fbpx

ಶೌಚಾಲಯ ಕ್ರಾಂತಿ : ಮುಂಚೂಣಿಯಲ್ಲಿ ಕೊಪ್ಪಳ ಜಿಲ್ಲೆ- ಕೃಷ್ಣ ಉದಪುಡಿ

ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ವಯಕ್ತಿಕ ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ಇಡೀ ರಾಷ್ಟ್ರದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಗಳಿಸಿದ್ದು, ಕರ್ನಾಟಕ ದಲ್ಲಿ ಕೊಪ್ಪಳ ಜಿಲ್ಲೆ ೧ ಲಕ್ಷ ಶೌಚಾಲಯ ನಿರ್ಮಾಣದ ಗುರಿಯ ಸಮೀಪದಲ್ಲಿ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ.    ಇದೇ ಜ. ೩೦ ರಂದು ಜಿಲ್ಲೆಯಲ್ಲಿ ಒಂದು ಲಕ್ಷದ ಒಂದನೇ ಶೌಚಾಲಯವನ್ನು ಮುಖ್ಯಮಂತ್ರಿಗಳಿಂದಲೇ ಉದ್ಘಾಟನೆ ಮಾಡಿಸಬೇಕು ಎನ್ನುವ ಮಹತ್ವದ ಗುರಿ ಸಾಧನೆಗೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಮುಖವಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.

  ಶೌಚಾಲಯ ಕ್ರಾಂತಿಯಲ್ಲಿ ಕರ್ನಾಟಕ ನಂಬರ್ ಒನ್ ಎಂಬುದಾಗಿ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿದೆ.  ಕರ್ನಾಟಕವು ಪ್ರಸ್ತುತ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯ ನಿರ್ಮಿಸುವ ಗುರಿ ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆ ಕಳೆದೆರಡು ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಅಗ್ರ ಸ್ಥಾನದಲ್ಲಿದೆ.  ಈ ಕುರಿತಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರಾದ ಎಚ್.ಕೆ. ಪಾಟೀಲರು, ಕೊಪ್ಪಳ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಅಧಿಕಾರಿಗಳ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.  ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ, ಅಧಿಕಾರಿಗಳ ಒಕ್ಕೊರಲ ಮನವಿಗೆ ಸ್ಪಂದಿಸಿರುವ ಸಾರ್ವಜನಿಕರು ಯುದ್ಧೋಪಾದಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುತ್ತಿರುವುದು ಸಂತಸಕರ ಸಂಗತಿಯಾಗಿದೆ.  ಈ ಉತ್ಸಾಹ ಕೊಪ್ಪಳ ಜಿಲ್ಲೆಯನ್ನು ಉತ್ತುಂಗ ಸ್ಥಾನಕ್ಕೆ ನಿಲ್ಲಿಸಿದ್ದು, ಅಭಿವೃದ್ಧಿ ಪಥದತ್ತ ದಾಪುಗಾಲಿನಿಂದ ಮುನ್ನುಗ್ಗಲು ಸಹಕಾರಿ ಆಗಿದೆ.  ಜಿಲ್ಲೆಯ ಜನ ಜಾಗೃತರಾಗಿದ್ದು, ಅದರ ಸಂಕೇತವಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ಮಾಡಿದ ಅಗಾಧವಾದ ಸಾಧನೆಯನ್ನು ಇಡೀ ರಾಜ್ಯಕ್ಕೆ ಅಷ್ಟೇ ಅಲ್ಲದೆ ಇಡೀ ರಾಷ್ಟ್ರದ ಗಮನ ಇತ್ತ ಸೆಳೆಯಲು ಸಾಧ್ಯವಾಗಿದೆ.  
  ಜಿಲ್ಲೆಯ ಪ್ರಗತಿಗೆ ಕಳಸಪ್ರಾಯದಂತೆ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯುವತ್ತ ಮತ್ತೊಂದು ಹೆಜ್ಜೆಯಿಡುವುದು ಅಗತ್ಯವಾಗಿದ್ದು, ಇದೇ ಜ. ೩೦ ರ ಒಳಗಾಗಿ ಜಿಲ್ಲೆಯಲ್ಲಿ ಒಂದು ಲಕ್ಷದ ಒಂದನೇ ಶೌಚಾಲಯವನ್ನು ನಿರ್ಮಿಸಿ, ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಉತ್ಸುಕರಾಗಿದ್ದು, ಈ ಉತ್ಸುಕತೆಗೆ ಸಾರ್ವಜನಿಕರ ಸ್ಪಂದನೆ ಅಗತ್ಯವಾಗಿದೆ.  ಒಂದು ಲಕ್ಷದ ಒಂದನೇ ಶೌಚಾಲಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಮಹತ್ವಾಕಾಂಕ್ಷೆ ಸಾಕಾರಕ್ಕೆ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ, ಸಾಧನೆ ಮಾಡುವಲ್ಲಿ ಶ್ರಮಿಸಬೇಕಿದೆ.  ಕೆಲವು ತಾಂತ್ರಿಕ ದೋಷಗಳಿಂದ ಶೌಚಾಲಯ ನಿರ್ಮಿಸಿರುವ ಕೆಲವರಿಗೆ ಸಹಾಯಧನ ತಲುಪಿಲ್ಲ ಎನ್ನುವ ಅಂಶ ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸಿ, ಶೌಚಾಲಯ ನಿರ್ಮಿಸುವ ಎಲ್ಲ ಫಲಾನುಭವಿಗಳಿಗೆ ತ್ವರಿತವಾಗಿ ಅನುದಾನಪಾವತಿಸುವ ವ್ಯವಸ್ಥೆ ಮಾಡಲಾಗುವುದು.  ಸ್ವಚ್ಛ ಭಾರತ ಅಭಿಯಾನದಲ್ಲಿ ಎಲ್ಲ ಫಲಾನುಭವಿಗಳಿಗೆ ೧೨ ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ೧೫ ಸಾವಿರ ರೂ. ಅನುದಾನ ನಿಗದಿಪಡಿಸಲಾಗಿದ್ದು, ಈ ಅನುದಾನದಲ್ಲಿ ಉತ್ತಮ ಗುಣಮಟ್ಟದ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ಅನುದಾನದ ಯಾವುದೇ ತೊಂದರೆ ಇರುವುದಿಲ್ಲವಾದ್ದರಿಂದ, ಪ್ರತಿಯೊಬ್ಬರೂ ಆಸಕ್ತಿ ವಹಿಸಿ, ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳೊಂದಿಗೆ ಸಹಕರಿಸಬೇಕು.  ಜ. ೩೦ ರ ಒಳಗಾಗಿ ಒಂದು ಲಕ್ಷದ ಒಂದನೇ ಶೌಚಾಲಯ ನಿರ್ಮಿಸುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೆ ತಲುಪುವಂತೆ ಮಾಡುವಲ್ಲಿ ಎಲ್ಲರೂ ಒಂದಾಗಿ ಶ್ರಮಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.
Please follow and like us:
error

Leave a Reply

error: Content is protected !!