ಪಾರದರ್ಶಕ ಆಡಳಿತಕ್ಕೆ ಮಾಹಿತಿ ಹಕ್ಕು ಅಧಿನಿಯಮ ಪೂರಕ

ಕೊಪ್ಪಳ ಜೂ. ೨೮ (ಕ.ವಾ): ಸರ್ಕಾರದ ಇಲಾಖೆಗಳಲ್ಲಿ ಪಾರದರ್ಶಕ ಆಡಳಿತ ನಿರ್ವಹಣೆಗೆ ಮಾಹಿತಿ ಹಕ್ಕು ಅಧಿನಿಯಮ ಪೂರಕವಾಗಿದೆ ಎಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಬಿ. ಯೋಗನಾಥ ಸಿಂಗ್ ಅವರು ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಏರ್ಪಡಿಸಲಾಗಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಾಹಿತಿ ಹಕ್ಕು ಅಧಿನಿಯಮವನ್ನು ಕರ್ನಾಟಕದಲ್ಲಿ ೨೦೦೨ ರಲ್ಲೇ ಜಾರಿಯಾಗಿದೆ. ನಂತರ ಕೇಂದ್ರ ಸರ್ಕಾರ ಕೆಲವು ತಿದ್ದುಪಡಿಗಳೊಂದಿಗೆ ಪರಿಷ್ಕೃತವಾಗಿ ಮಾಹಿತಿ ಹಕ್ಕು ಅಧಿನಿಯಮ ೨೦೦೫ ರಲ್ಲಿ ಸಂಪೂರ್ಣ ಜಾರಿಗೆಗೊಳಿಸಲಾಗಿದೆ. ಈ ಕಾಯ್ದೆ ಜಾರಿಯಾದಾಗಿನಿಂದ ಸರ್ಕಾರಿ ಕಚೇರಿಗಳಲ್ಲಿ ಆಡಳಿತ ವ್ಯವಹಾರ, ಕಡತಗಳ ನಿರ್ವಹಣೆ, ಪಾರದರ್ಶಕತೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸುಧಾರಣೆಯಾಗುತ್ತಿರುವುದು ಕಂಡುಬಂದಿದೆ. ಮಾಹಿತಿ ಹಕ್ಕು ಅಧಿನಿಯಮ ಕುರಿತು ಎಲ್ಲಾ ಅಧಿಕಾರಿಗಳನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಗೆ ಕರೆಸಿಕೊಂಡು, ತರಬೇತಿ ನೀಡಲು ಕಷ್ಟಸಾಧ್ಯ, ಆಡಳಿತ ತರಬೇತಿ ಸಂಸ್ಥೆಯಿಂದಲೇ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರಿ ಆಡಳಿತದಲ್ಲಿ ಗೌಪ್ಯವಾಗಿರಿಸುವ ಯಾವುದೇ ವ್ಯವಹಾರಗಳಿಲ್ಲ. ತರಬೇತಿಯ ಮೂಲಕ ಆಡಳಿತ ಯಂತ್ರದಲ್ಲಿ ಜವಾಬ್ದಾರಿ, ಪಾರದರ್ಶಕತೆ ಅಳವಡಿಸಲು ಹೆಚ್ಚು, ಹೆಚ್ಚು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಮಾಹಿತಿ ಹಕ್ಕು ಅಧಿನಿಯಮ ಸಾರ್ವಜನಿಕರಿಗೆ ಪ್ರಮುಖವಾದ ಅಸ್ತ್ರವಾಗಿ ಪರಿಣಮಿಸಿದ್ದು, ಆಡಳಿತದಲ್ಲಿ ಮುಕ್ತತೆ, ಹೆಚ್ಚಿನ ಜವಾಬ್ದಾರಿ, ಪಾರದರ್ಶಕತೆ ಅಳವಡಿಸಲು ಸಹಾಯಕಾರಿಯಾಗಿದೆ. ಅಲ್ಲದೆ ಜನರ ಕುಂದುಕೊರತೆಗಳಿಗೆ ತ್ವರಿತವಾಗಿ ಪರಿಹಾರ ನೀಡುವುದರ ಜೊತೆಗೆ ಸಾರ್ವಜನಿಕ ಆಡಳಿತವು ಜನಪರ, ಸಮಾಜಮುಖಿಯಾಗುವಂತೆ ಮಾಡುವಲ್ಲಿ ಮಾಹಿತಿ ಹಕ್ಕು ಅಧಿನಿಯಮ ಪರಿಣಾಮಕಾರಿಯಾಗಿದೆ. ಆದರೆ ಕೆಲವು ಇಲಾಖೆಗಳ ಅಧಿಕಾರಿಗಳು ಈ ಕಾಯ್ದೆಯಿಂದಾಗಿ ಆಡಳಿತದಲ್ಲಿ ಸಾಕಷ್ಟು ಕಿರಿ ಕಿರಿ ಉಂಟಾಗುತ್ತಿದ್ದು, ಸುಗಮ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಿರುವುದು ಕಂಡುಬಂದಿದೆ. ಆದರೆ ಸರ್ಕಾರಿ ಆಡಳಿತ ವ್ಯವಹಾರ ಪಾರದರ್ಶಕವಾಗಿದ್ದಲ್ಲಿ, ಅಧಿಕಾರಿಗಳಿಗೆ ಮಾಹಿತಿ ಒದಗಿಸಲು ಯಾವುದೇ ತೊಂದರೆ ಉಂಟಾಗುವುದಿಲ್ಲ. ಮಾಹಿತಿ ಹಕ್ಕು ಅಧಿನಿಯಮದಿಂದ ಬಹಳಷ್ಟು ಅರ್ಹ ಫಲಾನುಭವಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡಿರುವ ನಿದರ್ಶನಗಳಿವೆ ಎಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಬಿ. ಯೋಗನಾಥ ಸಿಂಗ್ ಅವರು ವಿವರಿಸಿದರು.
ಮಾಹಿತಿ ಹಕ್ಕು ಅಧಿನಿಯಮ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಕೆ ತೊರವಿ ಅವರು ನೆರವೇರಿಸಿದರು, ಸಹಾಯಕ ಆಯುಕ್ತ ಶರಣಬಸಪ್ಪ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತರಬೇತಿ ಕಾರ್ಯಕ್ರಮವು ಜೂ. ೨೯ ರಂದು ಸಹ ಮುಂದುವರೆಯಲಿದೆ.
Please follow and like us:
error