ಏ. ೦೭ ರಿಂದ ಮಿಷನ್ ಇಂದ್ರಧನುಷ್ : ೨೪೦ ತಂಡಗಳ ರಚನೆ

ಕೊಪ್ಪಳ ಏ.  : ದೇಶದ ಮಕ್ಕಳನ್ನು ಕಾಡುವ ೭ ಪ್ರಾಣಘಾತುಕ  ರೋಗಗಳ ನಿರ್ಮೂಲನೆಗೆ ೦೨ ವರ್ಷದೊಳಗಿನ ಮಕ್ಕಳಿಗೆ ಏ. ೭ ರಿಂದ ಮಿಷನ್ ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಒಟ್ಟು ೨೪೦ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಹೇಳಿದ್ದಾರೆ.
  ಭಾರತ ದೇಶವನ್ನು ಈಗಾಗಲೆ ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ನಡುವೆಯೂ, ಹುಟ್ಟಿನಿಂದ ಮೊದಲ ವರ್ಷದಲ್ಲಿ ಪಡೆಯಬೇಕಾದ ಸಂಪೂರ್ಣ ಲಸಿಕೆಗಳನ್ನು ಶೇ. ೬೫ ರಷ್ಟು ಮಕ್ಕಳು ಮಾತ್ರ ಪಡೆಯುತ್ತಿದ್ದಾರೆ.  ಲಸಿಕೆಗಳನ್ನು ಪಡೆಯದ ಹಾಗೂ ಪೂರ್ಣಗೊಳಿಸದೇ ಬಿಟ್ಟುಹೋದ ಮಕ್ಕಳಲ್ಲಿ ಶೇ. ೫೦ ರಷ್ಟು ಮಕ್ಕಳನ್ನು ಹೊಂದಿರುವ ದೇಶದ ೨೦೧ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯೂ ಒಂದು.  ಜಿಲ್ಲೆಯಲ್ಲಿ ಶೇ. ೬೫ ರಿಂದ ೭೦ ರಷ್ಟು ಮಕ್ಕಳು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ.  ಲಸಿಕೆ ವಂಚಿತರಾದ ೦-೨ ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು, ಅವರಿಗೆ ಸಂಪೂರ್ಣ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇಂದ್ರಧನುಷ್ ಅಭಿಯಾನವನ್ನು ಏ. ೦೭ ರಿಂದ ಆರಂಭಿಸಲಿದೆ. ಮಕ್ಕಳ ಪ್ರಾಣಕ್ಕೆ ಸಂಚಕಾರ ತರುವ ಗಂಟಲು ಮಾರಿ, ಪೋಲಿಯೋ, ಮೆದುಳು ಜ್ವರ, ನಾಯಿಕೆಮ್ಮು, ದಡಾರ ಮತ್ತು ಟೆಟ್ಯಾನಸ್ ಮತ್ತು ಹೆಪಟೈಟಸ್ ರೋಗಗಳನ್ನು ತಡೆಗಟ್ಟಲು ಮಿಷನ್ ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮವನ್ನು ಏ. ೦೭ ರಿಂದ ಒಂದು ವಾರ ಕಾಲ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಈ ವಿಶೇಷ ಲಸಿಕಾ ಕಾರ್ಯಕ್ರಮದಡಿ ೦೨ ವರ್ಷದೊಳಗಿನ ಮಕ್ಕಳಿಗೆ ಮಾರಕ ರೋಗಗಳನ್ನು ತಡೆಗಟ್ಟಬಹುದಾದ ಲಸಿಕೆಯನ್ನು ಹಾಕಲಾಗುವುದು.  ಜಿಲ್ಲೆಯಲ್ಲಿ ಸಿದ್ಧಪಡಿಸಿದ ಕ್ರಿಯಾ ಯೋಜನೆಯಂತೆ ೮೩೫ ಗರ್ಭಿಣಿ ಮಹಿಳೆಯರು ಹಾಗೂ ೦-೨ ವರ್ಷದ ೪೪೪೩ ಮಕ್ಕಳಿಗೆ ಅಭಿಯಾನದ ಲಾಭ ಕಲ್ಪಿಸಲು ಗುರಿ ಹೊಂದಲಾಗಿದೆ.  ಇದಕ್ಕಾಗಿ ಒಟ್ಟು ೨೪೦ ತಂಡಗಳನ್ನು ರಚಿಸಲಾಗಿದ್ದು, ಇದರಲ್ಲಿ ೧೯೪ ಸ್ಥಿರ ಮತ್ತು ೪೪- ಸಂಚಾರಿ ತಂಡಗಳನ್ನು ರಚಿಸಲಾಗಿದೆ.  ಈ ಪೈಕಿ ಕೊಪ್ಪಳ-೧೧೪, ಗಂಗಾವತಿ-೫೮, ಕುಷ್ಟಗಿ-೩೩ ಮತ್ತು ಯಲಬುರ್ಗಾ-೩೫ ತಂಡಗಳನ್ನು ಹೊಂದಿವೆ.  ಇದೇ ಏಪ್ರಿಲ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಪ್ರತಿ ತಿಂಗಳು ೦೭ ನೇ ತಾರೀಕಿನಿಂದ ಏಳು ದಿನಗಳ ಕಾಲ ಮಿಷನ್ ಇಂದ್ರಧನುಷ್ ಕಾರ್ಯಕ್ರಮದಡಿ ಫಲಾನುಭವಿಗಳು ಲಸಿಕೆ ಪಡೆಯುವಂತೆ ಕಾರ್ಯಕ್ರಮ ರೂಪಿಸಲಾಗಿದ್ದು, ಎಲ್ಲ ಅರ್ಹ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುವಂತಾಗಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Please follow and like us:
error

Related posts

Leave a Comment