You are here
Home > Koppal News > ಗಾಂಧಿವಾದಿ ಶಿರೂರ ವೀರಭದ್ರಪ್ಪ ಸಂಸ್ಮರಣ ಗ್ರಂಥಕ್ಕೆ ಲೇಖನ ಆಹ್ವಾನ.

ಗಾಂಧಿವಾದಿ ಶಿರೂರ ವೀರಭದ್ರಪ್ಪ ಸಂಸ್ಮರಣ ಗ್ರಂಥಕ್ಕೆ ಲೇಖನ ಆಹ್ವಾನ.

ಕೊಪ್ಪಳ  : ೧೯೦೮ ರಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಆಡೂರಿನಲ್ಲಿ ಜನಿಸಿದ ಗಾಂಧಿವಾದಿ, ಭಾರತ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುತ್ಸದ್ಧಿಗಳು, ಕರ್ನಾಟಕ ಏಕೀಕರಣ ಚಳುವಳಿಯ ಹೋರಾಟಗಾರರು, ಮಾಜಿ ಶಾಸಕರು, ವಿಧಾನಸಭೆಯ ವಿರೋಧ ಪಕ್ಷದ ಮಾಜಿ ಉಪನಾಯಕರು, ಹೈದ್ರಬಾದ ಕರ್ನಾಟಕ ವಿಮೋಚನಾ ಹೋರಾಟಗಾರರಾಗಿದ್ದ ಶಿರೂರ ವೀರಭದ್ರಪ್ಪ ಅವರನ್ನು ಕುರಿತು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಮರಣ ಗ್ರಂಥವನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. ಶಿರೂರ ವೀರಭದ್ರಪ್ಪ ಅವರು ೧೯೩೨ ರಲ್ಲಿ ಆಡೂರಿನಲ್ಲಿ ‘ರಾಷ್ಟ್ರೀಯ ಶಾಲೆ’, ‘ವಿಶ್ವನಾಥ ವಾಚನಾಲಯ’, ರಾಜೂರಿನಲ್ಲಿ ‘ಹರಿಜನ ಶಾಲೆ’ ಸ್ಥಾಪಿಸಿದರು. ಹರ್ಡೇಕರ್ ಮಂಜಪ್ಪನವರ ಜೀವನ ಚರಿತ್ರೆ ಬರೆದರು. ಬಸರಿಗಿಡದ ವೀರಪ್ಪನವರ ಅಭಿನಂಧನಾ ಗ್ರಂಥ ಹೊರತಂದರು. ೧೯೫೩ ರಲ್ಲಿ ‘ಲೋಕವಾಣಿ’ ಪತ್ರಿಕೆಯನ್ನು ಪ್ರಾರಂಭಿಸಿದರು. ಕೊಪ್ಪಳ ಜಿಲ್ಲಾ ಹರಿಜನ ಸೇವಕ ಸಂಘದ ಅಧ್ಯಕ್ಷರಾಗಿ, ಕೊಪ್ಪಳ ತಾಲೂಕ ಕಾಂಗ್ರೇಸ್ ಅಧ್ಯಕ್ಷರಾಗಿ, ಕೊಪ್ಪಳ ಪುರಸಭೆಯ ಸದಸ್ಯರಾಗಿ, ‘ಕರ್ನಾಟಕ ಹುಲಿ’ ಅಳವಂಡಿ ಶಿವಮೂರ್ತಿಸ್ವಾಮಿಗಳ ನೇತೃತ್ವದಲ್ಲಿ ಆರಂಭವಾದ ‘ಲೋಕಸೇವಕ ಸಂಘ’ಎಂಬ ಪಕ್ಷದ ಕಾರ್ಯದರ್ಶಿಯಾಗಿ ಹಾಗೂ ಅದರ ಅಧ್ಯಕ್ಷರಾಗಿ ಅದೇ ಪಕ್ಷದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದ ಇವರ ತ್ಯಾಗಮಯ ಜೀವನ ಕುರಿತು ಸಂಸ್ಮರಣ ಗ್ರಂಥವನ್ನು ಹೊರತರುತ್ತಿದ್ದೇವೆ. ಇವರನ್ನು ಕುರಿತು ಈ ಕೆಳಗಿನ ವಿಳಾಸಕ್ಕೆ ಲೇಖನ, ಕವನಗಳನ್ನು ಮೇ ೧೦ ರ ಒಳಗಾಗಿ ಕಳುಹಿಸಲು ಕೋರಲಾಗಿದೆ.

Leave a Reply

Top