You are here
Home > Koppal News > ಐಪಿಸಿ ಕುರಿತು ಮೊದಲು ಮಾತನಾಡಿದ್ದು ಬಸವಣ್ಣ – ಹನುಮಂತರಾವ್

ಐಪಿಸಿ ಕುರಿತು ಮೊದಲು ಮಾತನಾಡಿದ್ದು ಬಸವಣ್ಣ – ಹನುಮಂತರಾವ್

ಜಗತ್ತಿನಲ್ಲಿ ಇರುವ ಕಾನೂನುಗಳ, ದೇಶದ ಐಪಿಸಿ (ಇಂಡಿಯನ್ ಪೀನಲ್ ಕೋಡ್) ಬಗ್ಗೆ ಮೊದಲು ಮಾತನಾಡಿದ್ದು ಕ್ರಾಂತಿಯೋಗಿ ಬಸವಣ್ಣ ಎಂದು ನ್ಯಾಯವಾದಿ, ಹಾಸ್ಯ ಭಾಷಣಕಾರ ಹನುಮಂತರಾವ್ ಕೆಂಪಳ್ಳಿ ಅಭಿಪ್ರಾಯಪಟ್ಟರು.
ಅವರು ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರಕಾರಿ ಪದವಿ ಕಾಲೇಜು ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ತನ್ನಬಣ್ಣಿಸಬೇಡ ವಚನ ಹತ್ತಾರು ಐಪಿಸಿ ಕಾನೂನುಗಳನ್ನು ಹೇಳುತ್ತದೆ, ಅದೇ ರೀತಿ ಅನೇಕ ವಚನಕಾರರು ತಮ್ಮ ವಚನಗಳ ಮೂಲಕ ದೇಶಕ್ಕೆ ಬದುಕಿನ, ಜೀವನ ಕೌಶಲ್ಯದ ಮಾದರಿಯನ್ನು ಹಾಕಿಕೊಟ್ಟಿದ್ದಾರೆ, ನಾವು ಮಾತ್ರ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ನಮ್ಮದೇ ಲೋಕದಲ್ಲಿ ಮುಳುಗಿದ್ದೇವೆ ಎಂದ ಅವರು ಯುವಜನರು ಇಂದು ದುರ್ವೆಸನಿಗಳಾಗಿ ಹಾದಿ ತಪ್ಪುತ್ತಿರುವದಕ್ಕೆ ತೀವ್ರ ವಿಷಾದವ್ಯಕ್ತಪಡಿಸಿದರು. 
ಮುಂದುವರೆದು ಮಾತನಾಡಿದ ಅವರು ವಿವೇಕಾನಂದ ನೀಡಿದ ಸಂದೇಶಗಳು ಅಜರಾಮರ, ಈಗೀಗ ಅವರ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಎತ್ತಿ ಕೆಲವರು ಯುವಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿರುದಕ್ಕೆ ಕಳವಳ ವ್ಯಕ್ತಪಡಿಸಿದರು. ಗೋಡಂಬಿ ತಿನ್ನುವದು ಶ್ರೀಮಂತರು ಎಂದು ಹೇಳಿಕೊಳ್ಳುತ್ತಾ ಯುವಕರು ಅದಕ್ಕಿಂತ ಹೆಚ್ಚಿನ ಬೆಲೆ ಕೊಟ್ಟು ಗುಟ್ಕಾ ತಿಂದು ಬೇಗ ಮಸಣ ಸೇರುತ್ತಿದ್ದೇವೆ ಎಂದು ಯುವಜನರ ಬಗ್ಗೆ ಮರುಗಿದರು.
ಪತ್ರಕರ್ತ ಜಿ. ಎಸ್. ಗೋನಾಳ ಮಾತನಾಡಿ, ವಿದ್ಯೆ ಕಲಿತರೆ ಸಾಲದು, ಕುಟುಂಬ ನಡೆಸುವ ಜವಾಬ್ದಾರಿ ಕಲಿಯಬೇಕು ಅದರೊಟ್ಟಿಗೆ ನಮ್ಮ ಪೋಷಕರನ್ನು ಸಾಕಿ ಸಲಹುವ ವಿವೇಕವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಪ್ರಾಧ್ಯಾಪಕಿ ಗಾಯತ್ರಿ ಮಾತನಾಡಿ, ಇಂದು ಶಾಂತಿ ಅಹಿಂಸೆಯ ಕುರಿತು ಮಾತನಾಡುವದೇ ಕಷ್ಟವಾಗಿದೆ, ಅದರ ಕುರಿತು ಮಾತನಾಡಿದರೆ ಅದು ಯಾವುದೋ ತಿರುವು ಪಡೆದು ಜಾತಿಕಾರಣಕ್ಕೆ ಧ್ವೇಷಕ್ಕೆ ತಿರುಗುತ್ತೆ ಎಂದು ವಿಷಾಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿಕೊಂಡಿದ್ದ ಕಾಲೇಜಿನ ಪ್ರಾಚಾರ್ಯ ಎಸ್. ಬಿ. ಶಾಂತಪ್ಪನವರ ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಳ್ಳುವದರ ಜೊತೆಗೆ ವಿವೇಕವಂತರಾಗಬೇಕು, ವೃತ್ತಿ ಕೌಶಲಗಳನ್ನು ಅರಿತುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕ ನಟರಾಜ ಪಾಟೀಲ್ ಇತರರು ಇದ್ದರು. ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರೂಪಿಸಿ ಕೌಶಲ್ಯಾಭಿವೃದ್ಧಿ ಕುರಿತು ಮಾತನಾಡಿದರು, ಇಲಾಖೆಯ ಕೆ. ಎಂ. ಪಾಟೀಲ್ ಹಾಗೂ ವಿದ್ಯಾರ್ಥಿಗಳು ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಧಿಕಾರಿ ಎನ್. ಎಸ್. ಪಾಟೀಲ್ ವಂದಿಸಿದರು.

Leave a Reply

Top