾನಗಳನ್ನು ಬಳಸಿ ಇಂದಿನ ವಿದ್ಯಾರ್ಥಿಗಳು ಇಂದಿನ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ತಮ್ಮನ್ನು ಅರ್ಥೈಸಿಕೊಂಡು ಸಾಗಿದರೆ ಸಹಜವಾಗಿ ಅವರು ದೊಡ್ಡ ಪ್ರಮಾಣದ ಉದ್ದಿಮೆದಾರರಾಗುವ ಅವಕಾಶಗಳಿವೆ.  ದೇಶದ ಬೃಹತ್ ಪ್ರಮಾಣದ ಉದ್ದಿಮೆಗಳು ಸಣ್ಣ ಪ್ರಮಾಣದ ಬಂಡವಾಳ ಮತ್ತು ಸಮರ್ಪಕವಾದ ವ್ಯವಸ್ಥಾಪನೆಯಿಂದ ಅಭಿವೃದ್ಧಿಯನ್ನು ಪಡೆದಿವೆ.  ವಿದ್ಯಾರ್ಥಿಗಳಿಗೆ ತಾವು ಮಾಡುವ ಕೆಲಸಗಳಲ್ಲಿ ಆತ್ಮವಿಶ್ವಾಸವಿದ್ದರೆ ಸಹಜವಾಗಿ ಆತ್ಮಗೌರವ ಹಾಗೂ ಸಾಮಾಜಿಕ ಮನ್ನಣೆ ಲಭ್ಯವಾಗುತ್ತದೆ ಎಂದರು.  ಕಾಲೇಜಿನ ಸುವರ್ಣ ಭವನದಲ್ಲಿ ನಡೆದ ಈ ಫೆಸ್ಟ್‌ನಲ್ಲಿ ರಾಜ್ಯದ ಹನ್ನೆರಡು ತಂಡಗಳ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಸ್.ಪೋಲಿಸ್ ಪಾಟೀಲ್ ಮಾತನಾಡಿ,  ವಿದ್ಯಾರ್ಥಿಗಳು ಇಂದಿನ ಮಾರುಕಟ್ಟೆಯ ಬೇಡಿಕೆ ಮತ್ತು ಉತ್ಪಾದನೆ ಇವುಗಳಿಗೆ ತಮ್ಮನ್ನು ಸಮಾನ ಅನುಪಾತದಲ್ಲಿ ಹೊಂದಿಸಿ ಅಭ್ಯಾಸಮಾಡುವ ಅಗತ್ಯವು ವಿಶೇಷವಾಗಿ ವಾಣಿಜ್ಯ ಪದವಿ ಮತ್ತು ಬಿ.ಬಿ.ಎಂ. ವಿದ್ಯಾರ್ಥಿಗಳಿಗಿದೆ.  ಬದಲಾಗುತ್ತಿರುವ ವಿದ್ಯಮಾನಗಳಿಗೆ ಸ್ಪಂದಿಸುವುದು ಇಂದಿನ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯಾಗಿದೆ ಎಂದರು.  ವೇದಿಕೆಯ ಮೇಲೆ ಆಡಳಿತ ಮಂಡಳಿಯ ಸದಸ್ಯರಾದ ಜಿ. ಲಿಂಗನಗೌಡ, ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಡಾ.ಎಂ.ಜೆ.ಬಸವರಾಜ ಹಾಜರಿದ್ದರು. ಬಿ.ಬಿ.ಎಂ. ವಿಭಾಗ ಮುಖ್ಯಸ್ಥ ಪ್ರೊ.ಪ್ರಕಾಶ್ ಕಟ್ಟಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.   ಅಭಿಷೇಕ್ ಗಟ್ಟಿನ ಮತ್ತು ಮೀನ ಪಾಲರೇಚ ನಿರೂಪಿಸಿದರು. ಸಂಧ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು.

Related posts

Leave a Comment