ಆಧಾರ್ ಕಾರ್ಡ್ : ಕೊಪ್ಪಳದ ಸಾಹಿತ್ಯ ಭವನದಲ್ಲಿ ನೋಂದಣಿ ಪ್ರಾರಂಭ

ಕೊಪ್ಪಳ ಜು. ೨೭ (ಕ.ವಾ): ಜಿಲ್ಲೆಯ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಕಾರ್ಡ್ ಯೋಜನೆಗಾಗಿ ಸಾರ್ವಜನಿಕರ ನೋಂದಣಿ ಕಾರ್ಯ ಪ್ರಾರಂಭಗೊಂಡಿದ್ದು, ಕೊಪ್ಪಳ ನಗರ ವ್ಯಾಪ್ತಿಯಲ್ಲಿ ವಾರ್ಡ್ ವಾರು ನೊಂದಣಿ ಮಾಡಲಾಗುವುದು. ನಗರದ ಸಾಹಿತ್ಯ ಭವನದಲ್ಲಿ ೪ ನೋಂದಣಿ ಘಟಕವನ್ನು ಪ್ರಾರಂಬಿಸಲಾಗಿದ್ದು, ಕೊಪ್ಪಳ ನಗರದ ವಾರ್ಡ್ ಸಂಖ್ಯೆ ೧ ರ ಸಾರ್ವಜನಿಕರು ಸಾಹಿತ್ಯ ಭವನಕ್ಕೆ ಅಗತ್ಯ ಮೂಲ ದಾಖಲಾತಿಗಳೊಂದಿಗೆ ಹಾಜರಾಗಿ ಆಧಾರ್ ಕಾರ್ಡ್ ಗೆ ನೋಂದಣಿ ಮಾಡಿಸಿಕೊಳ್ಳಬೇಕು.
ನಗರದ ಸಾಹಿತ್ಯ ಭವನದಲ್ಲಿ ಪ್ರತಿ ದಿನ ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯ ವರೆಗೂ ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಲಾಗುವುದು. ಸಾರ್ವಜನಿಕರು ತಮ್ಮ ವಾಸಸ್ಥಳ ಹಾಗೂ ವ್ಯಕ್ತಿಯ ಗುರುತಿಗಾಗಿ ಭಾವಚಿತ್ರವಿರುವ ಮತದಾರರ ಗುರುತಿನ ಕಾರ್ಡ್, ಭಾವಚಿತ್ರವಿರುವ ಪಡಿತರ ಚೀಟಿ, ಅಥವಾ ಗುರುತಿಗಾಗಿ ಈಗಾಗಲೆ ತಿಳಿಸಲಾಗಿರುವ ದಾಖಲೆಗಳ ಪೈಕಿ ಯಾವುದಾದರೂ ಒಂದು ಮೂಲ ದಾಖಲಾತಿಯೊಂದಿಗೆ ಹಾಜರಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಶೀಘ್ರದಲ್ಲಿ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ವ್ಯವಸ್ಥೆ ಮಾಡಲಾಗುವುದು, ಸಾರ್ವಜನಿಕರು ಶಾಂತಿಯುತವಾಗಿ ನೋಂದಣಿ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಕೊಪ್ಪಳ ತಹಸಿಲ್ದಾರ್ ಕೆ.ಎಲ್. ಘೋಟೆ ಅವರು ತಿಳಿಸಿದ್ದಾರೆ.
Please follow and like us:
error