ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಅರ್ಜಿ ಆಹ್ವಾನ.

ಕೊಪ್ಪಳ, ಡಿ.೦೭ (ಕ ವಾ) ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನೂತನ ಜವಳಿ ನೀತಿ ಯೋಜನೆಯಡಿ ೫ ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಡಿಸೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿ ಅವಧಿಯಲ್ಲಿ ಉದ್ಯಮಶೀಲತೆ, ಜವಳಿ ಆಧಾರಿತ ಉದ್ಯಮಗಳನ್ನು ಆಯ್ಕೆ ಮಾಡುವ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ, ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಣಕಾಸು ಸಂಸ್ಥೆಗಳಿಂದ ಉದ್ಯಮ ಸ್ಥಾಪಿಸಲು ನೀಡುವ ಸಾಲ ಸೌಲಭ್ಯಗಳ ಬಗ್ಗೆ, ಯೋಜನಾ ಹಣಕಾಸು ಹಾಗೂ ಮಾರುಕಟ್ಟೆ ನಿರ್ವಹಣೆ ಬಗ್ಗೆ, ರಾಜ್ಯದಲ್ಲಿ ಜವಳಿ ಉದ್ದಿಮೆಯಲ್ಲಿ ಇರುವ ಅವಕಾಶಗಳ ಬಗ್ಗೆ  ಹಾಗೂ ವಿವಿಧ ಜವಳಿ ಯೋಜನೆಗಳ ಬಗ್ಗೆ ನುರಿತ ತರಬೇತುದಾರರಿಂದ ಸವಿಸ್ತಾರವಾದ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು. ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ನಿರುದ್ಯೋಗಿಯಾಗಿದ್ದು, ಕನಿಷ್ಠ ೧೮ ರಿಂದ ೩೫ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಜವಳಿ ಉದ್ದಿಮೆಯಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿರಬೇಕು. ನಿರುದ್ಯೋಗಿ ಯುವತಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು.
     ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಉಪನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ.ಐ.ಸಿ ಬಿಲ್ಡಿಂಗ್, ಅಶೋಕ ಸರ್ಕ್‌ಲ್ ಹತ್ತಿರ, ಕೊಪ್ಪಳ ಇವರಿಂದ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಡಿ.೧೪ ರೊಳಗಾಗಿ ಮರಳಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. 
ಡಿ.೧೦ ರಂದು ಮಾನವ ಹಕ್ಕುಗಳ ದಿನಾಚರಣೆ.
ಕೊಪ್ಪಳ, ಡಿ.೦೭ (ಕ  ವಾ) ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಡಿ.೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
     ಮಾನವ ಹಕ್ಕುಗಳ ಬಗ್ಗೆ ಅಧಿಕಾರಿಗಳು, ನೌಕರರು, ಸಾರ್ವಜನಿಕರು ಹಾಗೂ ಸ್ಥಳೀಯ ಸರ್ಕಾರೇತರ ಸಂಘ-ಸಂಸ್ಥೆಗಳಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ||ಪ್ರವೀಣಕುಮಾರ್ ಜಿ.ಎಲ್ ಅವರು ತಿಳಿಸಿದ್ದಾರೆ.
ದೌರ್ಜನ್ಯಕ್ಕೊಳಗಾದ ಮಹಿಳೆಯರ ರಕ್ಷಣೆಗಾಗಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ.
ಕೊಪ್ಪಳ, ಡಿ.೦೭ (ಕ ವಾ) ದೌರ್ಜನ್ಯಕ್ಕೊಳಗಾದ ಮಹಿಳೆಯರ ರಕ್ಷಣೆಗಾಗಿ ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ(ನಿರ್ಭಯ ಕೇಂದ್ರ)ವು ಸಾರ್ವಜನಿಕರ ಸೇವೆಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ಅವರು ತಿಳಿಸಿದ್ದಾರೆ.
       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆರಂಭಿಸಲಾಗಿರುವ ಈ ಮಹಿಳಾ ವಿಶೇಷ ಚಿಕಿತ್ಸಾ ಘಟಕ(ನಿರ್ಭಯ ಕೇಂದ್ರ) ದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದಂತಹ ಮಹಿಳೆಯರಿಗೆ ಒಂದೇ ಸೂರಿನಡಿ ಉಚಿತ ವೈದ್ಯಕೀಯ, ಪೊಲೀಸ್, ಕಾನೂನು ನೆರವು, ಸಮಾಲೋಚನೆ, ಪುನರ್ವಸತಿ ಇತ್ಯಾದಿ ಸೇವೆಗಳನ್ನು ಒದಗಿಸಲಾಗುತ್ತದೆ. ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರ ಸೇವೆಗಾಗಿಯೇ ೨೪*೭ ಘಂಟೆಗಳ ಕಾಲ ಕಾರ್ಯನಿರತವಾಗಿರುವ ಈ ನಿರ್ಭಯ ಕೇಂದ್ರದ ಉಚಿತ ಮಹಿಳಾ ಸಹಾಯವಾಣಿ ಸಂಖ್ಯೆ: ೧೮೧ ಅಥವಾ ದೂರವಾಣಿ ಸಂಖ್ಯೆ ೦೮೫೩೯-೨೨೫೯೪೧ ಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವು ನೀಡುವಲ್ಲಿ ಸಹಕರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ಅವರು ಮನವಿ ಮಾಡಿದ್ದಾರೆ.
ನವೋದಯ ವಿದ್ಯಾಲಯ ನೂತನ ಪುರಸಭೆ, ಪ.ಪಂಚಾಯತಿ ವಿದ್ಯಾರ್ಥಿಗಳ ಪರಿಗಣನೆ.
ಕೊಪ್ಪಳ, ಡಿ.೦೭ (ಕ ವಾ)  ಕೊಪ್ಪಳ ಜಿಲ್ಲೆಯಲ್ಲಿ ನೂತನವಾಗಿ ಪಟ್ಟಣ ಪಂಚಾಯತಿ ಹಾಗೂ ಪುರಸಭೆಗಳನ್ನಾಗಿ ಪರಿವರ್ತಿಸಲಾಗಿರುವ ಪ್ರದೇಶಗಳ ವಿದ್ಯಾರ್ಥಿಗಳನ್ನು ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗಳ ನಿಯಮಾನುಸಾರ ನಗರ ಪ್ರದೇಶದ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುವುದು ಎಂದು ಕುಕನೂರಿನ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
     ೨೦೧೫ರ ಏಪ್ರಿಲ್೩೦ ರ ಸರ್ಕಾರದ ಅಧಿಸೂಚನೆಯ ಪ್ರಕಾರ ಕೊಪ್ಪಳ ಜಿಲ್ಲೆಯ ಭಾಗ್ಯನಗರ, ತಾವರಗೇರಾ, ಕನಕಗಿರಿ ಮತ್ತು ಕುಕನೂರು ಗ್ರಾಮಗಳನ್ನು ಪಟ್ಟಣ ಪಂಚಾಯತಿ ಹಾಗೂ ಕಾರಟಗಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಿವರ್ತಿತ ಪ್ರದೇಶಗಳ ವಿದ್ಯಾರ್ಥಿಗಳನ್ನು ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗಳ ನಿಯಮಾನುಸಾರ ನಗರ ಪ್ರದೇಶದ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುವುದು. ಈಗಾಗಲೇ ಗ್ರಾಮೀಣ ಪ್ರದೇಶವೆಂದು ಅರ್ಜಿಗಳಲ್ಲಿ ನಮೂದಿಸಲಾಗಿದ್ದರೂ ಕೂಡಾ ಕರ್ನಾಟಕ ರಾಜ್ಯ ಪತ್ರದ ಆದೇಶದ ಅನುಸಾರವಾಗಿ, ಈ ಎಲ್ಲಾ ಅಭ್ಯರ್ಥಿಗಳನ್ನು ನಗರ ಪ್ರದೇಶದ ಅಭ್ಯರ್ಥಿಗಳೆಂದು ಪರಿಗಣಿಸಿ, ಅದರ ಅನುಸಾರವಾಗಿ ಪ್ರವೇಶ ಪತ್ರಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಬಿ.ಎನ್.ಟಿ. ರೆಡ್ಡಿ ಅವರು ತಿಳಿಸಿದ್ದಾರೆ.
ಕೌಶಲ್ಯ ತರಬೇತಿ ಕಾರ್ಯಕ್ರಮ ಅರ್ಜಿ ಆಹ್ವಾನ.
ಕೊಪ್ಪಳ, ಡಿ.೦೭ (ಕ ವಾ) ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ (ರಿ) ವತಿಯಿಂದ ಡಿಸೆಂಬರ್ ತಿಂಗಳಿನಲ್ಲಿ ಪ್ರಥಮ ಹಂತದ ಕಛೇರಿ ಸಿಬ್ಬಂದಿಗಳ ಕೆಲಸ ನಿರ್ವಹಣಾ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
     ಹೊಸದಾಗಿ ಕೆಲಸಕ್ಕೆ ಸೇರುವ ಯುವ ಜನತೆ ಕಛೇರಿ ಕೆಲಸಗಳ ಅನುಭವವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಎಷ್ಟೋ ಬಾರಿ ಹಲವರು ಕೆಲಸ ನಿರ್ವಹಣೆ ಗೊತ್ತಿಲ್ಲದೇ ಒಳ್ಳೆಯ ಕೆಲಸವನ್ನೂ ಬಿಟ್ಟಿದ್ದಾರೆ ಇದನ್ನು ತಪ್ಪಿಸಲು ಶಿಬಿರದಲ್ಲಿ ಉತ್ತಮ ಮಾತನಾಡುವ ಕಲೆ, ಪತ್ರ ವ್ಯವಹಾರ, ಕಡತಗಳ ನಿರ್ವಹಣೆ, ಜವಾಬ್ದಾರಿ ನಿರ್ವಹಣೆ, ವಿವಿಧ ಸಂಘ ಸಂಸ್ಥೆ, ಇಲಾಖೆಗಳ ಸಂಪರ್ಕ, ಹಣಕಾಸು ನಿರ್ವಹಣೆ, ದೂರವಾಣಿಯಲ್ಲಿ ಸಂದರ್ಶನ ಮಾಡುವುದು, ಕಛೇರಿಯ ಎಲ್ಲ ಸ್ಥರದ ಸಿಬ್ಬಂದಿಗಳ ಜೊತೆ ಆಂತರಿಕ ಸಂಬಂಧಗಳ ನಿರ್ವಹಣೆ, ಕಂಪ್ಯೂಟರ್‌ನ ಸಮರ್ಪಕ ಬಳಕೆ, ಇಂಟರ್‌ನೆಟ್ ಉಪಯೋಗ, ಸ್ಪೋಕನ್ ಇಂಗ್ಲೀಷ್, ಸಾರ್ವಜನಿಕವಾಗಿ ವ್ಯವಹರಿಸುವ ಕಲೆ ಮತ್ತು ಬ್ಯಾಂಕಿಂಗ್ ಹೀಗೆ ಹಲವಾರು ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು. ತರಬೇತಿ ಕಾರ್ಯಕ್ರಮವು ಡಿ.೧೪ ರಿಂದ ೨೦೧೬ ರ ಜನೇವರಿ ೦೩ ರವರೆಗೆ ೨೧ ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ತರಬೇತಿಯು ಹೊಸದಾಗಿ ಉದ್ಯಮ ಆರಂಭಿಸಿರುವ ಉದ್ಯಮಿಗಳಿಗೂ ಪ್ರಯೋಜನವಾಗಲಿದ್ದು, ಸಂಸ್ಥೆಯ ನುರಿತ ಉಪನ್ಯಾಸಕರು, ವಿವಿಧ ಕಂಪನಿಗಳ ನಿರ್ವಹಣಾ ವ್ಯವಸ್ಥಾಪಕರು ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
     ಆಸಕ್ತ ಪಿ.ಯು.ಸಿ ಹಾಗೂ ಪದವೀಧರ ೧೮ ರಿಂದ ೪೫ ವಯೋಮಾನದ ಯುವಜನತೆ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟ್ ಸಂಸ್ಥೆ, ದಾಂಡೇಲಿ ರಸ್ತೆ, ಉದ್ಯೋಗ ವಿದ್ಯಾನಗರ, ಹಳಿಯಾಳ-೫೮೧೩೨೯, ಉತ್ತರ ಕನ್ನಡ ಜಿಲ್ಲೆ, ದೂರವಾಣಿ ಸಂಖ್ಯೆ, ೯೪೮೨೧೮೮೭೮೦ ಅಥವಾ ೯೪೮೩೪೮೫೪೮೯ ಇವರನ್ನು ಸಂಪರ್ಕಿಸಬಹುದಾಗಿದೆ. ತರಬೇತಿಗೆ ಅಭ್ಯರ್ಥಿಗಳು ಡಿ.೦೯ ರಂದು ಸ್ವತಃ ಸಂಸ್ಥೆಗೆ ಬಂದು ತಮ್ಮ ನೊಂದಾವಣಿಯನ್ನು ಖಾತ್ರಿಪಡಿಸಬೇಕು ಎಂದು ತಿಳಿಸಿದೆ.
Please follow and like us:
error