ಜಿಲ್ಲೆಯ ನೀರಿನ ಟ್ಯಾಂಕ್‍ಗಳ ಸುರಕ್ಷತೆ : ಜಿ.ಪಂ. ಸಿಇಓ ಕೃಷ್ಣ ಉದಪುಡಿ ಸೂಚನೆ

ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲ ನೀರಿನ ಟ್ಯಾಂಕ್‍ಗಳ ಸುರಕ್ಷತೆ ಕುರಿತಂತೆ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
      ಕೊಪ್ಪಳ ನಗರದ ಎನ್.ಜಿ.ಓ. ಕಾಲೋನಿಯಲ್ಲಿ ಇತ್ತೀಚಿಗೆ, ಮುಕ್ತಾಯ ಹಂತದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ ಕುಸಿದು ಅನಾಹುತ ಸಂಭವಿಸಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಇಂತಹ ನೂರಾರು ಕುಡಿಯುವ ನೀರಿನ ಟ್ಯಾಂಕರ್‍ಗಳನ್ನು ನಿರ್ಮಿಸಲಾಗಿದೆ.  ಅಲ್ಲದೆ ಅಗತ್ಯತೆಗೆ ಅನುಸಾರವಾಗಿ ಇನ್ನೂ ನಿರ್ಮಿಸಲಾಗುತ್ತಿದೆ.  ಜಿಲ್ಲೆಯಲ್ಲಿ ಸದ್ಯ ಇರುವ ಹಾಗೂ ನಿರ್ಮಾಣ ಹಂತದಲ್ಲಿರುವ ಎಲ್ಲ ನೀರಿನ ಟ್ಯಾಂಕ್‍ಗಳ ಸ್ಥಿತಿ-ಗತಿ ಹಾಗೂ ಗುಣಮಟ್ಟದ ಬಗ್ಗೆ ಜಿಲ್ಲೆಯ ನಾಲ್ಕು ತಾಲೂಕಿನ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ, ಎರಡು ದಿನಗಳ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸಬೇಕು.  ಈಗಾಗಲೇ ನಿರ್ಮಿಸಿ ಹಳೆಯದಾಗಿರುವ, ಅಥವಾ ಬೀಳುವ ಸ್ಥಿತಿಯಲ್ಲಿ ಇರುವಂತಹ ಟ್ಯಾಂಕ್‍ಗಳನ್ನು ತಕ್ಷಣ ಗುರುತಿಸಿ, ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಮಾಹಿತಿ ನೀಡಿ :  ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಇಂತಹ ಯಾವುದಾದರೂ ನೀರಿನ ಘಟಕ ಕಂಡು ಬಂದಿದ್ದೇ ಆದರೆ ತಕ್ಷಣ ಮಾಹಿತಿಯನ್ನು ಆಯಾ ಗ್ರಾ.ಪಂ. ಪಿಡಿಓ ಅಥವಾ ತಾ.ಪಂ. ಇಓ ಅವರಿಗೆ ನೀಡಬೇಕು.  ಸಾರ್ವಜನಿಕರು ನೀಡುವ ಮಾಹಿತಿಯನ್ನು ಆಧರಿಸಿ ತಜ್ಞರಿಂದ ಪರಿಶೀಲನೆ ನಡೆಸಲಾಗುವುದು.  ಅಲ್ಲದೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.  ಸಾರ್ವಜನಿಕರು ಇದಕ್ಕೆ ಸಹಕರಿಸಿ ಅನಾಹುತ ಆಗುವುದನ್ನು ತಪ್ಪಿಸಬಹುದಾಗಿದೆ ಎಂದು  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ

Leave a Reply