ಕಳಪೆ ಪಡಿತರ ಧಾನ್ಯ ಪೂರೈಕೆ -ಗೋದಾಮು ವ್ಯವಸ್ಥಾಪಕನ ಅಮಾನತಿಗೆ ಸಚಿವರ ಆದೇಶ

  ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಕಳಪೆ ಗುಣಮಟ್ಟದ ಪಡಿತರ ಅಕ್ಕಿ ಹಾಗೂ ಗೋಧಿ ಪೂರೈಕೆ ಮಾಡಿದ್ದಕ್ಕಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕೊಪ್ಪಳ ಗೋದಾಮಿನ ವ್ಯವಸ್ಥಾಪಕ ನಾಗರಾಜ್ ಅವರನ್ನು ಅಮಾನತುಗೊಳಿಸುವಂತೆ ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
  ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಗಂಗಾವತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಿನ್ನಾಳ

ಗ್ರಾಮದ ನ್ಯಾಯಬೆಲೆ ಅಂಗಡಿಗೆ ಕಳಪೆ ಗುಣಮಟ್ಟದ ಸುಮಾರು ೪೦ ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಗೋಧಿ ಸರಬರಾಜಾಗಿದ್ದು, ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಸಭೆಯಲ್ಲಿ ಅಕ್ಕಿ ಮತ್ತು ಗೋಧಿಯ ಮಾದರಿಯನ್ನು ಪ್ರದರ್ಶಿಸಿ, ಸಚಿವರ ಪರಿಶೀಲನೆಗೆ ಒಪ್ಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಕುರಿತಂತೆ ಕೊಪ್ಪಳದ ಗೋದಾಮು ವ್ಯವಸ್ಥಾಪಕ ನಾಗರಾಜ್, ಆಹಾರ ನಿರೀಕ್ಷಕರು ಮತ್ತು ಉಪನಿರ್ದೇಶಕರನ್ನು ಸ್ಥಳದಲ್ಲಿಯೇ ವಿಚಾರಣೆ ನಡೆಸಿ, ಕಳಪೆ ಗುಣಮಟ್ಟದ ಪಡಿತರ ಧಾನ್ಯ ಪೂರೈಕೆ ಆಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ನಾಗರಾಜ್ ಅವರನ್ನು ಕೂಡಲೆ ಅಮಾನತುಗೊಳಿಸಬೇಕು ಅಲ್ಲದೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.  ಯಾವುದೇ ಕಾರಣಕ್ಕೂ ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ಕಳಪೆ ಗುಣಮಟ್ಟದ ಪಡಿತರಧಾನ್ಯ ವಿತರಣೆಯಾಗಬಾರದು. ಯಾವುದೇ ಅಧಿಕಾರಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ಕಾರ್ಯವೈಖರಿ ಅನುಸರಿಸಿದರೆ ಸಹಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಚಿವರು ಎಚ್ಚರಿಕೆ ನೀಡಿದರು.  ಅಲ್ಲದೆ ಸಭೆಗೆ ಗೈರು ಹಾಜರಾಗಿದ್ದಕ್ಕೆ ಕುಷ್ಟಗಿ ಶಾಸಕ ಪಾಟೀಲ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ತಿಂಗಳಾಂತ್ಯಕ್ಕೆ ಮೆಡಿಕಲ್ ಕಾಲೇಜು ಕಾಮಗಾರಿ : ಕೊಪ್ಪಳದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡಕ್ಕಾಗಿ ಈಗಾಗಲೆ ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದ ಎಲ್ಲ ಅಡ್ಡಿಗಳು ನಿವಾರಣೆಯಾಗಿದ್ದು, ಈ ಕುರಿತಂತೆ ಸರ್ಕಾರದಿಂದ ಆದೇಶ ಬಂದಿದ್ದು, ಮೆಡಿಕಲ್ ಕಾಲೇಜಿಗೆ ಭೂಮಿ ಹಸ್ತಾಂತರಕ್ಕೆ ಅಗತ್ಯ ಪ್ರಕ್ರಿಯೆಗಳನ್ನು ತಹಸಿಲ್ದಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ವಾರದೊಳಗೆ ಪೂರ್ಣಗೊಳಿಸಬೇಕು.  ತಿಂಗಳಾಂತ್ಯಕ್ಕೆ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ಇದೇ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಗೆ ಭೂಮಿಪೂಜೆಯೊಂದಿಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.  ಅಲ್ಲದೆ ಕೊಪ್ಪಳದಲ್ಲಿನ ರೈಲ್ವೆಗೇಟ್ ಸಂಖ್ಯೆ ೬೨ ಮತ್ತು ೬೪  ರಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಕಾಮಗಾರಿಗೂ ಸಹ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಂದಲೇ ಚಾಲನೆ ಕೊಡಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕಪ್ಪುಪಟ್ಟಿಗೆ ಗುತ್ತಿಗೆ ಕಂಪನಿ : ಕೊಪ್ಪಳ ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕೇವಲ ಶೇ. ೪೦ ರಷ್ಟು ಕಾಮಗಾರಿ ಮಾತ್ರ ಆಗಿದೆ.  ಅಲ್ಲದೆ ಡಿಸೆಂಬರ್ ಅಂತ್ಯದವರೆಗೆ ಕಾಲಮಿತಿಯನ್ನು ವಿಸ್ತರಿಸುವಂತೆ ಕೋರಿದ್ದಾರೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತ ರುದ್ರಮುನಿ ಅವರು ಸಭೆಗೆ ಆಂಗ್ಲಭಾಷೆಯಲ್ಲಿ ವಿವರಣೆ ನೀಡಲು ಮುಂದಾಗುತ್ತಿದ್ದಂತೆಯೇ, ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕನ್ನಡದಲ್ಲಿಯೇ ಸಭೆಗೆ ವಿವರಣೆ ನೀಡುವಂತೆ ತಾಕೀತು ಮಾಡಿದರು.  ಗುತ್ತಿಗೆದಾರರ ಮಂದಗತಿಯ ಕಾಮಗಾರಿ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು,  ಗುತ್ತಿಗೆದಾರರಿಗೆ ಈ ಹಿಂದೆ ಹಲವು ಬಾರಿ ಸೂಚನೆ ನೀಡಿದರೂ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸದೆ, ಕಾಲಹರಣ ಮಾಡಿದ್ದಾರೆ. ಇದೀಗ ಅವಧಿ ವಿಸ್ತರಣೆ ಮಾಡಲು ಕೋರಿಕೆ ಸಲ್ಲಿಸಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.  ಆದ್ದರಿಂದ ಕೂಡಲೆ ಈ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಲು ಅಲ್ಲದೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.  ಮುಂದಿನ ಕಾಮಗಾರಿಗೆ ಕೂಡಲೆ ಟೆಂಡರ್ ಕರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ಫೆಬ್ರವರಿ ಅಂತ್ಯದೊಳಗೆ ಪಡಿತರಚೀಟಿ ವಿತರಿಸಿ : ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ಪಡಿತರ ಚೀಟಿಗಾಗಿ ಒಟ್ಟು ೭೨೧೧೮ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಈಗಾಗಲೆ ೧೮೯೦೬ ಜನರಿಗೆ ಕಾರ್ಡ್ ವಿತರಣೆಯಾಗಿದೆ.  ೪೮ ಸಾವಿರ ಅರ್ಜಿಗಳ ಪರಿಶೀಲನೆ ನಡೆಸಲಾಗಿದ್ದು, ೩೯೧೫೭ ಜನರಿಗೆ ಬಿಪಿಎಲ್ ಹಾಗೂ ೬೩೬೬ ಜನರಿಗೆ ಎಪಿಎಲ್ ಕಾರ್ಡುಗಳಿಗೆ ಶಿಫಾರಸು ಮಾಡಲಾಗಿದೆ.  ಉಳಿದಂತೆ ೩೦೯೭ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.  ಇನ್ನೂ ೨೪ ಸಾವಿರ ಅರ್ಜಿಗಳ ಪರಿಶೀಲನೆ ಆಗಬೇಕಿದ್ದು, ಗ್ರಾ.ಪಂ. ಪಿಡಿಓಗಳು ತ್ವರಿತವಾಗಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ ಅವರು ವಿವರ ನೀಡಿದರು.  ಎಲ್ಲ ಅರ್ಜಿಗಳ ಪರಿಶೀಲನೆ ನಡೆದು, ಅರ್ಹರೆಲ್ಲರಿಗೂ ಫೆ. ೨೦ ರ ಒಳಗಾಗಿ ಪಡಿತರ ಚೀಟಿ ವಿತರಣೆಯಾಗುವಂತೆ ಕ್ರಮ ಜರುಗಿಸಬೇಕು ಎಂದು ಸಚಿವರು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ ಸೇರಿದಂತೆ ತಾಲೂಕು ಪಂಚಾಯತಿಗಳ ಅಧ್ಯಕ್ಷರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error