ರಾಜೀವ್ ರಿನ್ ಯೋಜನೆಯಡಿ ಗೃಹ ನಿರ್ಮಾಣಕ್ಕೆ : ಅರ್ಜಿ ಆಹ್ವಾನ

 ಕೊಪ್ಪಳ ನಗರಸಭೆಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಪ್ರಸಕ್ತ ಸಾಲಿಗಾಗಿ ರಾಜೀವ್ ರಿನ್ ಯೋಜನೆಯಡಿ ಗೃಹ ನಿರ್ಮಾಣಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 
ಕೇಂದ್ರ ಸರ್ಕಾರವು ನಗರದ ಬಡವರಿಗೆ ಕೈಗೆಟಕುವ ದರದಲ್ಲಿ ವಸತಿ ಗೃಹ ನಿರ್ಮಾಣಕ್ಕಾಗಿ ನೆರವು ಒದಗಿಸುವ ನಿಟ್ಟಿನಲ್ಲಿ ಬಡ್ಡಿ ದರದಲ್ಲಿ ಶೇ.೫ ರಷ್ಟು ಸಹಾಯಧನ ನೀಡುವ ವಿನೂತನ ಯೋಜನೆಯಾಗಿ ರಾಜೀವ್ ರಿನ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಕಲಚೇತನ ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಯೋಜನೆಯಡಿ ಆರ್ಥಿಕ ದುರ್ಬಲ ವರ್ಗದವರು ಮತ್ತು ಕಡಿಮೆ ಆದಾಯದ ವರ್ಗದವರಿಗೆ ಹೊಸ ಮನೆಯನ್ನು ಖರೀದಿಸಲು/ಮನೆಕಟ್ಟಲು ಈಗಿರುವ ಮನೆಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಳ್ಳಲು ಆಸಕ್ತಿಯುಳ್ಳ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿದ ಕುಟುಂಬದವರಿಗೆ ಒಂದು ಲಕ್ಷ ಆದಾಯ ನಿಗದಿಪಡಿಸಲಾಗಿದೆ. ಕಡಿಮೆ ಆದಾಯದ ಗುಂಪಿಗೆ ಸೇರಿದ ಕುಟುಂಬದವರಿಗೆ ವಾರ್ಷಿಕ ಆದಾಯ ೧ ರಿಂದ ೨ ಲಕ್ಷ ರೂ. ವರೆಗೆ ನಿಗದಿಪಡಿಸಲಾಗಿದೆ. ಆರ್ಥಿಕ ದುರ್ಬಲ ವರ್ಗದವರಿಗೆ ಕನಿಷ್ಟ ೨೧ ಚದರ ಮೀಟರ್‌ನಲ್ಲಿ ಮನೆ ಕಟ್ಟಲು ಗರಿಷ್ಠ ರೂ.೫.೦೦ ಲಕ್ಷ ಸಾಲವನ್ನು ನೀಡಲಾಗುವುದು. ಕಡಿಮೆ ಆದಾಯದ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಗರಿಷ್ಠ ರೂ.೮.೦೦ ಲಕ್ಷದವರೆಗೆ ಸಾಲ ದೊರೆಯುತ್ತದೆ.  ಸಾಲದ ಬಡ್ಡಿ ದರದಲ್ಲಿ ಶೇ.೫ ರಷ್ಟು ಸಹಾಯಧನ ಒದಗಿಸಲಾಗುತ್ತದೆ. ೫.೦೦ ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆದಲ್ಲಿ ಸಹಾಯಧನ ೫.೦೦ ಲಕ್ಷಕ್ಕೆ ಮಾತ್ರ ಸಾಲ ಸಿಗಲಿದೆ. ಕೊಪ್ಪಳ ನಗರಸಭೆಗೆ ೪೬ ಗುರಿ ನಿಗದಿಪಡಿಸಲಾಗಿದ್ದು, ಅರ್ಜಿಗಳನ್ನು ನಗರಸಭೆಯಲ್ಲಿ ಪಡೆದು ಸಂಬಂಧಪಟ್ಟ ದಾಖಲೆಗಳೊಂದಿಗೆ ನ.೩೦ ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕೊಪ್ಪಳ ದೂರವಾಣಿ ಸಂಖ್ಯೆ : ೦೮೫೩೯-೨೩೦೧೯೨ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Leave a Reply