ಮಕ್ಕಳ ಸಹಾಯವಾಣಿ ೧೦೯೮ ಬಗ್ಗೆ ವ್ಯಾಪಕ ಅರಿವು ಮೂಡಿಸಿ- ಡಾ. ಪ್ರವೀಣಕುಮಾರ್ ಜಿ.ಎಲ್.

 ಕೊಪ್ಪಳ ಅ. ೨೦ (ಕ ವಾ) ಸಂಕಷ್ಟಕ್ಕೆ ಸಿಲುಕಿದ ಹಾಗೂ ಶೋಷಣೆಗೆ ಒಳಗಾದ ಮಕ್ಕಳ ರಕ್ಷಣೆಗಾಗಿ ಯಾವುದೇ ಸಾರ್ವಜನಿಕರು ಉಚಿತವಾಗಿ ಕರೆ ಮಾಡಿ ಮಾಹಿತಿ ನೀಡಲು ಅವಕಾಶವಿರುವ ೧೦೯೮- ಮಕ್ಕಳ ಸಹಾಯವಾಣಿ ಕುರಿತಂತೆ ಜನಸಾಮಾನ್ಯರಲ್ಲಿ ವ್ಯಾಪಕ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯವರಿಗೆ ಸೂಚನೆ ನೀಡಿದರು.
     ಮಕ್ಕಳ ಸಹಾಯವಾಣಿ-೧೦೯೮ ಯೋಜನೆ ಅನುಷ್ಠಾನ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಮಕ್ಕಳ ಸಲಹಾ ಮಂಡಳಿ ರಚನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಮಕ್ಕಳ ಸಹಾಯವಾಣಿ- ೧೦೯೮ ಯೋಜನೆಯನ್ನು ಜಿಲ್ಲೆಯ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ವಹಿಸುತ್ತಿದೆ.  ಶೋಷಣೆಗೆ ಒಳಗಾದ ಅಥವಾ ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ರಕ್ಷಣೆ ಮಹತ್ವದ ಕಾರ್ಯವಾಗಿದ್ದು, ೧೦೯೮ ಉಚಿತ ಸಹಾಯವಾಣಿ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆ ಇದೆ.  ಪೊಲೀಸ್ ಕರೆಗೆ ೧೦೦, ಆಂಬುಲೆನ್ಸ್‌ಗೆ ೧೦೮ ಸಹಾಯವಾಣಿ ಕರೆ ಸಂಖ್ಯೆಗಳು ಹೇಗೆ ಜನಸಾಮಾನ್ಯರ ಬಾಯಲ್ಲಿ ಸುಲಭವಾಗಿ ಹರಿದಾಡುವುದೋ, ಅದೇ ರೀತಿ ಮಕ್ಕಳ ಸಹಾಯವಾಣಿ-೧೦೯೮ ಸಂಖ್ಯೆಯ ಬಗ್ಗೆ ಸಾರ್ವಜನಿಕರಿಗೆ ಮನದಟ್ಟಾಗುವಂತೆ, ವ್ಯಾಪಕ ಪ್ರಚಾರ ಕೈಗೊಳ್ಳಬೇಕು.  ಸಹಾಯವಾಣಿ ಕುರಿತಂತೆ ಎಲ್ಲ ಸರ್ಕಾರಿ ಬಸ್‌ಗಳು, ಶಾಲಾ ಕಾಲೇಜುಗಳ ಕಾಂಪೌಂಡ್‌ಗಳು, ಆಟೋಗಳಿಗೆ ಸ್ಟಿಕರ್‍ಸ್‌ಗಳನ್ನು ಹಚ್ಚಿಸಿ, ವ್ಯಾಪಕ ಪ್ರಚಾರ ಆಗುವಂತೆ ನೋಡಿಕೊಳ್ಳಬೇಕು.  ಕೋಳಿ ಫಾರಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಇರಿಸಿಕೊಳ್ಳುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಕಾರ್ಮಿಕ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ಕೋಳಿಫಾರಂಗಳಿಗೆ ಭೇಟಿ ನೀಡಿ, ಎಲ್ಲ ನಿಯಮಗಳ ಪಾಲನೆ ಆಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.  ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು.  ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಕ್ಕಳ ಸಹಾಯವಾಣಿಯ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಇದುವರೆಗೂ ಕೈಗೊಂಡಿರುವ ಕಾರ್ಯ ತೃಪ್ತಿಕರವಾಗಿಲ್ಲ.  ಮುಂದಿನ ದಿನಗಳಲ್ಲಿಯಾದರೂ, ವ್ಯಾಪಕ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಜಿ.ಎಲ್. ಪ್ರವೀಣ್‌ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಾಲ್ಯ ವಿವಾಹ ತಡೆಗಟ್ಟಿ : ಜಿಲ್ಲೆಯಲ್ಲಿ ಮದುವೆಯಾಗುತ್ತಿರುವ ಹೆಣ್ಣು ಮಕ್ಕಳ ಸರಾಸರಿ ವಯಸ್ಸು ಎಷ್ಟು ಎಂದಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳಿದ್ದು, ೧೫ ರಿಂದ ೧೮ ವರ್ಷ.  ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಬಾಲ್ಯ ವಿವಾಹಗಳು ಜರುಗುವ ಸಂಗತಿ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು, ಪಿಡಿಓ ಗಳು, ಕಂದಾಯ ನಿರೀಕ್ಷಕರು ಇವರಿಗೆ ಮಾಹಿತಿ ಲಭ್ಯವಾದ ಕೂಡಲೆ, ಸಂಬಂಧಪಟ್ಟ ತಹಸಿಲ್ದಾರರರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಅಥವಾ ಯೂನಿಸೆಫ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.  ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮೂಹಿಕ ಮದುವೆಗಳನ್ನು ನಡೆಸುವ ಸಂಘಟಕರು, ಧಾರ್ಮಿಕ ಮುಖಂಡರುಗಳಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.  ಮಕ್ಕಳ ರಕ್ಷಣೆ ಹಾಗೂ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಲು ಅನಗತ್ಯ ವಿಳಂಬ ಮಾಡುವುದು, ತಿರಸ್ಕರಿಸುವುದು ಇಂತಹ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.  ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಅಧಿಕಾರಿಗಳು, ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ಮೊದಲು ಸ್ವೀಕರಿಸಿ, ದಾಖಲಿಸುವ ಕಾರ್ಯ ಆಗಬೇಕು.  ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಡಿವೈಎಸ್‌ಪಿ ರಾಜೀವ್ ಅವರಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗರಾಜ್ ದೇಸಾಯಿ, ಶರಣಪ್ಪ, ಯುನಿಸೆಫ್‌ನ ಹರೀಶ್ ಜೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error