ಗ್ರಾಮ ಪಂಚಾಯತಿಗಳಿಗೆ ನೇಮಕಾತಿ: ವದಂತಿಗಳಿಗೆ ಕಿವಿಗೊಡದಿರಲು ಸೂಚನೆ

  ಜಿಲ್ಲೆಯ  ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮನ್, ಜವಾನ, ಸ್ವಚ್ಛತೆಗಾರರ ನೇಮಕಾತಿಯು ನಿಯಮಾನುಸಾರ ಜಿಲ್ಲಾ ಪಂಚಾಯತಿಯ ಪೂರ್ವಾನುಮೋದನೆಯೊಂದಿಗೆ ನಡೆಸಲಾಗುತ್ತಿದ್ದು, ಸುಳ್ಳು ವದಂತಿಗಳಿಗೆ ಅಥವಾ ಗೊಂದಲಗಳಿಗೆ ಕಿವಿಗೊಡದಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿದ್ದಾರೆ.
  ಪ್ರತಿ ಗ್ರಾಮ ಪಂಚಾಯತಿಯಲ್ಲಿ   ಕರವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮನ್, ಜವಾನ, ಸ್ವಚ್ಛತೆಗಾರರ ತಲಾ ಒಂದರಂತೆ ಒಟ್ಟು ಐದು ಹುದ್ದೆಗಳಿಗೆ ಈಗಾಗಲೇ ಕಳೆದ ೨೦೧೪ ರ ನ.೨೨ ರಂದು ಜಿಲ್ಲಾ ಪಂಚಾಯತಿಯಿಂದ ಪೂರ್ವಾನುಮೋದನೆಯನ್ನು ನೀಡಲಾಗಿರುತ್ತದೆ.  ಅಲ್ಲದೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅನುಮೋದನೆ ಆಕ್ಷೇಪಣೆ/ದೂರುಗಳಿದ್ದಲ್ಲಿ ನೇರವಾಗಿ ಜಿ.ಪಂ. ಹಾಗೂ ತಾ.ಪಂ. ಮೂಲಕ ಪ್ರಸ್ತಾವನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸುಮಾರು ದೂರುಗಳು/ಆಕ್ಷೇಪಣೆಗಳ ಸ್ವೀಕೃತಿಯ ನಂತರ, ಜಿ.ಪಂ. ಪೂರ್ವಾನುಮೋದನೆಯಿಂದ ಕೈಬಿಟ್ಟು ಹೋಗಿರುವ ಸಿಬ್ಬಂದಿಗಳಿಗೆ ಪುನಃ ಮತ್ತೊಮ್ಮೆ ಅಂತಿಮವಾಗಿ ಜಿಲ್ಲಾ ಪಂಚಾಯತಿಯಿಂದ ಪೂರ್ವಾನುಮೋದನೆ ನೀಡಲಾಗುತ್ತಿದೆ.  ಈ ಪೂರ್ವಾನುಮೋದನೆಗೆ ನಿಯಮಾನುಸಾರವಾಗಿ ಗ್ರಾಮ ಪಂಚಾಯತಿ ಠರಾವು, ನಿಗದಿತ ವಿದ್ಯಾರ್ಹತೆ, ನಿರಂತರ ಸೇವೆ, ನಿಗದಿತ ನೇಮಕಾತಿಯು, ನಿಯಮಾನುಸಾರ ಇದ್ದಲ್ಲಿ ಮಾತ್ರ ಪರಿಗಣಿಸಲಾಗುತ್ತಿದೆ.  ಇದನ್ನು ಹೊರತುಪಡಿಸಿ, ಬೇರಾವುದೇ ರೀತಿಯಲ್ಲಿ ಗ್ರಾ.ಪಂ. ಮಾಡಿಕೊಂಡಿರುವ ನೇಮಕಾತಿಗೆ ಜಿಲ್ಲಾ ಪಂಚಾಯತಿಯಿಂದ ಪೂರ್ವಾನುಮೋದನೆ ನೀಡಲಾಗುವುದಿಲ್ಲ. ಈಗಾಗಲೇ ಮಂಡಲ ಪಂಚಾಯತ್‌ದಿಂದ ನೇಮಕ ಹೊಂದಿದ ಅಥವಾ ಈಗಾಗಲೇ ಜಿಲ್ಲಾ ಪೂರ್ವಾನುಮೋದನೆ ಹೊಂದಿದ ಸಿಬ್ಬಂದಿಗಳಿದ್ದಲ್ಲಿ ಪುನಃ ಅದೇ ಹುದ್ದೆಗೆ ಪೂರ್ವಾನುಮೋದನೆಗೆ ಅವಕಾಶವಿರುವುದಿಲ್ಲ.   
ಈ ಕುರಿತು ಸುಳ್ಳು ವದಂತಿಗಳಿಗೆ ಅಥವಾ ಮಧ್ಯವರ್ತಿಗಳಿಗೆ ಅವಕಾಶ ನೀಡದೇ ಇದರಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ. ಕೊಪ್ಪಳ : ದೂ.ಸಂಖ್ಯೆ: ೦೮೫೩೯-೨೨೦೦೦೨, ಉಪಕಾರ್ಯದರ್ಶಿಗಳು ಜಿ.ಪಂ, ಕೊಪ್ಪಳ : ೦೮೫೩೯- ೨೨೦೨೩೭. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಕೊಪ್ಪಳ : ೦೮೫೩೯-೨೨೦೩೯೯,   ಕುಷ್ಟಗಿ : ೦೮೫೩೬-೨೬೭೦೨೮,   ಯಲಬುರ್ಗಾ : ೦೮೫೩೩-೨೨೦೧೩೬, ಗಂಗಾವತಿ : ೦೮೫೩೩-೨೨೦೨೩೦ ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣ ಡಿ.ಉದಪುಡಿ   ತಿಳಿಸಿದ್ದಾರೆ.

Leave a Reply