fbpx

ಜಿಲ್ಲೆಯ ೧. ೯೯ ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ಆರ್.ಆರ್. ಜನ್ನು

ಜಿಲ್ಲೆಯಲ್ಲಿ ಜ. ೧೮ ರಿಂದ ೨೧ ರವರೆಗೆ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಮೊದಲ ಹಂತದ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲೆಯ ೧೯೯೨೮೪ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ.  ವಿಶ್ವ ಆರೋಗ್ಯ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಣೆ ಮಾಡಿದ್ದರೂ, ಈ ರೋಗದ ಬಗ್ಗೆ ನಾವು ಮೈಮರೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ  ಆರ್.ಆರ್. ಜನ್ನು ಅವರು ಹೇಳಿದರು.

  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಗುರುವಾರ ಏರ್ಪಡಿಸಲಾಗಿದ್ದ  ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 
  ಜಿಲ್ಲೆಯಲ್ಲಿ  ಜ. ೧೮ ರಿಂದ ೨೧ ರವರೆಗೆ ೦೪ ದಿನಗಳ ಕಾಲ ೦೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜಿಲ್ಲೆಯ ೧೯೯೨೮೪  ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.  ಆ ಪೈಕಿ ೧೬೮೦೩೨ ಮಕ್ಕಳು ಗ್ರಾಮಾಂತರ ಪ್ರದೇಶದವರಾಗಿದ್ದು, ೩೧೨೫೨ ಮಕ್ಕಳು ನಗರ ಪ್ರದೇಶದವರಾಗಿದ್ದಾರೆ.  ಮಕ್ಕಳಿಗೆ ಪೋಲಿಯೋ ಹನಿ ನೀಡುವ ಸಲುವಾಗಿ ಒಟ್ಟು ೨೮೮೧೫೧   ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.  ಈ ಪೈಕಿ ಗ್ರಾಮೀಣ ಪ್ರದೇಶದ ೨೩೯೯೪೩ ಮನೆಗಳು ಹಾಗೂ ನಗರ ಮತ್ತು ಪಟ್ಟಣ ಪ್ರದೇಶದ ೪೮೨೦೮ ಮನೆಗಳ ಭೇಟಿಗೆ ಗುರಿ ಹೊಂದಲಾಗಿದೆ.  ಜ. ೧೮ ರಂದು  ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಒಟ್ಟು ೧೭೬೮ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.  ಜ. ೧೯ ರಿಂದ ೨೧ ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಉಳಿಕೆ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು.  ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ವಿಶೇಷ ಬೂತ್‌ಗಳನ್ನು ಸ್ಥಾಪಿಸಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು.  ಅಲ್ಲದೆ ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ, ಇಟ್ಟಿಗೆ ಭಟ್ಟಿ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕರ ಮಕ್ಕಳಿಗೂ ಸಹ ಪೋಲಿಯೋ ಲಸಿಕೆ ನೀಡಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜ. ೧೮ ಭಾನುವಾರ ಇದ್ದರೂ ಕೂಡ ಅಂದು ಎಂದಿನಂತೆ ಶಾಲೆಗಳು ಕಾರ್ಯನಿರ್ವಹಿಸಬೇಕು.  ಎಲ್ಲ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಕಡ್ಡಾಯವಾಗಿ ಹಾಜರಿದ್ದು, ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ.  ಪಾಲಕರು ೦೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು.  ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಲಯನ್ಸ್, ರೋಟರಿ, ಇನ್ನರ್ ವ್ಹೀಲ್ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಕೆಲವೊಂದು ಲಸಿಕಾ ಕೇಂದ್ರಗಳು ಶಾಲೆಗಳಲ್ಲಿ ನಿಗದಿಪಡಿಸಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯಲ್ಲಿ ಲಸಿಕಾ ಕೇಂದ್ರಕ್ಕಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಗ್ರಾಮಗಳಲ್ಲಿ ಡಂಗುರ ಸಾರುವುದು, ಮಕ್ಕಳಿಂದ ಪ್ರಬಾತ ಫೇರಿ, ಜಾಥಾ ಏರ್ಪಡಿಸುವುದು ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಹೆಚ್ಚಿನ ಪ್ರಚಾರ ಒದಗಿಸಬೇಕು.  ಜೆಸ್ಕಾಂ ನವರು ಪೋಲಿಯೋ ಲಸಿಕೆಯ ದಾಸ್ತಾನು ಮತ್ತು ವಿತರಣೆಗೆ ಅನುಕೂಲವಾಗುವಂತೆ ಜ. ೧೬ ರಿಂದ ೨೨ ರವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು.  ಒಟ್ಟಾರೆಯಾಗಿ ಜಿಲ್ಲೆಯ ಯಾವುದೇ ಪ್ರದೇಶದಲ್ಲಿನ ೫ ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.
   ಬಳ್ಳಾರಿ ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಆರ್.ಎಸ್. ಶ್ರೀಧರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕಳೆದೆರಡು ಜಗತ್ತಿನ ೦೭ ರಾಷ್ಟ್ರಗಳಲ್ಲಿ ಒಟ್ಟು ೩೪೨ ಪೋಲಿಯೋ ಪ್ರಕರಣಗಳು ವರದಿಯಾಗಿವೆ.  ಈ ಪೈಕಿ ಪಾಕಿಸ್ತಾನದಲ್ಲಿ ಶೇ. ೮೫ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.  ಭಾರತದಲ್ಲಿ ೨೦೧೧ ರಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಸಮಾಧಾನಕರ ಸಂಗತಿಯೆಂದರೆ ೨೦೧೨ ರಿಂದ ಈವರೆಗೆ ದೇಶದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ೨೦೧೪ ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿದೆ. ಆದಾಗ್ಯೂ ದೇಶದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.  ಪಾಕಿಸ್ತಾನ, ನೈಜೀರಿಯಾ, ಆಫ್‌ಘಾನಿಸ್ತಾನ ದೇಶಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿವೆ.  ಈ ದೇಶಗಳು ನೆರೆಯ ರಾಷ್ಟ್ರಗಳಾಗಿರುವುದರಿಂದ,  ವೈರಸ್‌ಗಳು ನಮ್ಮ ದೇಶಕ್ಕೂ ಹರಡುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದರು.  ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ: ರಮೇಶ್ ಮೂಲಿಮನಿ ಅವರು ಪೋಲಿಯೋ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.  
  ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜಾ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಲೋಕೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಟ್ಟಿಮನಿ, ಡಿಡಿಪಿಐ ಶ್ಯಾಮಸುಂದರ್,  ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಲ್ಕು ತಾಲೂಕುಗಳ ವೈದ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಹಸಿಲ್ದಾರರು, ರೋಟರಿ, ಇನ್ನರ್ ವ್ಹೀಲ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. 
Please follow and like us:
error

Leave a Reply

error: Content is protected !!