fbpx

ಮತ ಚಲಾವಣೆ ಪವಿತ್ರ ಕರ್ತವ್ಯ : ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತದಾನ ಹಕ್ಕು ಬಳಸಿ

ಭಾರತ ದೇಶ ಪ್ರಜಾಪ್ರಭುತ್ವ ಸಿದ್ಧಾಂತಗಳ ತಳಹದಿಯ ಮೇಲೆ ಸುಭದ್ರವಾಗಿ ನೆಲೆ ನಿಂತಿರುವ ದೇಶ.  ಇಲ್ಲಿ ಪ್ರಜೆಗಳೇ, ಪ್ರಭುಗಳು.  ನಮ್ಮನ್ನಾಳುವ ದೊರೆಗಳನ್ನು ಆಯ್ಕೆ ಮಾಡುವ ಹೊಣೆ ಎಲ್ಲ ಪ್ರಜೆಗಳ ಮೇಲಿದೆ.  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಜನಪ್ರತಿನಿಧಿಗಳ ಆಯ್ಕೆಗಾಗಿ ರೂಪಿಸಲಾಗಿರುವ ಮಹತ್ವದ ವೇದಿಕೆ. ಮತದಾನ, ಮತದಾರನಿಗಿರುವ ಪ್ರಬಲ ಅಸ್ತ್ರ ಹಾಗೂ ಪವಿತ್ರ ಹಕ್ಕು.
  ನಮ್ಮ ದೇಶದ ಸಂವಿಧಾನ ರೂಪಿಸಿರುವ ಮಹನೀಯರು, ದೇಶದ ಪ್ರತಿಯೊಬ್ಬ ಪ್ರಜೆಗೂ ಮಹತ್ವವಾದ ಕರ್ತವ್ಯವನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ನೀಡಿದ್ದಾರೆ.  ಇದು ಕೇವಲ ಹೊಣೆಗಾರಿಕೆ ಅಷ್ಟೇ ಅಲ್ಲ, ನಮ್ಮ ಪವಿತ್ರ ಹಕ್ಕು ಎಂಬುದನ್ನು ನಿರೂಪಿಸುವ ಜವಾಬ್ದಾರಿ ಎಲ್ಲ ಪ್ರಜೆಗಳ ಮೇಲಿದೆ.  ಭಾರತ ದೇಶ ಸ್ವಾತಂತ್ರ್ಯವಾದಾಗಿನಿಂದಲೂ ಅನೇಕ ಚುನಾವಣೆಗಳನ್ನು ಕಂಡಿದೆ.  ಪ್ರತಿ ಚುನಾವಣೆಗಳಲ್ಲೂ ತಮ್ಮ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕರ್ತವ್ಯವನ್ನು ಎಲ್ಲ ಮತದಾರರು ನಿರ್ವಹಿಸಿದ್ದಾರೆ.  ಚುನಾವಣೆಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು, ಚುನಾವಣಾ ಆಯೋಗ, ಪ್ರತಿ ಚುನಾವಣೆಯ ಸಂದರ್ಭದಲ್ಲೂ ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸುತ್ತಾ ಬಂದಿದೆ.  ಮತದಾನ ಪದ್ಧತಿಯಲ್ಲಿಯೂ ಅನೇಕ ಸುಧಾರಣೆಗಳು ಸಾಗಿ ಬಂದಿದ್ದು, ಮತಪತ್ರಗಳ ಬಳಕೆಯ ಬದಲಿಗೆ ಇದೀಗ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾಗುತ್ತಿದೆ.  ಮತದಾನ ವ್ಯವಸ್ಥೆಯನ್ನು ಸುಧಾರಿಸಲಷ್ಟೇ ಚಿಂತನೆ ನಡೆಯುತ್ತಿದ್ದ ಕಾಲ ಇದೀಗ ಬದಲಾಗಿದ್ದು, ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿ, ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ದಿಟ್ಟ ಹೆಜ್ಜೆಯನ್ನಿಟ್ಟಿದೆ.  ಇದನ್ನು ಇತ್ತೀಚೆಗಷ್ಟೇ ಗುಜರಾತ್ ರಾಜ್ಯದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಅನುಸರಿಸಿ, ಯಶಸ್ಸನ್ನೂ ಕಂಡಿದೆ.   ಈ ಯಶಸ್ವಿಯ ಅಲೆಯನ್ನು ಇದೀಗ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿಸಬೇಕು ಎನ್ನುವ ಛಲದಿಂದ, ಚುನಾವಣಾ ಆಯೋಗ ರಾಜ್ಯದಲ್ಲಿಯೂ ಮತದಾರರ ಜಾಗೃತಿಗೆ ‘ಸ್ವೀಪ್’ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ’ ಕಾರ್ಯಕ್ರಮವನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿದೆ.  ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡಂತೆ ಸಮಿತಿಯನ್ನು ರಚಿಸಿ, ಕಾರ್ಯರೂಪಕ್ಕೆ ಇಳಿಸಿದೆ.  
  ಮತದಾರರ ನೋಂದಣಿ ಸಂಖ್ಯೆ ಹೆಚ್ಚಿಸುವುದು, ಅದರಲ್ಲೂ ಮುಖ್ಯವಾಗಿ ಹದಿಹರೆಯದ ಅಂದರೆ ೧೮ ವರ್ಷ ತುಂಬಿರುವ ಯುವಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಒತ್ತಾಸೆಯೊಂದಿಗೆ ರಾಜ್ಯಾದ್ಯಂತ ಆಂದೋಲನವನ್ನೆ ಹಮ್ಮಿಕೊಳ್ಳಲಾಯಿತು.  ಇದೀಗ ಮತದಾರರಿಗೆ ತಮ್ಮ ಮತ ಎಷ್ಟು ಅಮೂಲ್ಯವಾದುದು, ಪ್ರತಿಯೊಂದು ಮತಕ್ಕೂ ಎಷ್ಟು ಮಹತ್ವವಿದೆ.  ಎಲ್ಲ ಮತದಾರರು ತಮ್ಮ ಮತವನ್ನು ತಪ್ಪದೆ ಏಕೆ ಚಲಾಯಿಸಬೇಕು ಎಂಬುದರ ಅರಿವು ಮೂಡಿಸಲು ಬಗೆ ಬಗೆಯ ಕಸರತ್ತನ್ನು ನಡೆಸಲಾಗುತ್ತಿದೆ.  ಹಲವಾರು ಸ್ಪರ್ಧೆಗಳು, ಅಭಿಯಾನ, ಜಾಗೃತಿ ಜಾಥಾ, ಪ್ರಭಾತಫೇರಿ, ಪ್ರತಿಜ್ಞಾ ವಿಧಿ ಬೋಧನೆ, ಹೀಗೆ ಹತ್ತು ಹಲವು ಕ್ರಮಗಳನ್ನು ಅನುಸರಿಸುವ ಮೂಲಕ ಮತದಾರರಲ್ಲಿನ ಕರ್ತವ್ಯದ ಮನಸ್ಸನ್ನು ಎಚ್ಚರಗೊಳಿಸುವುದು ಇದರ ಉದ್ದೇಶವಾಗಿದೆ.  ಚುನಾವಣೆಯಲ್ಲಿ ಕನಿಷ್ಟ ಪ್ರಮಾಣದ ಮತದಾನವಾದಲ್ಲಿ, ಆ ಕ್ಷೇತ್ರದ ಜನಪ್ರತಿನಿಧಿ ಎಲ್ಲ ಮತದಾರರ ಪ್ರತಿನಿಧಿ ಎನಿಸಿಕೊಳ್ಳುವುದು ಸಮಂಜಸವಲ್ಲವಾದ್ದರಿಂದ, ಎಲ್ಲ ಮತದಾರರೂ ತಪ್ಪದೆ ತಮ್ಮ ಮತ ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಯನ್ನು ಆಯ್ಕೆಗೊಳಿಸುವಂತಾಗಬೇಕು.  
  ಮತದಾರರು ತಮ್ಮ ಅಮೂಲ್ಯವಾದ ಹಕ್ಕನ್ನು ಹಣಕ್ಕೆ, ಮದ್ಯದ ಚಟಕ್ಕೆ, ಅಥವಾ ಇನ್ನಾವುದೇ ಸಾಮಗ್ರಿಗಳ ಆಮಿಷಕ್ಕೆ ಮಾರಾಟ ಮಾಡಿಕೊಳ್ಳುವುದು, ಸಂವಿಧಾನಬದ್ಧ ಪವಿತ್ರ ಹಕ್ಕಿಗೆ ಅಪಮಾನ ಎಸಗಿದಂತೆ.  ಪವಿತ್ರವಾದ ಮತ ಚಲಾವಣೆಯ ಹಕ್ಕನ್ನು ಯೋಚಿಸಿ, ತಪ್ಪದೆ ಚಲಾಯಿಸಬೇಕು ಎನ್ನುತ್ತಾರೆ ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು.
  ಮತ ಚಲಾಯಿಸದ ವ್ಯಕ್ತಿ, ಯಾವುದೇ ಆರೋಪ ಅಥವಾ ಬೇಡಿಕೆ ಸಲ್ಲಿಸಲು ನೈತಿಕವಾಗಿ ಹಕ್ಕನ್ನು ಕಳೆದುಕೊಂಡಂತೆ, ಮತದಾರ ತನ್ನ ಶಕ್ತಿ ಪ್ರದರ್ಶಿಸಲು ಚುನಾವಣೆಯೇ ಸೂಕ್ತ ವೇದಿಕೆಯಾಗಿದ್ದು, ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು.  ಈ ಮೂಲಕ ಸುಭದ್ರ ದೇಶ ಕಟ್ಟಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ ಎನ್ನುತ್ತಾರೆ ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು.
                                                                       –  ತುಕಾರಾಂರಾವ್ ಬಿ.ವಿ.,ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ.
Please follow and like us:
error

Leave a Reply

error: Content is protected !!