fbpx

ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ಅತ್ಯಗತ್ಯ

ಬಳ್ಳಾರಿ, ಸೆ. ೧೨: ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರಕಾರ ಮತ್ತು ಸಂಘ ಸಂಸ್ಥೆಗಳ ನಿರಂತರ ಪ್ರೋತ್ಸಾಹ ಅತ್ಯಗತ್ಯ ಎಂದು ನಗರದ ಹಿರಿಯ ವೈದ್ಯೆ ಡಾ. ನಾಗರತ್ನ ಸುಯಜ್ಞ ಜೋಷಿ ಅವರು ತಿಳಿಸಿದರು.
ಅವರು ನಗರದ ಬಿಡಿಎಎ ಸಭಾಂಗಣದ ನಾಡೋಜ ದರೋಜಿ ಈರಮ್ಮ ವೇದಿಕೆಯಲ್ಲಿ ಹಗರಿಬೊಮ್ಮನಹಳ್ಳಿಯ ಕಾವ್ಯ ವಾಹಿನಿ ಗಾಯನ ಸಂಸ್ಥೆ ಗುರುವಾರ (ಸೆ. ೧೨) ಸಂಜೆ ಏರ್ಪಡಿಸಿದ್ದ ದಶಮಾನೋತ್ಸವ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಾಯನ ಸಂಸ್ಥೆಯೊಂದು ದಶಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ನಾಡಿನ

ಕವಿಗಳ ಪದ್ಯಗಳ ಸ್ವರಸಂಯೋಜನೆ ಮಾಡಿ ಜನಪ್ರಿಯಗೊಳಿಸುತ್ತಿರುವ ಕಾವ್ಯ ವಾಹಿನಿ ಕಾರ್ಯ ಅಭಿನಂದಾನರ್ಹ. ಸಂಸ್ಥೆ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಮಾತನಾಡಿ, ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದ ಜಿಲ್ಲೆಯ ಸಾಹಿತಿಗಳು, ರಂಗ, ಜಾನಪದ, ಬಯಲಾಟ ಕಲಾವಿದರ ವ್ಯಕ್ತಿ ಜೀವನ ಪರಿಚಯಿಸುವ ಕೃತಿಗಳನ್ನು ಜಿಲ್ಲೆಯ ಪ್ರಕಾಶಕರು ಪ್ರಕಟಿಸಲು ಮುಂದಾಗಬೇಕು. ಈ ಮೂಲಕ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮಹನೀಯರ ಪರಿಚಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 
ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ, ಪತ್ರಕರ್ತ ಸಿ ಮಂಜುನಾಥ್ ಮಾತನಾಡಿ, ನಾಡಿನ ಸಾಂಸ್ಕೃತಿಕ ಲೋಕಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ.  ರಂಗಭೂಮಿ, ಜಾನಪದ, ಬಯಲಾಟ, ಚಿತ್ರಕಲಾ ಕ್ಷೇತ್ರಕ್ಕೆ ಗಣನೀಯ ಸೇವೆಸಲ್ಲಿಸಿದ ಜಿಲ್ಲೆಯ ಆರು ಜನ ಸಾಧಕರು  ಕನ್ನಡ ವಿವಿಯ ಪ್ರತಿಷ್ಠಿತ ’ನಾಡೋಜ’ ಪದವಿಗೆ ಪಾತ್ರರಾಗಿರುವುದೇ ಸಾಕ್ಷಿ ಎಂದು ಹೇಳಿದರು.
ನಗರದಲ್ಲಿ ಈಚೆಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಭಿಕರ ಕೊರತೆ ಕಾಡುತ್ತಿರುವುದು ವಿಷಾಧದ ಸಂಗತಿ. ಸಮಯ, ಹಣ ವ್ಯಯಿಸಿ ಆಯೋಜಿಸುವ ಕಾರ್ಯಕ್ರಮಗಳಿಗೆ ಸಭಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವ ಮೂಲಕ ಸಹೃದಯತೆ ಮೆರೆಯಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣೆ ಕಮಲ ಮರಿಸ್ವಾಮಿ ಅವರು, ಆಧುನಿಕ ಭರಾಟೆಯಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಬಾರದು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಸಂಘ ಸಂಸ್ಥೆಗಳು ಹೆಚ್ಚೆಚ್ಚು ಬೆಳೆಯಬೇಕು ಎಂದು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ಜೆ ಎನ್ ಬಸವರಾಜ ಸ್ವಾಮಿ, ಮನೋ ವೈದ್ಯ ಡಾ. ಟಿ ಆರ್ ಶ್ರೀನಿವಾಸ್, ಸಮಾಜ ಸೇವಕರಾದ ಕಲ್ಲುಕಂಬ ಪಂಪಾಪತಿ, ಹೊಸಪೇಟೆಯ ಸಣ್ಣ ಮಾರೆಪ್ಪ ಮತ್ತಿತರರು ಮಾತನಾಡಿದರು.
ಕೊಟ್ಟೂರು ಕೊಟ್ಟೂರೇಶ್ವರ ಕಾಲೇಜಿನ ಆರ್ ರಾಮನಗೌಡ, ನ್ಯಾಯವಾದಿ ಎ ಜಿ ಶಿವಕುಮಾರ ಮತ್ತಿತರರು ಮಾತನಾಡಿದರು.
ಕಾವ್ಯ ವಾಹಿನಿ ಗಾಯನ ಸಂಸ್ಥೆಯ ಅಧ್ಯಕ್ಷೆ ಟಿ. ಜ್ಯೋತಿರಾಜ್ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಮಾಜ ಸೇವಕರಾದ ಕಲ್ಲುಕಂಬ ಪಂಪಾಪತಿ, ಹೊಸಪೇಟೆಯ ಸಣ್ಣ ಮಾರೆಪ್ಪ, ಮನೋ ವೈದ್ಯ ಡಾ. ಟಿ ಆರ್ ಶ್ರೀನಿವಾಸ್ ಅವರಿಗೆ ಅವರಿಗೆ ಕ್ರಮವಾಗಿ ಕನಕ ಜ್ಯೋತಿ, ಕಾವ್ಯ ವಾಹಿನಿ ಮತ್ತು ಕಾಯಕಯೋಗಿ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ  ಕಾರ್ಯಕ್ರಮ: ಬಾಲ ಪ್ರತಿಭೆ ಬಿ ಆರ್ ಹನಿ ಅವರ ಭರತ ನಾಟ್ಯ, ಟಿ. ರಾಜಾ ರಾವ್, ನಾಗರಾಜ ಪತ್ತಾರ್, ಕರುಣಾ ನಿಧಿ, ಸಂಗೀತ ಬಾದಾಮಿ, ಗುಡ್ಡಿ, ಸಂತೋಷ ಕುಮಾರ್, ಕೆ ವಿಕ್ರಮ್ ಅವರ ತಂಡ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ನೆರೆದಿದ್ದ ಸಭಿಕರನ್ನು ಸಮ್ಮೋಹನ ಗೊಳಿಸಿತು.
ಬಾಲ ಪ್ರತಿಭೆ ಕು. ಅರ್ಪಿತ ಕಾಡ್ಲೂರು ಪ್ರಾರ್ಥಿಸಿದರು. ಉಪನ್ಯಾಸಕ ಮಂಜುನಾಥ್ ಸ್ವಾಮಿ  ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಗರಿಬೊಮ್ಮನಹಳ್ಳಿಯ ಅಧ್ಯಾಪಕ ಪರಮೇಶ್ವರಯ್ಯ ಸೊಪ್ಪಿಮಠ ನಿರೂಪಿಸಿದರು. ಸಂಸ್ಥೆಯ ವಾದಿರಾಜ್ ವಂದಿಸಿದರು.
Please follow and like us:
error

Leave a Reply

error: Content is protected !!