ಇಂದು ಜೆಡಿಎಸ್ ಕಚೇರಿ ಕಾಂಗ್ರೆಸ್‌ಗೆ ಹಸ್ತಾಂತರ

ಬೆಂಗಳೂರು,   ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯನ್ನು ಖಾಲಿ ಮಾಡಲು ಕೊನೆಗೂ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ.
 ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಚೇರಿಯಲ್ಲಿರುವ ಎಲ್ಲ ಕಡತಗಳನ್ನು ಗಂಟುಮೂಟೆ ಕಟ್ಟಲಾಗಿದ್ದು, ನಾಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಅಧಿಕೃತವಾಗಿ ಕಚೇರಿಯನ್ನು ಹಸ್ತಾಂತರ ಮಾಡಲಾಗುವುದು ಎಂದರು. ನ್ಯಾಯಾಲಯದ ಆದೇಶವನ್ನು ನನ್ನ ಜೀವನದಲ್ಲಿ ಎಂದಿಗೂ ಉಲ್ಲಂಘನೆ ಮಾಡಿಲ್ಲ. ಪಕ್ಷದ ಕಚೇರಿಯನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದೆವು ಆದರೂ ಕಾನೂನು ಹೋರಾಟದಲ್ಲಿ ನಮಗೆ ಜಯ ಸಿಗಲಿಲ್ಲ ಎಂದು ದೇವೇಗೌಡ ಹೇಳಿದರು
. ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಈ ಕಚೇರಿ ಕಾಂಗ್ರೆಸ್‌ಗೆ ಸೇರಿದ್ದು ಎಂದು ಆದೇಶ ನೀಡಿತು. ಅದನ್ನು ಪ್ರಶ್ನಿಸಿ ನಾವು ಕ್ಯೂರೇಟರ್ ಅರ್ಜಿಯನ್ನು ಸಲ್ಲಿಸಿದ್ದೆವು. ಆದರೆ ಆ ಅರ್ಜಿಯೂ ವಜಾಗೊಂಡಿದೆ. ಆದುದರಿಂದ ಕಚೇರಿಯನ್ನು ಕಾಂಗ್ರೆಸ್‌ಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಒಕ್ಕಲಿಗರ ಸಂಘಕ್ಕೆ ಕಚೇರಿಯನ್ನು ವರ್ಗಾಯಿಸುವ ಸಲಹೆ ಬಂದಿತ್ತು. ಆದರೆ ಒಕ್ಕಲಿಗರ ಸಂಘದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಸದಸ್ಯರಿರುವುದರಿಂದ ಈ ಬಗ್ಗೆ ಇತರರು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಯಿದೆ. ಆದುದರಿಂದ ಒಕ್ಕಲಿಗರ ಸಂಘಕ್ಕೆ ಕಚೇರಿ ವರ್ಗಾವಯಿಸುವ ವಿಚಾರವನ್ನು ಕೈ ಬಿಟ್ಟಿದ್ದೇವೆ ಎಂದು ಅವರು ತಿಳಿಸಿದರು.ಕಚೇರಿಯಲ್ಲಿರುವ ಎಲ್ಲ ಕಡತಗಳು, ಪಿಠೋಪಕರಣಗಳನ್ನು ಹೊರಗಿಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಸೂಕ್ತವಾದ ಕಟ್ಟಡ ಸಿಕ್ಕ ಕೂಡಲೇ ಅವುಗಳನ್ನು ವರ್ಗಾಯಿಸಲಾಗುವುದು ಎಂದು ದೇವೇಗೌಡ ಹೇಳಿದರು.
Please follow and like us:
error