ಸಂಪತ್ತಿನ ಲೂಟಿ ಭ್ರಷ್ಟಾಚಾರದ ಮತ್ತೊಂದು ಮುಖ: ಮೇಧಾ ಪಾಟ್ಕರ್

 ಬೆಂಗಳೂರು, ನ. 19: ಬಂಡವಾಳಿಗರು ಬಡವರ ಭೂಮಿಯನ್ನು ಬಿಡಿಗಾಸಿಗೆ ಖರೀದಿಸಿ ಅದರಲ್ಲಿ ಖನಿಜ ಸಂಪತ್ತನ್ನು ಲೂಟಿ ಮಾಡುವುದು ಕೂಡ ಭ್ರಷ್ಟಾಚಾರ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅಭಿಪ್ರಾಯಪಟ್ಟಿದ್ದಾರೆ.ಶನಿವಾರ ನಗರದ ಬನ್ನಪ್ಪ ಪಾರ್ಕ್‌ನಲ್ಲಿ ಭೂ ರಹಿತರಿಗೆ ಭೂಮಿ ಹಂಚಿಕೆಗೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಣ್ಣಾ ಹಝಾರೆ ಹೋರಾಟ ಭ್ರಷ್ಟಾಚಾರದ ವಿರುದ್ಧವಾಗಿದೆ. ಆದರೆ, ಭೂಮಿಯ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟತೆ ನಡೆಯುತ್ತಿದೆ. ಇದರ ವಿರುದ್ಧವೂ ಹೋರಾಟ ಅಗತ್ಯ ಎಂದು ಪ್ರತಿಪಾದಿಸಿದರು.
ಬಳ್ಳಾರಿಯ ರೆಡ್ಡಿ ಸಹೋದರರು ಬಡವರ ನೂರಾರು ಎಕರೆ ಭೂಮಿ ಖರೀದಿಸಿ ಅದರಲ್ಲಿನ ಖನಿಜ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಜನ ಸಾಮಾನ್ಯರಿಗೆ ಸಿಗಬೇಕಾಗಿದ್ದ ಭೂಮಿ, ನೀರಿನ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದ್ದು, ಜನರಿಂದ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಮೇಧಾ ಪಾಟ್ಕರ್ ಆಕ್ಷೇಪ ವ್ಯಕ್ತಪಡಿಸಿದರು.
ಸರಕಾರಗಳು ಅರಣ್ಯ ಕಾಯ್ದೆ ಜಾರಿಯಾದ ನಂತರವೂ ಕಾಡಿನಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳನ್ನು ಎತ್ತಂಗಡಿ ಮಾಡಲಾಗುತ್ತಿವೆ. ಇದು ಕಾಯ್ದೆಗೆ ವಿರುದ್ಧ. ಅಲ್ಲದೆ ಸಾಗುವಳಿ ಮಾಡುತ್ತಿರುವ ದಲಿತರಿಗೆ ಸರಕಾರ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಆದರೆ, ಸರಕಾರ ಇಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುತ್ತಿದೆ ಎಂದು ಆರೋಪಿಸಿದ ಅವರು ಇದು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
2006ರ ಅರಣ್ಯ ಕಾಯ್ದೆ ಜಾರಿ, ದಲಿತರ ಭೂಮಿಗೆ ಹಕ್ಕುಪತ್ರ, ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ದಲಿತರಿಗೆ ಹಕ್ಕುಪತ್ರ, ದಲಿತ ಕುಟುಂಬಕ್ಕೆ ಐದು ಎಕರೆ ಭೂಮಿ ನೀಡುವುದು ಸೇರಿದಂತೆ ದಲಿತರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಮೇಧಾ ಪಾಟ್ಕರ್ ಇದೇ ಸಂದರ್ಭದಲ್ಲಿ ಒತ್ತಾಯ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಬಿಜೆಪಿ ಸರಕಾರ ಲ್ಯಾಂಡ್ ಬ್ಯಾಂಕಿನ ಹೆಸರಿನಲ್ಲಿ ನೂರಾರು ಎಕರೆ ರೈತರ ಭೂಮಿಯನ್ನು ಖರೀದಿಸಿದ್ದು, ಭೂಗಳ್ಳರಿಗೆ ಬಿಡಿಗಾಸಿಗೆ ಮಾರಾಟ ಮಾಡುತ್ತಿದೆ. ಇದರ ವಿರುದ್ಧ ಉಗ್ರ ಸ್ವರೂಪದ ಹೋರಾಟ ಅಗತ್ಯ ಎಂದು ಕರೆ ನೀಡಿದರು.ಜಾಥಾದಲ್ಲಿ ನ್ಯಾಷನಲ್ ದಲಿತ್ ಲ್ಯಾಂಡ್ ರೈಟ್ಸ್ ಮೂಮೆಂಟ್, ಕರ್ನಾಟಕ ದಲಿತ ಮಹಿಳಾ ವೇದಿಕೆ ಅಧ್ಯಕ್ಷೆ ಯಶೋಧ, ಸಂಚಾಲಕಿ ವೆಂಕಟಲಕ್ಷ್ಮಮ್ಮ, ಸಂಗಮ ಮನೋಹರ್, ರಾಜಗೋಪಾಲ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Leave a Reply