ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ವ್ಯವಸ್ಥೆಗೆ ಜಿ.ಪಂ. ಅಧ್ಯಕ್ಷರ ಸೂಚನೆ

 ಜಿಲ್ಲೆಯಲ್ಲಿನ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾಗಿರುವ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ಮೇವು, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ಮುಂಗಾರು ಹಾಗೂ ಹಿಂಗಾರು ಮಳೆ ವಿಫಲಗೊಂಡು ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದೆ.  ಈ ಕಾರಣದಿಂದಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಮತ್ತು ಯಾವುದೇ ರೈತರು ತಮ್ಮ ಜಾನುವಾರುಗಳನ್ನು ಸಾಕಲು ತೊಂದರೆ ಆಗದಂತೆ ನೋಡಿಕೊಳ್ಳಲು ಜಿಲ್ಲೆಯಲ್ಲಿ ಈಗಾಗಲೆ ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು ನಾಲ್ಕು ಗೋಶಾಲೆಗಳನ್ನು ತೆರೆಯಲಾಗಿದೆ.  ಕೊಪ್ಪಳ ತಾಲೂಕಿನ ವದಗನಾಳ ಗೋಶಾಲೆಯಲ್ಲಿ ಸುಮಾರು ೩೦ ರಿಂದ ೪೦ ಜಾನುವಾರುಗಳಿವೆ.  ಅದೇ ರೀತಿ ಕುಷ್ಟಗಿ ತಾಲೂಕಿನ ಕನಕೇರಿಯಲ್ಲಿ ೭೦ ರಿಂದ ೮೦, ಗಂಗಾವತಿ ತಾಲೂಕು ಕನಕಗಿರಿಯಲ್ಲಿ ೧೨೦ ರಿಂದ ೧೩೦ ಜಾನುವಾರುಗಳಿಗೆ ಗೋಶಾಲೆಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಗೋಶಾಲೆಗಳಲ್ಲಿ ಸುಮಾರು ೪೮೦ ರಿಂದ ೫೦೦ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಗೋಶಾಲೆಗಳಲ್ಲಿನ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆಯಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಸೂಚನೆ ನೀಡಿದರು.
  ಇದಕ್ಕೆ ಪ್ರತಿಕ್ರಿಯಿಸಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ನಿಂಬರಗಿ ಅವರು ಜಿಲ್ಲೆಯಲ್ಲಿ ಮೇವು ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವು ಹಾಗೂ ನೀರಿನ ತೊಂದರೆ ಉಂಟಾಗದಂತೆ ಜಾಗರೂಕತೆ ವಹಿಸಲಾಗುವುದು ಎಂದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷ ಪೂರ್ಣಗೊಳ್ಳಲು ಕೇವಲ ಎರಡು ತಿಂಗಳು ಮಾತ್ರ (ಮಾರ್ಚ್) ಬಾಕಿ ಉಳಿದಿದ್ದು, ವಿವಿಧ ಇಲಾಖೆಗಳಿಗೆ ನಿಗದಿಪಡಿಸಲಾಗಿರುವ ಆರ್ಥಿಕ ಮತ್ತು ಭೌತಿಕ ಗುರಿ ಸಾಧನೆ ಮಾತ್ರ ತೃಪ್ತಿಕರವಾಗಿಲ್ಲ.  ಉಳಿದ ಎರಡು ತಿಂಗಳ ಒಳಗಾಗಿ ಎಲ್ಲಾ ಇಲಾಖೆಗಳು ತಮಗೆ ನಿಗದಿಪಡಿಸಲಾಗಿರುವ ಆರ್ಥಿಕ ಮತ್ತು ಭೌತಿಕ ಗುರಿ ಸಾಧನೆ ಮಾಡಬೇಕು.  ನಿಗದಿತ ಅವಧಿಯಲ್ಲಿ ಗುರಿ ಸಾಧಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
  ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅನ್ನದಾನಯ್ಯ ಅವರು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಮಕ್ಕಳು ತೊಂದರೆಗೀಡಾಗಿರುವುದನ್ನು ವಿವಿಧ ಮಾಧ್ಯಮಗಳಲ್ಲಿ ನೋಡಿದ್ದೇವೆ.  ಜಿಲ್ಲೆಯ ಮಕ್ಕಳಲ್ಲಿನ ಪೌಷ್ಠಿಕತೆ ಪರಿಸ್ಥಿತಿ ಪರಿಶೀಲನೆ ನಡೆಸುವುದು ಅತ್ಯಗತ್ಯವಾಗಿದ್ದು, ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ಗರ್ಭಿಣಿ ಸ್ತ್ರೀಯರಲ್ಲಿ ರಕ್ತ ಹೀನತೆ ಇವುಗಳ ಬಗ್ಗೆ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ. ಇದು ಗಂಭೀರ ವಿಚಾರವಾಗಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯಿಂದಿರಬೇಕಾಗುತ್ತದೆ.  ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ. ವೆಂಕಣ್ಣ ಅವರು ಸಭೆಗೆ ಗೈರು ಹಾಜರಾಗುವುದರಿಂದ ಪರಿಸ್ಥಿತಿಯ ಪರಾಮರ್ಶೆಗೆ ತೊಂದರೆ ಉಂಟಾಗಿದೆ ಎಂದರು.  ಸಭೆಗೆ ಗೈರು ಹಾಜರಾಗಿದ್ದಕ್ಕಾಗಿ  ಇವರಿಗೆ ಶೋಕಾಸ್ ನೋಟೀಸ್ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.  ವಿವಿಧ ಇಲಾಖೆಗಳ ಮೂಲಕ ಜನಸಾಮಾನ್ಯರ ಅಭ್ಯುದಯಕ್ಕಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳ ಸಾಧಕ, ಬಾಧಕಗಳು, ಯೋಜನೆಗಳ ಅನುಷ್ಠಾನದಿಂದ ಉಂಟಾಗುವ ಪ್ರಗತಿ ಮತ್ತಿತರ ವಿಷಯಗಳ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳು ಸಮಗ್ರ ವರದಿ ನೀಡಬೇಕು.  ಇದು ಸರ್ಕಾರದ ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಮಾರ್ಗದರ್ಶಿಯಾಗಲಿದೆ ಎಂದು ಉಪಕಾರ್ಯದರ್ಶಿ ಅನ್ನದಾನಯ್ಯ ಅಭಿಪ್ರಾಯಪಟ್ಟರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.  ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆ, ಸೇರಿದಂತೆ ಕೃಷಿ ಇಲಾಖೆ, ಮೀನುಗಾರಿಕೆ, ಸಮಾಜಕಲ್ಯಾಣ, ರೇಷ್ಮೆ, ಯುವಜನ ಸೇವಾ ಮತ್ತು ಕ್ರೀಡೆ, ಸಹಕಾರ ಮುಂತಾದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
Please follow and like us:
error