You are here
Home > Koppal News > ರಾಜ್ಯ ಯೋಜನಾ ನಿರ್ದೇಶಕರಿಂದ ಕೊಪ್ಪಳ ಭೇಟಿ ಪ್ರಗತಿ ಪರಿಶೀಲನೆ.

ರಾಜ್ಯ ಯೋಜನಾ ನಿರ್ದೇಶಕರಿಂದ ಕೊಪ್ಪಳ ಭೇಟಿ ಪ್ರಗತಿ ಪರಿಶೀಲನೆ.

ಕೊಪ್ಪಳ, ಅ.೧೪ (ಕ ವಾ) ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಎಂ. ಮಲ್ಲಣ್ಣ ಅವರು ಮಂಗಳವಾರ ಕೊಪ್ಪಳ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಛೇರಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
     ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್.ಎಸ್.ಎ ವಿಭಾಗದಿಂದ ೨೦೧೪-೧೫ನೇ ಸಾಲಿನಲ್ಲಿ ಪ್ರಾರಂಭವಾಗದೇ ಇರುವ ಸಿವಿಲ್ ಕಾಮಗಾರಿಗಳನ್ನು ತಕ್ಷಣ ಪ್ರಾರಂಬಿಸಬೇಕು. ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಗುರಿ ೧೦೦೪ ಇದ್ದು, ೪೯೫ ಸಾಧನೆ ಮಾಡಲಾಗಿದೆ. ಇನ್ನುಳಿದ ಮಕ್ಕಳನನ್ನು ಆದಷ್ಟು ಬೇಗನೆ ಮುಖ್ಯವಾಹಿನಿಗೆ ತರಬೇಕು. ಬಲವರ್ಧನೆ ಶಾಲೆಗಳ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಿ, ಇಲಾಖೆಗೆ ಹಸ್ತಾಂತರಿಸುವತ್ತ ಗಮನಹರಿಸಬೇಕು ಎಂದು ಸಂಬಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೆ.ಜಿ.ಬಿ.ವಿ ಶಾಲೆಗಳ ದಾಖಲಾತಿ ಹಾಜರಾತಿ ಪರಿಶೀಲಿಸಿ, ದಾಖಲಾತಿ ಕಡಿಮೆ ಇರುವ ಕಡೆ ದಾಖಲಾತಿಗೆ ಆದ್ಯತೆ ನೀಡಲು ತಿಳಿಸಿದ ಅವರು, ಅಕ್ಟೋಬರ್ ೦೨ ರಂದು ಮಹಾರಾಷ್ಟ್ರದ ನಾಸೀಕ್‌ನಲ್ಲಿ ನಡೆದ ರಾಷ್ಟ್ರಮಟ್ಟದ ದೊಣ್ಣೆ ವರಸೆ ಸ್ಪರ್ಧೆಯಲ್ಲಿ ಬಂಗಾರ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿರುವ ಕೆ.ಜಿ.ಬಿ.ವಿ ಹನುಮಸಾಗರದ ಮುಖ್ಯಶಿಕ್ಷಕರು, ವಿದ್ಯಾರ್ಥಿನಿಯರು ಹಾಗೂ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸ್ವಚ್ಛ ಭಾರತ ಕಾರ್ಯಕ್ರಮದಡಿ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲು ಹಾಗೂ ಸಮನ್ವಯ ಶಿಕ್ಷಣ ಕುರಿತು ತರಬೇತಿ ಅನುದಾನಕ್ಕೆ ಬೇಡಿಕೆ ಇದ್ದಲ್ಲಿ ಮನವಿ ಮಾಡುವಂತೆ ಅವರು ತಿಳಿಸಿದರು.
     ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಂಸುಂದರ, ಉಪಯೋಜನಾ ಸಮನ್ವಯಾಧಿಕಾರಿ ವೆಂಕಟೇಶ್ ಆರ್ ಸೇರಿದಂತೆ ನಾಲ್ಕೂ ತಾಲೂಕುಗಳ ಬಿ.ಇ.ಓ, ಬಿ.ಆರ್.ಸಿ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯ ಯೋಜನಾ ನಿರ್ದೇಶಕರಾದ ಎಂ.ಮಲ್ಲಣ್ಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Leave a Reply

Top