ಪೇಂಟರ್ ಕಾರ್ಮಿಕ ಸಂಘಟನೆ ಕ್ರೀಯಾಶೀಲವಾಗಿರಬೇಕು-ಗವಿಸಿದ್ದಪ್ಪ ಚಿನ್ನೂರು

ಕೊಪ್ಪಳ, ಆ. ೨೧- ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘಟನೆ ಯಾವಾಗಲು ಕ್ರಿಯಾಶೀಲವಾಗಿದ್ದರೆ, ಪೇಂಟರ್ ಕಾರ್ಮಿಕರ ಸಮಸ್ಯೆಗಳ

ನ್ನು ಬಗೆಹರಿಸಲು ಸಾಧ್ಯ. ಅಲ್ಲದೇ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ ಎಂದು ಕಿರಣ ಪೇಂಟ್ಸ್‌ನ ಮಾಲಿಕ ಹಾಗೂ ನಗರಸಭೆ ಸದಸ್ಯ ಗವಿಸಿದ್ದಪ್ಪ ಚಿನ್ನೂರ ಹೇಳಿದರು.

ಅವರು ನಗರದ ಜ.ಚ.ನಿ. ಭವನದಲ್ಲಿ ನಡೆದ ಜಿಲ್ಲಾ ಪೇಂಟರ್‍ಸ್ ಕಾರ್ಮಿಕರ ಸಂಘ (ಎ.ಐ.ಟಿ.ಯು.ಸಿ. ಸಂಯೋಜಿತ)ದ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮೊದಲಗಿಂತ ಈಗ ಪೇಂಟರ್ ಕಾರ್ಮಿಕರು ಕುಡಿತ ದಂತಹ ಚಟದಿಂದ ಬಹುತೇಕರು ದೂರಾಗಿದ್ದು, ಕೆಲವರು  ಮಾತ್ರ ಕುಡಿಯುವ ಚಟದಿಂದ ದೂರಾಗಿಲ್ಲ. ಪೇಂಟರ್ ಕಾರ್ಮಿಕರು ಒಂದು ದಿನಕ್ಕೆ ಒಂದು ನೂರು ರೂಪಾಯಿದಷ್ಟು ಕುಡಿತಕ್ಕೆ ಖರ್ಚು ಮಾಡಿದರೆ, ತಿಂಗಳಿಗೆ ಮೂರು ಸಾವಿರ, ವರ್ಷಕ್ಕೆ ೩೬ ಸಾವಿರ, ಅದೇ ೧೦ ವರ್ಷಕ್ಕೆ ೩ಲಕ್ಷ ೬೦ ಸಾವಿರ ರೂಪಾಯಿಗಳ ಖರ್ಚು ಮಾಡುತ್ತಾರೆ. ಇಂತಹ ಚಟಗಳನ್ನು ಬಿಟ್ಟು ತಮ್ಮ ಕುಟುಂಬಕ್ಕೆ ಅಭಿವೃದ್ಧಿಗೆ ಪ್ರಯತ್ನಿಸಬೇಕು, ಪೇಂಟರ್ ಮೇಸ್ತ್ರಿಗಳು ಕಟ್ಟಡಗಳಿಗೆ ಬಣ್ಣ ಹಚ್ಚುವ ಕೆಲಸ ಹಿಡಿದರೆ ಅದನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಪೇಂಟರ್‍ಸ್ ಕಾರ್ಮಿಕರ ಸಂಘ (ಎ.ಐ.ಟಿ.ಯು.ಸಿ. ಸಂಯೋಜಿತ)ವನ್ನು ರಿಬ್ಬಿನ್ ಕತ್ತರಿಸುವ ಮೂಲಕ ಉದ್ಘಾಟಿಸಿದ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಎ.ಐ.ಟಿ.ಯು.ಸಿ) ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ ಮಾತನಾಡಿ, ಸಂಘಟನೆ ಕೇವಲ ಬ್ಯಾನರ್, ಲೇಟರ್‌ಪ್ಯಾಡ್‌ಗಳಿಗೆ ಸೀಮಿತವಾಗದೇ ಪೇಂಟರ್ ಕಾರ್ಮಿಕರ ಬದುಕಿನ ಹಕ್ಕಿನ ಬಗ್ಗೆ ಚಿಂತನೆ ಮಾಡಿದರೆ ಪೇಂಟರ್ ಕಾರ್ಮಿಕರನ್ನು ನೆಚ್ಚಿಕೊಂಡಿರುವ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಪೇಂಟರ್ ಕಾರ್ಮಿಕರು ಸಂಘ ಕಟ್ಟಿಕೊಳ್ಳುವದಷ್ಟೇ ಅಲ್ಲ ತಮ್ಮ ಬದುಕಿಗಾಗಿ, ಸರ್ಕಾರದ ಸೌಲಭ್ಯಗಳಿಗಾಗಿ ನಿರಂತರ ಹೋರಾಟ ಮಾಡಬೇಕು, ಹೋರಾಟಕ್ಕೆ ದೊಡ್ಡ ಇತಿಹಾಸವಿದೆ. ಗದಗ ಜಿಲ್ಲೆಯಲ್ಲಿ ಪೋಸ್ಕೋ ಕಂಪನಿ ಸರ್ಕಾರದೊಂದಿಗೆ ಕೈ ಜೋಡಿಸಿ ಕಾರ್ಖಾನೆ ಸ್ಥಾಪನೆ ನೆಪದಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ರೈತರಿಂದ ಕಿತ್ತಿಕೊಳ್ಳಲು ಪ್ರಯತ್ನಿಸಿತ್ತು. ನಮ್ಮ ಭೂಮಿ ಒಂದು ಚುರು ಬಿಟ್ಟುಕೊಡುವುದಿಲ್ಲವೆಂದ ರೈತರನ್ನು ನಮ್ಮ ಸಂಘಟನೆಗಳು ಬೆಂಬಲಿಸಿ ಹೋರಾಟ ಮಾಡಿದರ ಪರಿಣಾಮ ಪೋಸ್ಕೋ ಕಂಪನಿ ಜಾಗ ಖಾಲಿ ಮಾಡಿತ್ತು. ಅದೇ ರೀತಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಜನಾರ್ಧನ ರೆಡ್ಡಿ ವಿರುದ್ಧ ಹಲುವಾರು ಸಂಘಟನೆಗಳು ಹೋರಾಟ ಮಾಡಿದ್ದರಿಂದ ಜೈಲು ಸೇರಿದ್ದು, ಆಳವಾದ ತನಿಖೆ ನಡೆದಿದೆ. ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಹೋರಾಟ ಮಾಡುತ್ತಿವೆ. ಮೊದಲು ಕೇವಲ ಒಂದು ನೂರು ಐವತ್ತು ರೂಪಾಯಿ ಗೌರವಧನ ನೀಡುತ್ತಿದ್ದರು. ಈಗ ಐದು ಸಾವಿರ ದಾಟಿದೆ. ಅದಕ್ಕೆ ಪ್ರತಿಯೊಬ್ಬರು ಹೋರಾಟ ಮಾಡುವದು ಅಗತ್ಯವಿದೆ ಎಂದು ಹೇಳಿದರು.
ಪೇಂಟರ ಕಾರ್ಮಿಕರಿಗೆ ಸರ್ಕಾರದ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡಿದ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ್ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪೇಂಟರ್ ಕಾರ್ಮಿಕರಿಗೆ ಕೊಡಿಸಲು ಸಂಘದ ಪದಾಧಿಕಾರಿಗಳು ಪ್ರಯತ್ನಿಸಬೇಕು, ಸಂಘವು ತನ್ನದೇ ನಿಯಮವನ್ನು ತಯಾರಿಸಿ ಎಲ್ಲರೂ ಪಾಲಿಸಿದರೆ ಸಂಘಟನೆ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೇಂಟರ್‍ಸ್ ಕಾರ್ಮಿಕರ ಸಂಘ (ಎ.ಐ.ಟಿ.ಯು.ಸಿ. ಸಂಯೋಜಿತ)ದ ಜಿಲ್ಲಾಧ್ಯಕ್ಷ ರಜಾಕ್ ಪೇಂಟರ್ ಮಾತನಾಡಿ, ಜಿಲ್ಲೆಯಲ್ಲಿ ಒಂದುವರೆ ದಶಕಕ್ಕೂ ಮುಂಚೆ ಹುಟ್ಟಿದ ನಮ್ಮ ಪೇಂಟರ್ ಕಾರ್ಮಿಕರ ಸಂಘವು ನಿರಂತರ ಪೇಂಟರ್ ಮೇಸ್ತ್ರಿಗಳು ಮತ್ತು ಸಹಾಯಕರ ಕುರಿತು ಚಿಂತಿಸುತ್ತ ಕೆಲಸ ಮಾಡುತ್ತ ಬಂದಿದೆ. ಆಗಾಗ ಪದಾಧಿಕಾರಿಗಳು ಬದಲಾಗುತ್ತಿದ್ದು, ಈಗ ನಮ್ಮ ನೇತೃತ್ವದಲ್ಲಿ ಹೊಸ ಪದಾಧಿಕಾರಿಗಳನ್ನು ತೆಗೆದುಕೊಂಡು ಕೆಲ ಪದ್ಧತಿ, ನಿಯಮಗಳನ್ನು ರೂಪಿಸಿಕೊಂಡು ಹೊರಟಿದ್ದೇವೆ. ಮುಂದಿನ ದಿನಗಳಲ್ಲಿ ಯಲಬುಗಾ, ಕುಷ್ಟಗಿ, ಗಂಗಾವತಿ ತಾಲೂಕ ಘಕಟಗಳನ್ನು ರಚಿಸಬೇಕಾಗಿದೆ. ಪೇಂಟರ್ ಕಾರ್ಮಿಕರಿಗೆ ಸೌಲಭ್ಯ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀನಿವಾಸ ಪೇಂಟ್ಸ್‌ನ ಮಾಲಿಕರಾದ ಆಕಾಶ, ವಿಜಯ ಪೇಂಟ್ಸ್‌ನ ಮಾಲಿಕ ಮಲ್ಲಿಕಾರ್ಜುನ್, ಕೊಪ್ಪಳ ಹಾರ್ಡೆವೇರ್‍ಸ್‌ನ ಮಾಲಿಕ ಅಷ್ಫಕ್, ಹಿರಿಯ ಪೇಂಟರ್ ಮೇಸ್ತ್ರಿಗಳಾದ ದೇವೇಂದ್ರಪ್ಪ ಪೂಜಾರ್, ಪಾಶಾ ರಾಯಚೂರ ಪೇಂಟರ್, ಸೈಯ್ಯದ್ ಶರೀಫ್ ಖಾದ್ರಿ ಪೇಂಟರ್, ಮಾಜಿ ಅಧ್ಯಕ್ಷ ಮಹೆಬೂಬ ಕಳಸಾಪೂರ. ಮುಂತಾದವರು ಶುಭ ಹಾರೈಸಿ ಮಾತನಾಡಿದರು. 
ಸ್ವಾಗತ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸೈಯ್ಯದ್ ನೂರುಲ್ಲಾ ಖಾದ್ರಿ ಮಾಡಿದರೆ, ಪ್ರಸ್ತಾವಿಕ, ನಿರೂಪಣೆಯನ್ನು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ವಂದನಾರ್ಪಣೆಯನ್ನು ಜಿಲ್ಲಾ ಪೇಂಟರ್ ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮಂಡ್ಯ ಮಾಡಿದರು.

Leave a Reply