ಕೊಪ್ಪಳ ಶೀಘ್ರವೇ ಉತ್ತಮ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳಲಿದೆ- ಸಂಗಣ್ಣ ಕರಡಿ

ಕೊಪ್ಪಳ ಜ. ೦೮   ಕೊಪ್ಪಳ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಸ್ನಾತಕೋತ್ತರ ಶಿಕ್ಷಣ ಕೇಂದ್ರಗಳೂ ಸೇರಿದಂತೆ ಉನ್ನತ ವ್ಯಾಸಂಗಕ್ಕೆ ಶಿಕ್ಷಣ ಕೇಂದ್ರಗಳು ಪ್ರಾರಂಭಗೊಳ್ಳಲಿದ್ದು, ಶೀಘ್ರದಲ್ಲೇ ಕೊಪ್ಪಳ ಜಿಲ್ಲೆ ಉತ್ತಮ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
  ತಾಲೂಕಿನ ಹಿರೇಸಿಂದೋಗಿ ಗ್ರಾಮದ ಬಳಿ ಸಮಾಜ ಕಲ್ಯಾಣ ಇಲಾಖೆಯಿಂದ ೫. ೧೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜು ಕಟ್ಟಡದ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆ ಎಂಬ ಕುಖ್ಯಾತಿಯನ್ನು ತೊಡೆದುಹಾಕುವ ನಿಟ್ಟಿನಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಉನ್ನತ ಶಿಕ್ಷಣದ ಕೇಂದ್ರಗಳು ಶೀಘ್ರ ಪ್ರಾರಂಭಗೊಳ್ಳಲಿವೆ.  ಕೊಪ್ಪಳಕ್ಕೆ ಮೆಡಿಕಲ್ ಕಾಲೇಜು, ಗಂಗಾವತಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಸ್ನಾತಕೋತ್ತರ ಶಿಕ್ಷಣಕ್ಕೆ ಕಾಲೇಜುಗಳನ್ನು ಸರ್ಕಾರ ಮಂಜೂರು ಮಾಡಿದೆ.  ಈ ಎಲ್ಲ ಯೋಜನೆಗಳು ಅನುಷ್ಠಾನಗೊಂಡಲ್ಲಿ, ಜಿಲ್ಲೆ ಉತ್ತಮ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತನೆಗೊಂಡು, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲಿದೆ.  ಶಿಕ್ಷಣದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆನ್ನುವ ಈ ಭಾಗದ ಜನರ ಕನಸು ಸಾಕಾರಗೊಳ್ಳಲಿದೆ ಎಂದರು.
  ಸಿಂಗಟಾಲೂರು ಏತನೀರಾವರಿ ಯೋಜನೆಯಡಿ ಕೊಪ್ಪಳ ಭಾಗದ ೪೧೦೦೦ ಎಕರೆ ಜಮೀನು ನೀರಾವರಿಯಾಗುವ ಯೋಜನೆಗೆ ಈಗಾಗಲೆ ಚಾಲನೆ ನೀಡಲಾಗಿದ್ದು, ೧೭ ಕಿ.ಮೀ. ಮುಖ್ಯ ಕಾಲುವೆ ಕಾಮಗಾರಿ ನಿರ್ವಹಣೆಯಾಗುತ್ತಿದೆ.  ಬೆಟಗೇರಿ, ಬಹದ್ದೂರಬಂಡಿ ಏತನೀರಾವರಿ ಯೋಜನೆಗಾಗಿ ಸರ್ಕಾರ ನೀರು ಹಂಚಿಕೆ ಮಾಡುವ ಬಗ್ಗೆ ಕ್ರಮ ಕೈಗೊಂಡಿದೆ.  ಕೊಪ್ಪಳಕ್ಕೆ ಬಸವ ವಸತಿ ಯೋಜನೆಯಡಿ ೫೦೦೦ ಮನೆಗಳನ್ನು ಮಂಜೂರು ಮಾಡಲಾಗಿದೆ.  ದಲಿತರ ಕಾಲೋನಿಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗಾಗಿ ೨೨ ಗ್ರಾಮಗಳಿಗೆ ತಲಾ ೫೦ ಲಕ್ಷ ರೂ.ಗಳ ಅನುದಾನವನ್ನು ಸರ್ಕಾರ ಒದಗಿಸಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
  ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾದಲ್ಲಿ ಮಾತ್ರ ಆ ಪ್ರದೇಶ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ.  ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿದಲ್ಲಿ, ಅವರ ಭವಿಷ್ಯ ಗಟ್ಟಿಯಾಗಿ ರೂಪುಗೊಳ್ಳಲಿದೆ. ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಮೂಲಕ ಆ ಭಾಗದ ಜನಪ್ರತಿನಿಧಿಗಳು ಮತದಾರರ ಋಣವನ್ನು ತೀರಿಸುವುದು ಅವರ ಕರ್ತವ್ಯವಾಗಿದೆ.  ಈ ದಿಸೆಯಲ್ಲಿ ಶಾಸಕ ಸಂಗಣ್ಣ ಕರಡಿ ಅವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
  ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಭೂನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿ.ಪಂ. ಸದಸ್ಯರುಗಳಾದ ಭಾಗೀರತಿ ಶಂಕರಗೌಡ ಪಾಟೀಲ, ಅರವಿಂದಗೌಡ ಮಾಲಿಪಾಟೀಲ್, ಗ್ರಾ.ಪಂ. ಅಧ್ಯಕ್ಷ ಕೇಶವರಡ್ಡಿ ಮಾದಿನೂರ, ತಾ.ಪಂ. ಸದಸ್ಯೆ ಹುಲಿಗೆಮ್ಮ ಹೊನ್ನಪ್ಪ ಗದ್ದಿ, ತಾ.ಪಂ. ಉಪಾಧ್ಯಕ್ಷೆ ಸುಜಾತ ಮಾಲಿಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಹೆಚ್. ಅಂಗಡಿ ಸ್ವಾಗತಿಸಿದರು, ಶ್ವೇತಾ ಜೋಷಿ ಸಂಗಡಿಗರು ಪ್ರಾರ್ಥಿಸಿದರು, ಪ್ರಾಚಾರ್ಯ ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.
Please follow and like us:
error