ವಸತಿ ಯೋಜನೆ ಫಲಾನುಭವಿಗಳನ್ನು ಕಡ್ಡಾಯವಾಗಿ ಗ್ರಾಮಸಭೆ ಮೂಲಕ ಆಯ್ಕೆ ಮಾಡಿ

– ಕೆ. ರಾಘವೇಂದ್ರ ಹಿಟ್ನಾಳ್ 
  ಸೂರು ರಹಿತ ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಹಲವಾರು ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಫಲಾನುಭವಿಗಳನ್ನು ಕಡ್ಡಾಯವಾಗಿ ಗ್ರಾಮಸಭೆ ಮೂಲಕ ಆಯ್ಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಕೆ.ಡಿ.ಪಿ. ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ವಸತಿ ರಹಿತ ಬಡ ಕುಟುಂಬಗಳಿಗೆ ಸೂರು ಕಲ್ಪಿಸಿಕೊಡಲು ಸರ್ಕಾರ ಆಶ್ರಯ, ಇಂದಿರಾ ಆವಾಸ್, ಅಂಬೇಡ್ಕರ್ ವಸತಿ, ಬಸವ ವಸತಿ ಆವಾಸ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳಡಿ ನಿಯಮಾನುಸಾರ ಅರ್ಹ ಫಲಾನುಭವಿಗಳನ್ನು ಆಯಾ ಗ್ರಾಮಸಭೆಗಳ ಮೂಲಕವೇ ಆಯ್ಕೆ ಮಾಡಬೇಕು.  ಆದರೆ ಹಲವೆಡೆ ಗ್ರಾಮಸಭೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದು, ಗ್ರಾಮ ಸಭೆ ನಡೆಸದೆ, ಫಲಾನುಭವಿಗಳನ್ನು ಆಯ್ಕೆ ಮಾಡಿದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಡೆಂಗ್ಯು ಜ್ವರ ಎಚ್ಚರ : ಜಿಲ್ಲೆಯಲ್ಲಿ ಅಲ್ಲಲ್ಲಿ ಡೆಂಗ್ಯು ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು, ಬಹಳಷ್ಟು ರೋಗಿಗಳು ಬಳ್ಳಾರಿ, ಧಾರವಾಡ, ಹುಬ್ಬಳ್ಳಿ ಮುಂತಾದ ನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.  ಹಣವಂತರಾದರೆ, ಬೇರೆ ಜಿಲ್ಲೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಾರೆ.  ಆದರೆ ಬಡ ರೋಗಿಗಳ ಗತಿಯೇನು?.  ಜಿಲ್ಲೆಯಲ್ಲಿ ಡೆಂಗ್ಯು ಜ್ವರ ರೋಗಿಗಳಿಗೆ ಚಿಕಿತ್ಸೆ ನೀಡಲು ಇರುವ ತೊಂದರೆ ಏನು ಎಂದು ಜಿ.ಪಂ. ಅಧ್ಯಕ್ಷರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಸ್ವಾಮಿ ಅವರಿಗೆ ಪ್ರಶ್ನಿಸಿದರು.  ಇದಕ್ಕೆ ಉತ್ತರಿಸಿದ ಡಿ.ಹೆಚ್.ಓ. ಅವರು, ಡೆಂಗ್ಯು ಜ್ವರ ರೋಗಕ್ಕೆ ನಿಖರವಾದ ಯಾವುದೇ ಚಿಕಿತ್ಸೆ ಅಥವಾ ಔಷಧಿ ಇಲ್ಲ.  ಶಂಕಾಸ್ಪದ ರೋಗಿಗಳ ರಕ್ತ ತಪಾಸಣೆಯ ಫಲಿತಾಂಶ ಬರಲು ಕನಿಷ್ಟ ಒಂದು ವಾರ ಬೇಕಾಗುವುದರಿಂದ, ಅಲ್ಲಿಯವರೆಗೂ ರೋಗಿಗಳು ಇಲ್ಲಿ ಚಿಕಿತ್ಸೆಗೆ ಕಾಯದೆ, ಬೇರೆ ಜಿಲ್ಲೆಗಳಿಗೆ ತೆರಳುತ್ತಿರುವುದು ಕಂಡು ಬಂದಿದೆ.  ಜಿಲ್ಲೆಯಲ್ಲಿ ಈವರೆಗೆ ೩೩೯ ಶಂಕಾಸ್ಪದ ಡೆಂಗ್ಯುಜ್ವರ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ೬೦ ಪ್ರಕರಣಗಳು ದೃಢಪಟ್ಟಿವೆ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಆಯಾ ಗ್ರಾಮ ಪಂಚಾಯತಿಯವರು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.
ಜಂಟಿ ತನಿಖೆ ನಡೆಸಿ : ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ನಿಖರ ಸಂಖ್ಯೆಯ ಕುರಿತು ಗೊಂದಲ ಉಂಟಾಗಿದೆ. ಶಿಕ್ಷಣ ಇಲಾಖೆಯ ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕೇವಲ ೨೬೦೦ ಇದ್ದರೆ, ಕಾರ್ಮಿಕ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ ೪೬೬೩ ಇದೆ.  ಇಷ್ಟೊಂದ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಲು ಹೇಗೆ ಸಾಧ್ಯ? ಎಂದು ಜಿ.ಪಂ. ಅಧ್ಯಕ್ಷರು ಸ್ಪಷ್ಟನೆ ಕೋರಿದರು.  ಈ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಮಸಿಯಪ್ಪ ಅವರು, ಜಿಲ್ಲೆಯಲ್ಲಿ ಕುರಿ ಕಾಯುವ, ದನ ಕಾಯುವ ಮಕ್ಕಳೂ ಸೇರಿದಂತೆ ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಲಾಗಿದೆ.  ಈ ಕುರಿತು ಸೂಕ್ತ ದಾಖಲಾತಿಗಳು ಇಲಾಖೆಯಲ್ಲಿದೆ ಎಂದರು.  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ಮಾತನಾಡಿ, ಕಾರ್ಮಿಕ ಇಲಾಖೆಯ ಸಮೀಕ್ಷಾ ಆಧಾರದಲ್ಲಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಇಲ್ಲ ಎಂದು ಬಿ.ಆರ್.ಸಿ./ ಸಿ.ಆರ್.ಸಿ. ಯವರೂ ಸಹ ತಿಳಿಸಿದ್ದಾರೆ.  ಆದಾಗ್ಯೂ ಇಂತಹ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ಜಿಲ್ಲೆಯಲ್ಲಿ ೬೮ ಎನ್.ಜಿ.ಓ. ಗಳನ್ನು ವಹಿಸಲಾಗಿದ್ದು, ಪ್ರತಿ ಸಂಸ್ಥೆಗೆ ೫೦ ಮಕ್ಕಳ ಗುರಿ ನೀಡಲಾಗಿದೆ.  ಆದರೆ ನಿಗದಿತ ಗುರಿ ತಲುಪಲು ಅಂತಹ ಮಕ್ಕಳು ಇಲ್ಲ ಎಂದು ಹೇಳಲಾಗುತ್ತಿದೆ ಎಂದರು.  ಈ ಗೊಂದಲವನ್ನು ಪರಿಹರಿಸಲು ಕಾರ್ಮಿಕ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಜಂಟಿಯಾಗಿ ತನಿಖೆ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಜಿ.ಪಂ. ಅಧ್ಯಕ್ಷರು ಉಭಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚೆಕ್‌ಡ್ಯಾಂ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಚೆಕ್ ಡ್ಯಾಂ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವ ಅಗತ್ಯವಿದೆ.  ಆದರೆ ಜಲಾನಯನ ಅಭಿವೃದ್ಧಿ ಇಲಾಖೆಯು ನಿಗದಿಪಡಿಸಿರುವ ಗುರಿಯು ಅತ್ಯಲ್ಪವಿದ್ದು, ಇದರಿಂದ ಪರಿಣಾಮಕಾರಿಯಾಗಿ ಅಂತರ್ಜಲ ಹೆಚ್ಚಿಸಲು ಆಗುವುದಿಲ್ಲ.  ಆದ್ದರಿಂದ ಜಿಲ್ಲೆಯಲ್ಲಿ ಕನಿಷ್ಟ ೨೫-೩೦ ಚೆಕ್ ಡ್ಯಾಂ ನಿರ್ಮಿಸಬೇಕು.  ಹೆಚ್ಚು ನೀರು ಸಂಗ್ರಹವಾಗುವಂತಹ ಸ್ಥಳಗಳನ್ನು ಗುರುತಿಸಿ, ಅಗತ್ಯ ಕ್ರಿಯಾ ಯೋಜನೆಯನ್ನು ತಯಾರಿಸಿ ಕೊಟ್ಟಲ್ಲಿ, ಇದಕ್ಕಾಗಿ ವಿಶೇಷ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿ ವಿ. ಕಮತರ್ ಅವರಿಗೆ ಸೂಚನೆ ನೀಡಿದರು.
    ಸಭೆಯಲ್ಲಿ ಭಾಗವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಇರುವಂತಹ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲಾಗುವ ವಸತಿ ನಿಲಯಗಳಿಗೆ ಬೋರ್‌ವೆಲ್ ಕೊರೆಯಿಸಲು ತಗಲುವ ವೆಚ್ಚವನ್ನು ಆಯಾ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ನಿಗದಿಪಡಿಸಲಾಗಿರುವ ಅನುದಾನದಲ್ಲಿ ನಿರ್ವಹಣಾ ವೆಚ್ಚದಡಿ ಭರಿಸಬೇಕು.  ಕೂಡಲೆ ಈ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿದಾಸರ, ಲೆಕ್ಕಾಧಿಕಾರಿ ಮಾದಿನೂರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error