ಮಕ್ಕಳು ತಮ್ಮ ಹಕ್ಕುಗಳ ಜಾಗೃತಿ ಹೊಂದಿರಲಿ ನ್ಯಾಯಾಧೀಶ ಬಿ. ದಶರಥ.

ಕೊಪ್ಪಳ, ೨೫ ಮಕ್ಕಳಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವಿರಬೇಕು. ದೌರ್ಜನ್ಯ ತಡೆಗಾಗಿ ನಮ್ಮ ಸಂವಿಧಾನದ ಕಾನೂನುಗಳ ಮಾಹಿತಿ ಹೊಂದಿರಬೇಕು. ಇಂದಿನ ಸಮಾಜಕ್ಕೆ ಮಾರಿಯಾಗಿರುವ ದೌರ್ಜನ್ಯಗಳ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿ, ಹೋಗಲಾಡಿಸುವಲ್ಲಿ ಜಾಗೃತಿ, ತಿಳುವಳಿಕೆ ಪಡೆದಿರಬೇಕು. ಪರಿಸರ ರಕ್ಷಣೆಯೂ ನಮ್ಮ ಕರ್ತವ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶರಾದ ಬಿ. ದಶರಥ ನುಡಿದರು.
    ಅವರು ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ಮಕ್ಕಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸ್ವಾಮಿ ವಿವೇಕಾನಂದ ಶಾಲೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ದಿ. ೨೫-೧೧-೨೦೧೫ ರಂದು ಹಮ್ಮಿಕೊಳ್ಳಲಾಗಿದ್ದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಪರಿಸರ ರಕ್ಷಣೆ ಕುರಿತಾದ ವಿದ್ಯಾ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೇಲಿನಂತೆ ಮಾತನಾಡಿದರು.
    ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಡಿ.ಪಿ. ವಸಂತ ಪ್ರೇಮಾ ಮಾತನಾಡಿ ಮಹಿಳೆಯರ ಮತ್ತು ಮಕ್ಕಳ ಕಾಳಜಿ ಹಿಂದಿಗಿಂತಲೂ ಈಗ ಅವಶ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನ್ಯಾಯಾಧೀಶ ಬಿ. ದಶರಥ ಮತ್ತು ಡಿ.ಪಿ. ವಸಂತ ಪ್ರೇಮಾ ಇವರನ್ನು ಲಯನ್ಸ್ ಕ್ಲಬ್ ಮತ್ತು ಶಾಲೆಯ ಪರವಾಗಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಲಯನ್ ಬಸವರಾಜ್ ಬಳ್ಳೊಳ್ಳಿಯವರು ಸನ್ಮಾನಿಸಿದರು. ಮಹಿಳೆಯರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಕುರಿತು ವಕೀಲರಾದ ಶ್ರೀಮತಿ ಕಾಳಮ್ಮ ಮತ್ತು ಮಕ್ಕಳ ಹಕ್ಕುಗಳ ಕುರಿತಾಗಿ ಹನುಮಂತರಾವ್ ಇವರು ನೀಡಿದ ವಿಶೇಷವಾದ ಉಪನ್ಯಾಸ ಗಮನ ಸೆಳೆದವು. ಆರಂಭದಲ್ಲಿ ಚಂದನಾ ಪ್ರಾರ್ಥಿಸಿದರೆ, ವೈಷ್ಣವಿ, ಶ್ವೇತಾ, ಅನಿಷಾ ನಾಡಗೀತೆ ಹಾಡಿದರು. ಶಿಕ್ಷಕ ಮಹೇಶ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾಚಾರ್ಯ ಎ. ಧನಂಜಯನ್ ಸ್ವಾಗತಿಸಿದರೆ, ಕೊನೆಯಲ್ಲಿ ಶಾಲಾ ನಾಯಕಿ ಕು. ಸುಧಾ ವಂದಿಸಿದರು.

Leave a Reply